ನಗರ ಪ್ರವೇಶಿಸಿದ 18 ಅಡಿ ಎತ್ತರದ ಸುಬ್ರಹ್ಮಣ್ಯ ಶಿಲಾಮೂರ್ತಿ

ಮೈಸೂರು: ನಂಜನಗೂಡು ತಾಲ್ಲೂಕಿನ ಕೌಲಂದೆ ಗ್ರಾಮದ ಗಟ್ಟವಾಡಿಯಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ೧೮ ಅಡಿ ಎತ್ತರದ ಸುಬ್ರಹ್ಮಣ್ಯ ಸ್ವಾಮಿಯ ಶಿಲಾಮೂರ್ತಿಯನ್ನು ಸೋಮವಾರ ನಗರದ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಬರಮಾಡಿಕೊಳ್ಳಲಾಯಿತು.
ಬೆಂಗಳೂರಿನ ನರಸಾಪುರ ಗ್ರಾಮದ ರಾಮನಾಥನ್ ಎಂಬವರು ಕೆತ್ತಿರುವ ಶಿಲಾಮೂರ್ತಿಯನ್ನು ಸೋಮವಾರ ಬೆಳಗಳೂರಿನಿಂದ ಮೈಸೂರಿಗೆ ತರಲಾಗಿತ್ತು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಶಿಲಾಮೂರ್ತಿಯನ್ನು ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಅವರು, ಸುಬ್ರಹ್ಮಣ್ಯಸ್ವಾಮಿಯ ಸುಂದರ ಮೂರ್ತಿಯು ಅರಮನೆ ಉತ್ತರ ದ್ವಾರದಿಂದ ಹೊರಟು ಕೌಲಂದೆ ಗ್ರಾಮದಲ್ಲಿ ಪ್ರತಿಷ್ಠಾಪನೆ ಆಗುತ್ತಿರುವುದು ಸಂತೋಷದ ಸಂಗತಿ. ಇಲ್ಲಿಂದ ಪ್ರಾರಂಭವಾದ ಎಲ್ಲ ಕಾರ್ಯಗಳು ಯಶಸ್ವಿಯಾಗುತ್ತವೆ. ಒಂದು ಗ್ರಾಮದಲ್ಲಿ ದೇವಸ್ಥಾನ ಇದ್ದರೆ ದೇವಸ್ಥಾನದಿಂದ ಮುಖಾಂತರವೇ ಊರಿನ ಅಭಿವೃದ್ಧಿಯ ಕಾರ್ಯಗಳನ್ನು ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಇಂತಹ ಬೃಹತ್ ಶಿಲಾಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವುದು ಖುಷಿ ತಂದಿದೆ. ಗಟ್ಟವಾಡಿ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ. ದೇವಾಲಯದ ಅಭಿವೃದ್ಧಿಗೆ ಬೇಕಾದ ಎಲ್ಲಾ ಅನುಕೂಲಗಳನ್ನೂ ಮಾಡಿಕೊಡುತ್ತೇನೆ ಎಂದರು.

ಗಟ್ಟವಾಡಿ ದೇವಾಲಯದ ಸುಬ್ರಹ್ಮಣ್ಯ ಸ್ವಾಮೀಜಿ ಮಾತನಾಡಿ, ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಸಾರ್ವಜನಿಕರಿಗಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಉಚಿತ ವೈದ್ಯಕೀಯ ಸೇವೆ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಪ್ರತಿಭಾ ಪುರಸ್ಕಾರ, ಅನ್ನಸಂತರ್ಪಣೆ, ಗೋಶಾಲೆ ಇತ್ಯಾದಿ ಸೇವಾ ಕಾರ್ಯಗಳು ನಿರಂತರ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ಶಾಸಕ ಎಲ್.ನಾಗೇಂದ್ರ, ಮಹಾಪೌರರಾದ ಸುನಂದಾ ಪಾಲನೇತ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ನಗರ ಬಿಜೆಪಿಯ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಗಿರಿಧರ್ ಇನ್ನಿತರರು ಭಾಗವಹಿಸಿದ್ದರು.

‘ಗಟ್ಟವಾಡಿಯಲ್ಲಿನ ಸುಬ್ರಹ್ಮಣ್ಯ ದೇವಾಲಯ ಒಂದು ಧಾರ್ಮಿಕ ಪ್ರೇಕ್ಷಣೀಯ ಸ್ಥಳ. ಅಲ್ಲಿನ ೮ ಎಕರೆ ಪ್ರದೇಶದ ೧೦೮ ಅಡಿ ಅಗಲ, 108 ಅಡಿ ಉದ್ದದ ಜಾಗದಲ್ಲಿ ೧೮ ಅಡಿ ಎತ್ತರದ ಶಿಲಾಮೂರ್ತಿ ಪ್ರತಿಷ್ಠಾಪನೆಯಾಗುುತ್ತಿದೆ. ಇದು ಬಾರತದಲ್ಲಿೆುೀಂ ಪ್ರಥಮ ಎಂಬ ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಳ್ಳಲಿದೆ. ಮೈಸೂರಿಗೆ ಬರುವ ಪ್ರವಾಸಿಗರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದಲ್ಲಿ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ’.- ಮಾ.ವಿ.ರಾಮಪ್ರಸಾದ್, ನಗರಪಾಲಿಕೆ ಸದಸ್ಯ.

× Chat with us