ನಾಳೆಯಿಂದ ಮೈಸೂರು ವಿವಿಯಲ್ಲಿ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ನಾಳೆಯಿಂದ (ನ.24ರಿಂದ) ನ. 27ರ ವರೆಗೆ ಶೈಕ್ಷಣಿಕ ವಿಡಿಯೊ ಸ್ಪರ್ಧೆ ವಿಜೇತ ಚಿತ್ರಗಳ ಪ್ರದರ್ಶನ, ಪ್ರಕೃತಿ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ ಆಯೋಜಿಸಲಾಗಿದೆ.

ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗ (ಯುಜಿಸಿ) ಮತ್ತು ಶೈಕ್ಷಣಿಕ ಸಂವಹನ ಒಕ್ಕೂಟ (ಸಿಇಸಿ) ಜಂಟಿಯಾಗಿ ಆಯೋಜಿಸಿರುವ ಈ ಸಾಕ್ಷ್ಯಚಿತ್ರೋತ್ಸವವನ್ನು ಬುಧವಾರ ಬೆಳಗ್ಗೆ 11 ಗಂಟೆಗೆ ಮೈಸೂರು ವಿವಿಯ ಕ್ರಾರ್ಡ್ ಭವನದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಉದ್ಘಾಟಿಸುವರು.

ಮೈಸೂರು ವಿವಿ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಹಾಗೂ ಸಿಇಸಿ ನಿರ್ದೇಶಕ ಪ್ರೊ.ಜಗತ್ ಭೂಷಣ್ ನಡ್ಡ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ನೀಡಿದ ಮಾಹಿತಿ ಹೀಗಿದೆ…

  • ನ.24, 25ರಂದು ಶೈಕ್ಷಣಿಕ ವಿಡಿಯೊ ಸ್ಪರ್ಧೆ ವಿಜೇತ 12 ಚಿತ್ರ ಪ್ರದರ್ಶನ ನಡೆಯಲಿದೆ. ನ.26, 27ರಂದು 17 ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ.
  • ಶೈಕ್ಷಣಿಕ ವಿಡಿಯೊ ಸ್ಪರ್ಧೆಯಲ್ಲಿ 137 ಹಾಗೂ ಸಾಕ್ಷ್ಯಚಿತ್ರಕ್ಕೆ 97 ಚಿತ್ರಗಳು ಸ್ಪರ್ಧಿಸಿದ್ದವು. ಇವುಗಳಲ್ಲಿ ಕ್ರಮವಾಗಿ 7 ಮತ್ತು 4 ಚಿತ್ರಗಳನ್ನು ಪ್ರಶಸ್ತಿಗೆ ತೀರ್ಪುಗಾರರ ಮಂಡಳಿ ಆಯ್ಕೆ ಮಾಡಿದೆ .
  • ವಿಡಿಯೋ ಸ್ಪರ್ಧೆಗೆ 25 ಸಾವಿರದಿಂದ 1 ಲಕ್ಷದವರೆಗೂ ಬಹುಮಾನ ವಿತರಿಸಲಾಗುತ್ತದೆ. ವಿಜೇತ ಸಾಕ್ಷ್ಯ ಚಿತ್ರಗಳಿಗೆ ವಿಶೇಷ ಪ್ರದರ್ಶನ, ಪ್ರಮಾಣಪತ್ರ ಹಾಗೂ ಟ್ರೋಫಿ ಜೊತೆಗೆ 50 ಸಾವಿರ ಬಹುಮಾನ ವಿತರಿಸಲಾಗುವುದು.
  • ವಿವಿಧ ಸಾಮಾಜಿಕ ಆಧರಿತ, ವಿವಿಧ ವಸ್ತುಗಳ ಬಗ್ಗೆ ಚಿತ್ರ ತಯಾರಿಕೆಗೆ ಸಿಇಸಿ ಉತ್ತೇಜನ ನೀಡುತ್ತಾ ಬರುತ್ತಿದೆ. ಕಲಿಯುವವರು ಸಮಗ್ರವಾದ ರೀತಿಯನ್ನು ತಮ್ಮದಾಗಿಸಿಕೊಂಡು ವಿವಿಧ ವಿಷಯಗಳನ್ನು ಅರಿತು ಚಿತ್ರ ತಯಾರಿಸುವುದನ್ನು ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶ
  • ಸಾಕ್ಷ್ಯಚಿತ್ರೋತ್ಸವ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ.‌ ಮಕ್ಕಳ‌ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆ.
  • ಮಾನಸಗಂಗೋತ್ರಿಯ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ (ಇಎಂಆರ್‌ಸಿ) ನಿರ್ದೇಶಕ ಪ್ರೊ.ಎಚ್.ರಾಜಶೇಖರ್, ಚಿತ್ರೋತ್ಸವ ಸಂಯೋಜಕ ಡಾ.ಸುನಿಲ್ ಮೆಹ್ರು ಹಾಜರಿದ್ದರು.