ಮೈಸೂರು| ನಾಯಿ ದಾಳಿಯಿಂದ ಮೇಕೆ ರಕ್ಷಿಸಲು ಹೋಗಿ ಕೆರೆಯಲ್ಲಿ ಮುಳುಗಿ ಬಾಲಕ ಸಾವು!

ಕೆ.ಆರ್.ಪೇಟೆ:  ತಾಲ್ಲೂಕಿನ ತೆಂಡೇಕೆರೆ ಗ್ರಾಮದಲ್ಲಿ ಬಾಲಕ ತಾನು ಸಾಕಿದ್ದ ಮೇಕೆಯನ್ನು ನಾಯಿಯಿಂದ ರಕ್ಷಿಸಲು ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತೆಂಡೇಕೆರೆ ಗ್ರಾಮದ ನಿವಾಸಿ ಭೀಮೇಗೌಡರ ಪುತ್ರ ರಾಕೇಶ್ (17) ಮೃತಪಟ್ಟ ಬಾಲಕ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ ಸಾಕಿದ್ದ ಮೇಕೆಯನ್ನು ನಾಯಿಯೊಂದು ಓಡಿಸಿಕೊಂಡು ಹೋದ ಪರಿಣಾಮ ಅದನ್ನು ರಕ್ಷಿಸಲು ಹೋಗಿದ್ದಾನೆ. ಮೇಕೆಯು ನಾಯಿಯಿಂದ ರಕ್ಷಿಸಿಕೊಳ್ಳಲು ಕೆರೆಯ ನೀರಿನೊಳಗೆ ಹೋಗಿದೆ. ಮೇಕೆಯನ್ನು ರಕ್ಷಿಸಲು ರಾಕೇಶ್ ಸಹ ಕೆರೆಯೊಳಗೆ ಹೋಗಿದ್ದಾನೆ.

ಮೇಕೆಯು ಈಜಿ ಮತ್ತೊಂದು ದಡ ಸೇರಿದರೆ ಕೆರೆಯಲ್ಲಿ ಹುಲ್ಲು ಮತ್ತು ಸತ್ತೆ ಹೆಚ್ಚಾಗಿದ್ದರಿಂದ ರಾಕೇಶ್ ಕಾಲಿಗೆ ಹುಲ್ಲು ಸುತ್ತಿಕೊಂಡು ಈಜಲಾಗದೆ ನೀರಿನಲ್ಲಿ ಮುಳುಗಿ ಅಸುನೀಗಿದ್ದಾನೆ. ಕೂಡಲೇ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಅಗ್ನಿಶಾಮಕ ಠಾಣೆಯ ಅಕಾರಿ ಶಿವಣ್ಣ ನೇತೃತ್ವದ ಅಗ್ನಿಶಾಮಕ ತಂಡ ಕಾರ್ಯಾಚರಣೆ ಆರಂಭಿಸಿ ಶವವನ್ನು ಹುಡುಕುವ ಪ್ರಯತ್ನ ಮಾಡಿ ಎರಡು ಗಂಟೆಗಳ ಕಾರ್ಯಾಚರಣೆಯ ಬಳಿಕ ಶವವನ್ನು ಹೊರತೆಗೆದಿದ್ದಾರೆ.

ಘಟನೆ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

× Chat with us