ಮೈಸೂರು| ಟಿಬೆಟಿಯನ್ ಕ್ಯಾಂಪ್‌ಗೆ ನುಗ್ಗಿದ ಸಲಗ; ಕಲ್ಲು ಹೊಡೆದು ಹಿಮ್ಮೆಟ್ಟಿಸಿದ ಜನರು

ವೀರನಹೋಸಹಳ್ಳಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಮೇವನ್ನರಸಿ ಹೊರಬಂದಿದ್ದ ಸಲಗವೊಂದು ಗುರುಪುರ ಟಿಬೆಟಿಯನ್ ಕ್ಯಾಂಪಿನಲ್ಲಿ ಸಾಕಷ್ಟು ದಾಂದಲೆ ನಡೆಸಿದ್ದು, ಕ್ಯಾಂಪಿನೊಳಗೆ ಸಲಗ ನುಗ್ಗಿದ್ದರಿಂದ ಆತಂಕಗೊಂಡ ಟಿಬೆಟಿಯನ್ನರು ಕೊನೆಗೆ ಕಲ್ಲು ಹೊಡೆದು ಸಲಗವನ್ನು ಓಡಿಸಿದ್ದರೂ ಪಕ್ಕದ ಕುರುಚಲು ಕಾಡಿನಲ್ಲಿ ಸೇರಿಕೊಂಡಿದ್ದು ಆತಂಕ ಸೃಷ್ಟಿಸಿದೆ.

ವೀರನಹೊಸಹಳ್ಳಿ ವಲಯ ವ್ಯಾಪ್ತಿಯ ಸೊಳ್ಳೆಪುರ ಕಡೆಯಿಂದ ಬುಧವಾರ ಮುಂಜಾನೆ ಅರಣ್ಯ ದಾಟಿ ಹೊರ ಬಂದಿದ್ದ ಸಲಗವು ಗುರುಪುರ ಟಿಬೇಟ್ ಕ್ಯಾಂಪಿನ ಜಮೀನುಗಳಲ್ಲಿ ಬಾಳೆ. ಜೋಳದ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದೆ.

ಸಲಗವನ್ನು ಕಂಡ ಟಿಬೇಟಿಯನ್ನರು ಅಕ್ಕಪಕ್ಕದವರ ನೆರವಿನೊಂದಿಗೆ ಸಲಗವನ್ನು ಕಾಡಿಗಟ್ಟುವ ವೇಳೆ ಕ್ಯಾಂಪಿನ ಮನೆಗಳ ಬಳಿ ಧಾವಿಸಿ ಅಲ್ಲಿಯೂ ದಾಂದಲೆ ನಡೆಸಿದೆ.

ಕೊನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡ ಜನರು ಸಲಗಕ್ಕೆ ನಾಯಿಗೆ ಹೊಡೆಯುವಂತೆ ಕಲ್ಲು ಹೊಡೆದು ಹಿಮ್ಮೆಟ್ಟಿಸಿದ್ದಾರೆ. ಜನರ ಹೊಡೆತದಿಂದ ಪಕ್ಕದಲ್ಲೇ ಇರುವ ವೀರನಹೊಸಹಳ್ಳಿ ವಲಯದ ಕುರುಚಲು ಕಾಡು ಸೇರಿಕೊಂಡಿದೆ.

ವಿಷಯ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದ್ದಾರೆ. ಸಂಜೆ ವೇಳೆಗೆ ಸಲಗವನ್ನು ಕಾಡಿಗಟ್ಟುವುದಾಗಿ ಅರಣ್ಯ ಇಲಖೆ ಅಧಿಕಾರಿಗಳು ತಿಳಿಸಿದ್ದಾರೆ.

× Chat with us