ನಮ್ಮ ಮೈಸೂರ ದಸರಾ 2024

ರೈತ ದೇಶದ ಅಭಿವೃದ್ದಿ ಸಂಕೇತ: ಡಿಸಿ ಕುಮಾರ

ಶ್ರೀರಂಗಪಟ್ಟಣ: ರೈತರು ದೇಶದ ಅಭಿವೃದ್ಧಿಯ ಸಂಕೇತವಾಗಿದ್ದಾರೆ. ಪ್ರತಿಯೊಬ್ಬರು ರೈತರಿಗೆ ಸ್ಪಂದಿಸಿ, ಉತ್ತೇಜಿಸಿ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಶ್ರೀರಂಗಪಟ್ಟಣ ದಸರಾ ಅಂಗವಾಗಿ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ ಆವರಣದಲ್ಲಿರುವ ಶ್ರೀರಂಗ ವೇದಿಕೆಯಲ್ಲಿ ನಡೆದ ರೈತ ದಸರಾ  ಕುರಿತು ಭಾನುವಾರ ಮಾತನಾಡಿದ ಅವರು, ದಸರಾ ಕಾರ್ಯಕ್ರಮ 4 ದಿನಗಳ ಕಾಲ ಆಚರಿಸುತ್ತಿದ್ದು, ಇದರ ಅಂಗವಾಗಿ ಇಂದು ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಹಾಗೂ ರೈತರಿಗೆ ಸಂಬಂಧಪಟ್ಟಂತಹ ವಿಷಯಗಳ ಬಗ್ಗೆ ನುರಿತ ವಿಜ್ಞಾನಿ ಹಾಗೂ ಅನುಭವಿಗಳಿಂದ ಹೆಚ್ಚು ವಿಚಾರಗಳನ್ನು ರೈತರಿಗೆ ತಿಳಿಸಿ ಕೊಡುವ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಮಾಡಲಾಗಿದೆ. ಮಂಡ್ಯ ಜಿಲ್ಲೆಯು ಕೃಷಿ ಪ್ರಧಾನವಾಗಿದ್ದು, ಪ್ರಸ್ತುತ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಈ ಒಂದು ವೇದಿಕೆಯಲ್ಲಿ ಅರಿವನ್ನು ಮೂಡಿಸಲಾಗುತ್ತಿದೆ ಎಂದರು.

ಮಂಡ್ಯದಲ್ಲಿ ಕಬ್ಬು ಪ್ರಮುಖವಾದ ಬೆಳೆಯಾಗಿದೆ. ಜೊತೆಗೆ ವಾಣಿಜ್ಯ ಬೆಳೆಯಾಗಿದ್ದು, ಹೆಚ್ಚು ರೈತರು ಕಬ್ಬಿನ ಬೆಳೆಗೆ ಅವಲಂಬಿತರಾಗಿದ್ದಾರೆ. ವಿಚಾರಗೋಷ್ಠಿಯಲ್ಲಿ ಕಬ್ಬಿನ ಬೆಳೆಯಲ್ಲಿ ಬೇರು ಹುಳುವಿನ ನಿರ್ವಹಣೆ ಬಗ್ಗೆ ತಿಳಿಸಲಾಗುತ್ತದೆ. ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಹಾಗೂ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ. ಆದ್ದರಿಂದ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ರೈತ ಹಾಗೂ ಸೈನಿಕ ಇವರಿಬ್ಬರು ಶಕ್ತಿಯು ಒಂದೇ. ಸೈನಿಕರು ದೇಶದ ಗಡಿ ಭಾಗದಲ್ಲಿ ನಿಂತು ದೇಶವನ್ನು ರಕ್ಷಣೆ ಮಾಡಿದರೆ ರೈತರು ನಮ್ಮ ನಡುವೆಯೇ ಇದ್ದುಕೊಂಡು ಇಡಿ ದೇಶದ ಪ್ರತಿಯೊಬ್ಬರಿಗೂ ಅನ್ನದಾನ ಮಾಡುತ್ತಾರೆ. ಈ ನಿಟ್ಟಿನಲ್ಲಿ ರೈತರ ಶಕ್ತಿಯನ್ನು ಯಾವುದೇ ಕಾರಣಕ್ಕೂ ಅಳೆಯಲು ಸಾಧ್ಯವಿಲ್ಲ ಎಂದು ಹೇಳಿರು.

