ಇದ್ದಲ್ಲೇ ಪೊಲೀಸ್ ಸೇವೆ ಪಡೆಯಬೇಕೆ? ಸೇವಾ ಸಿಂಧು ವೆಬ್‌ತಾಣದಲ್ಲಿ ಅರ್ಜಿ ಸಲ್ಲಿಸಿದ್ರೆ ಕೆಲಸ ಸಲೀಸು!

(ಸಾಂದರ್ಭಿಕ ಚಿತ್ರ)

ಮೈಸೂರು: ಪೊಲೀಸ್ ಠಾಣೆ ಎಂದರೆ ಕೆಲವರಿಗೆ ಇಲ್ಲದ ಭಯ ಕಾಡುತ್ತದೆ. ಕೇವಲ ಅಪರಾಧ ಪ್ರಕರಣಗಳಿಗಷ್ಟೇ ಠಾಣೆಯ ಸೇವೆ ಇದೆ ಎಂಬುದರ ಹೊರತಾಗಿ ನಿಜಕ್ಕೂ ಜನಸ್ನೇಹಿ ಪೊಲೀಸರಿಂದ ಆಗಬೇಕಿರುವ ಕೆಲಸಗಳು ಯಾವುವು ಎಂಬುದನ್ನು ಕೆದಕಿದರೆ ಬೆಟ್ಟದಷ್ಟು ಸಿಗುತ್ತವೆ. ಅವೆಲ್ಲವನ್ನೂ ನೀವು ಪೊಲೀಸ್ ಠಾಣೆಯ ಮೆಟ್ಟಿಲೇರದೆ, ಅವರೂ ನಿಮ್ಮ ಮನೆ ಬಾಗಿಲಿಗೆ ಬಾರದೆಯೂ ಪೂರ್ಣ ಕೆಲಸ ಮಾಡಿಕೊಡುವಂತಹ ಆನ್‌ಲೈನ್ ಸೇವೆ ಲಭ್ಯವಿದೆ.

ಸರ್ಕಾರದಿಂದ ಆಗಬೇಕಿರುವ ಕೆಲಸಗಳಿಗೆ ನಿಗದಿತ ಅವಧಿ ಮಿತಿಗೊಳಿಸಿ, ಸರಾಗವಾಗಿ ಕೆಲಸ ಮಾಡಿಕೊಡಲು `ಸೇವಾ ಸಿಂಧು’ ಸೇವೆ ಆರಂಭಿಸಲಾಗಿದೆ. ಇದರೊಳಗೆ ಪೊಲೀಸ್ ಸೇವೆಗಳನ್ನೂ ಸೇರಿಸಲಾಗಿದೆ. http://www.sevasindhu.karnataka.gov.in/Sevasindhu/DepartmentServicesKannada

ಲಿಂಕ್ ಬಳಸಿ ಸರ್ಕಾರ ನಿಗದಿಪಡಿಸಿರುವ ಶುಲ್ಕ ಪಾವತಿಸಿ ಸೇವೆ ಪಡೆದುಕೊಳ್ಳಬಹುದು.

ಯಾವ ಯಾವ ಸೇವೆಗಳು ಲಭ್ಯ?

