ಯೂರಿಯಾ, ಪೊಟ್ಯಾಷ್‌ ಅಭಾವ: ಭತ್ತ ಬೆಳೆದ ರೈತರು ಪರದಾಟ!

-ಎಂ.ಬಿ.ರಂಗಸ್ವಾಮಿ

ಮೂಗೂರು: ಸಾಲ ಸೋಲ ಮಾಡಿ ಭತ್ತದ ನಾಟಿ ಕಾರ್ಯ ಮುಗಿಸಿದ ಬೆನ್ನಲ್ಲೇ ರೈತರು ರಾಸಾಯನಿಕ ಗೊಬ್ಬರವಾದ ಯೂರಿಯಾ ಹಾಗೂ ಪೋಟ್ಯಾಷ್‌ನ ಅಭಾವದಿಂದಾಗಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿ ಪರಿತಪಿಸುವಂತಾಗಿದೆ.

ಭತ್ತದ ನಾಟಿಯ ಸಂದರ್ಭದಲ್ಲಿ  ರಸಗೊಬ್ಬರಗಳಿಗೆ ಯಾವುದೇ ರೀತಿಯ ಅಭಾವ ಹಾಗೂ ಬೇಡಿಕೆಯ ಸಮಸ್ಯೆ ಇಲ್ಲದೆ ಕೃಷಿ ಚಟುವಟಿಕೆ ಚುರುಕಾಗಿ ನಡೆದವು. ನಂತರದ ದಿನಗಳಲ್ಲಿ ರೈತರು ಕಳೆ ಕಿತ್ತು ಭತ್ತದ ಗದ್ದೆಗಳಿಗೆ ರಸಗೊಬ್ಬರ ಹಾಕುವ ಸಮಯಕ್ಕೆ ಯೂರಿಯ ಸಿಗದೇ ಹುಡುಕಾಟದಲ್ಲಿ ತೊಡಗಿದ್ದಾರೆ.

ದಿನನಿತ್ಯ ಅಲೆದಾಟ:  ಮೂಗೂರು ಗ್ರಾಮ ಹೋಬಳಿಯ ಕೇಂದ್ರ ಸ್ಥಾನವಾಗಿದ್ದು, ಇಲ್ಲಿನ 4 ರಸಗೊಬ್ಬರ ಟ್ರೇಡರ್‌ಗಳಿಗೆ ರೈತರು ದಿನನಿತ್ಯ ಯೂರಿಯಾ ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದಾರೆ. ಮೂಗೂರು ಗ್ರಾಮ ಸಮೀಪದ ಅನ್ಯ ಜಿಲ್ಲೆಯ ಗ್ರಾಮಗಳಲ್ಲಿ ಯೂರಿಯಾ ಸುಲಭವಾಗಿ ದೊರೆಯುತ್ತಿದ್ದು, ಇಲ್ಲಿ ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಯೂರಿಯಾ ಗೊಬ್ಬರದ ಬಳಕೆ ಅನಿವಾರ್ಯವಾಗಿರುವುದರಿಂದ ರೈತರು 350-400 ರೂ. ನೀಡಿ ಖರೀದಿಸುತ್ತಿರುವುದು ಕಂಡುಬಂದಿದೆ.

ರೈತರ ಸಮಸ್ಯೆಯನ್ನು ಅರಿತರೂ ಸಕಾಲದಲ್ಲಿ ಗೊಬ್ಬರ ಪೂರೈಕೆ ಮಾಡುವಲ್ಲಿ ಕೃಷಿ ಅಕಾರಿಗಳು ವಿಫಲರಾಗಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

`ಈಗ ಭತ್ತಕ್ಕೆ ಯೂರಿಯಾ ಗೊಬ್ಬರ ಅತ್ಯಗತ್ಯವಾಗಿರುವುದನ್ನು ಮನಗಂಡು, ಯೂರಿಯಾ ಗೊಬ್ಬರದ ಕೃತಕ ಅಭಾವವನ್ನು ಸೃಷ್ಟಿಸಿ ಹೆಚ್ಚಿನ ಬೆಲೆಗೆ ಬೇರೆ ಕಡೆ ಮಾರಾಟ ಮಾಡಿ ರೈತರನ್ನು ವಂಚಿಸಲು ಕೆಲವು ರಸಗೊಬ್ಬರ ಮಾರಾಟಗಾರರು ಮುಂದಾಗಿದ್ದಾರೆ’.

-ಜಯಶಂಕರಮೂರ್ತಿ, ಮಹೇಶ್, ರೈತರು.

——-

ʻರಸಗೊಬ್ಬರ ಪೂರೈಕೆ ಸಮಸ್ಯೆಯಾಗಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ತೊಂದರೆ ಆಗದಂತೆ ನೋಡಿಕೊಂಡು ನಿಗದಿತ ದರದಲ್ಲಿ ಮಾರಾಟ ಮಾಡುವಂತೆ  ಮಾರಾಟಗಾರರಿಗೆ ಹಾಗೂ ಅಕಾರಿಗಳಿಗೆ ಸೂಚನೆ ನೀಡಲಾಗಿದೆʼ.

-ಜಯರಾಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ.

 

 

 

 

× Chat with us