ರೈತರನ್ನು ನಾವು ಸ್ವಾವಲಂಬಿಗಳನ್ನಾಗಿಸಲು ಅವರು ಬೆಳೆದ ಬೆಳೆಗೆ ಸೂಕ್ತ ದರವನ್ನು ನೀಡುವ ಹಾಗೂ ಅವರ ಯಾವುದೇ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಹೋಗಲಾಡಿಸಿ ಪ್ರಗತಿಪರ ರೈತರನ್ನಾಗಿಸುವ ಬಗ್ಗೆ ಚಿಂತಿಸಬೇಕಾಗಿದೆ ಎಂದರು.

ಇಂದು ನಗರವಾಸಿಗಳು ಸಂತೋಷವಾಗಿ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣಕರ್ತರು ರೈತರಾಗಿದ್ದಾರೆ. ಅವರ ಪರಿಶ್ರಮಕ್ಕೆ ಬೆಲೆಯನ್ನು ಕಟ್ಟಲಾಗುವುದಿಲ್ಲ. ರೈತರು ಕೃಷಿಯಲ್ಲಿನ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಹೊಸ ತಳಿಗಳನ್ನು ಬಳಸಿಕೊಳ್ಳಬೇಕು ಎಂದರು.

ವಿಜ್ಞಾನದ ನೆಲಗಟ್ಟಿನಲ್ಲಿ ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ರೈತರ ಪಾತ್ರ ಬಹುಮುಖ್ಯವಾದುದರಿಂದ ನಾವೆಲ್ಲರೂ ಅವರನ್ನು ಮನಪೂರ್ವಕವಾಗಿ ಗೌರವಿಸಿ, ಸ್ಮರಿಸಿ, ಪೂಜಿಸಿ ಸಹಕರಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಇಂದು ಜರುಗುತ್ತಿರುವ ಕೃಷಿ ದಸರಾ ಕಾರ್ಯಕ್ರಮವು ಬಹಳ ಉಪಯುಕ್ತವಾಗಿದೆ. ನಮ್ಮ ದೇಶದ ಮುಖ್ಯ ಕಸುಬು ಕೃಷಿಯಾಗಿದ್ದು, ಕೃಷಿಯಲ್ಲಿಯೇ ಸಾಕಷ್ಟು ರೈತರು ತಮ್ಮನ್ನು ತಾವು ತೊಡಗಿಸಿಕೊಂಡು ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ ಎಂದರು.

ನಾನು ಕೃಷಿ ಆಧಾರಿತ ಕುಟುಂಬದಲ್ಲಿ ಜನಿಸಿ, ಒಬ್ಬ ಕೃಷಿ ವಿದ್ಯಾರ್ಥಿಯಾಗಿದ್ದೇನೆ. ಕೃಷಿಯಲ್ಲಿ ಪದವಿ ಮುಗಿಸಿ, ನಂತರ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಎಂ ಎಸ್ ಸಿ ಯಲ್ಲಿ ಕಬ್ಬು ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದೆ. ಕೃಷಿಯಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಯಾವ ಮಣ್ಣಿನಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ಎಂಬುದರ ಬಗ್ಗೆ ರೈತರಿಗೆ ತಿಳಿಸುವ ಕೆಲಸವನ್ನು ಕೃಷಿ ಇಲಾಖೆಯು ಮಾಡುತ್ತಿದೆ. ಜೊತೆಗೆ ರೈತರಿಗೆ ಸರ್ಕಾರದಿಂದ ಸಿಗುವ ಯೋಜನೆಗಳನ್ನು ತಲುಪಿಸುತ್ತಿದೆ ಎಂದರು.