ನಿಮ್ಮ ಮನೆಗೆ ಬರುವ ಮನೆಗೆಲಸದವರು ಅಥವಾ ಗೃಹ ನಿರ್ವಹಣೆಗಾರರ ಪೂರ್ವಾಪರ ಪರಿಶೀಲಿಸಿ ಪ್ರಮಾಣ ಪತ್ರ ಪಡೆದುಕೊಳ್ಳಬಹುದು. ಸಂಸ್ಥೆಗಳು ಅಥವಾ ಕಂಪೆನಿಗಳಿಗೆ ಪೊಲೀಸ್ ಪರಿಶೀಲನೆ ಪ್ರಮಾಣ ಪತ್ರ, ಸರ್ಕಾರಿ ಸಂಸ್ಥೆ, ಸಾರ್ವಜನಿಕ ಉದ್ದಿಮೆಗಳ ಸಂಸ್ಥೆಗಳಲ್ಲಿ ಅಭ್ಯಾಸಾವಧಿ (ಅಪ್ರೆಂಟಿಶಿಪ್) ತರಬೇತುದಾರರು, ದಿನಗೂಲಿ ನೌಕರರ ಪೂರ್ವಾಪರ ಪರಿಶೀಲನಾ ಪ್ರಮಾಣಪತ್ರ, ವಿಮಾನ ನಿಲ್ದಾಣಗಳಲ್ಲಿ ಕೂಲಿ, ಲೋಡರ್, ವರ್ಗ ಐವಿ ಭದ್ರತಾ ಸಿಬ್ಬಂದಿ, ಮೇಲ್ವಿಚಾರಕರ ಪೂರ್ವಾಪರ ಪರಿಶೀಲನಾ ಪ್ರಮಾಣಪತ್ರ (ವೈಯಕ್ತಿಕ ಅರ್ಜಿದಾರರು ಮಾತ್ರ), ಮದುವೆ ಸಂಬಂಧ – ಪೂರ್ವಗತ ಪರಿಶೀಲನೆಗಾಗಿ ಪೊಲೀಸ್ ಪರಿಶೀಲನೆ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ನೇರವಾಗಿ ತಮ್ಮ ಪೂರ್ವಾಪರ ಪರಿಶೀಲನಾ ಪ್ರಮಾಣಪತ್ರ, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರಕ್ಕಾಗಿ ಅರ್ಜಿ (ವೀಸಾ/ವಲಸೆ/ಪಿಆರ್/ಗ್ರೀನ್ ಕಾರ್ಡ್/ಇತರೆ), ಉದ್ಯೋಗ ಪರಿಶೀಲನೆಗಾಗಿ, ದೂರು ದಾಖಲಾತಿಗಾಗಿ, ಹಿರಿಯ ನಾಗರಿಕರ ನೋಂದಣಿಗೆ, ಬೀಗ ಹಾಕಿದ ಮನೆಯನೋಂದಣಿಗೆ, ಆಂಪ್ಲಿಫೈಡ್ ಸೌಂಡ್ ಸಿಸ್ಟಮ್ಸ್ ಪರವಾನಗಿಗಾಗಿ, ಮನರಂಜನಾ ಪರವಾನಗಿಗಾಗಿ, ಶಾಂತಿಯುತ ಸಭೆ ಮತ್ತು ಮೆರವಣಿಗೆ ಮಾಡಲು ಅನುಮತಿಗಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿತ ಅವಧಿಯೊಳಗೆ ಈ ಸೇವೆಗಳನ್ನು ಸುಲಭವಾಗಿ ಪಡೆಯಬಹುದು.

ಈ ಸೇವೆಗಳೂ ಆನ್‌ಲೈನ್‌ನಲ್ಲೇ ಲಭ್ಯ

*ಭಾರತಕ್ಕೆ ಹಿಂದಿರುಗಲು ನಿರಾಕ್ಷೇಪಣಾ ಪತ್ರ

* ಪೆಟ್ರೋಲ್ ಬಂಕ್, ಹೋಟೆಲ್, ಗ್ಯಾಸ್ ಏಜೆನ್ಸಿ ಇತ್ಯಾದಿಗಳಿಗೆ ನಿರಾಕ್ಷೇಪಣಾ ಪತ್ರ

* ಮೊಬೈಲ್ ಅಥವಾ ದಾಖಲೆಗಳು ಕಳವಾದ ಬಗ್ಗೆ ದೂರು ನೀಡಬಹುದು

* ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ಪ್ರಮಾಣಪತ್ರ ಪಡೆಯಬಹುದು

* ಪೆಟ್ರೋಲಿಯಂ, ಡೀಸೆಲ್ ಮತ್ತು ನಾಫ್ತಾ ಮಾರಾಟ ಮತ್ತು ಸಾರಿಗೆ ಸ್ಥಾಪನೆಗೆ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಬಹುದು

× Chat with us