ರೈತರು ಕೃಷಿ ಬೆಳೆಯಲ್ಲಿ ಕಂಡುಬರುವಂತಹ ಕೀಟಬಾಧೆ ತಡೆಯಲು ಯಾವ ಔಷಧಿಗಳನ್ನು ಸಿಂಪಡಿಸಬೇಕು ಎಂದು ಸೂಕ್ತವಾದ ಮಾಹಿತಿಯನ್ನು ಕೃಷಿ ಇಲಾಖೆಯಿಂದ ಪಡೆದುಕೊಳ್ಳಬೇಕು. ಜೊತೆಗೆ ವಿಶ್ವವಿದ್ಯಾನಿಲಯಗಳಲ್ಲಿ ಕೃಷಿಯ ಬಗ್ಗೆ ನಡೆಯುವ ಸಂಶೋಧನೆಗಳ ಮಾಹಿತಿಯನ್ನು ರೈತರಿಗೆ ನೀಡಿದಾಗ ಅವರು ಹೆಚ್ಚಿನ ಬೆಳೆ ಬೆಳೆಯಲು ಹಾಗೂ ಬೆಳೆಯಲ್ಲಿ ಇಳುವರಿ ಪಡೆಯಲು ಸಹಾಯವಾಗುತ್ತದೆ ಎಂದರು.

ರಾಸಾಯನಿಕ ಗೊಬ್ಬರಗಳನ್ನು ರೈತರು ಕೃಷಿಯಲ್ಲಿ ಬಳಸದೆ ಸಾವಯವ ಗೊಬ್ಬರಗಳನ್ನು ಬೆಳೆಸಬೇಕು. ಮಿಶ್ರ ಬೆಳೆ ಬೆಳೆದರೆ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಕೃಷಿಯಲ್ಲಿನ ಸರಿಯಾದ ಮಾಹಿತಿಗಳನ್ನು ಪಡೆದಾಗ ಮಾತ್ರ ರೈತರು ಕೃಷಿಯಲ್ಲಿ ಸಾಧನೆ ಮಾಡಬಹುದು ಎಂದರು.

ಬೆಂಗಳೂರು ಜಿ.ಕೆ.ವಿ.ಕೆ, ಕೃಷಿ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರಜ್ಞರಾದ ಡಾ.ಡಿ ರಾಜಣ್ಣ ಅವರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಕಬ್ಬು ನಮ್ಮ ಮಂಡ್ಯ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ವಾರ್ಷಿಕವಾಗಿ 35 ರಿಂದ 40 ಸಾವಿರ ಹೆಕ್ಟೇ‌ರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು ಈ ಬೆಳೆಯಲ್ಲಿ ಬೇರುಹುಳುಗಳು ಹೆಚ್ಚು ಮಾರಕವಾಗಿವೆ ಎಂದು ಹೇಳಿದರು.

ಬೇರುಹುಳುಗಳಿಂದಾಗಿ ಶೇಕಡ 40 ರಿಂದ 80ರಷ್ಟು ಬೆಳೆ ನಷ್ಟ ಉಂಟಾಗಬಹುದು ಜೊತೆಗೆ ಸಕ್ಕರೆ ಇಳುವರಿ ಸಹ ಕುಂಠಿತವಾಗುತ್ತದೆ. ಇದರಿಂದ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗುತ್ತಾರೆ. ಬೇರುಹುಳುಗಳು ತಮ್ಮ ಜೀವಿತಾವಧಿಯ ಬಹುತೇಕ ಸಮಯವನ್ನು ಭೂಮಿಯ ಒಳಗೆಯೇ ಕಳೆಯುವುದರಿಂದ ಇವುಗಳ ಬಾಧೆ ರೈತರಿಗೆ ಮೇಲ್ನೋಟಕ್ಕೆ ತಿಳಿಯುವುದಿಲ್ಲ. ಗದ್ದೆಗಳು ತೀವ್ರ ಬಾಧೆಗೊಳಗಾಗಿ ಬೆಳೆ ಬಾಡಿ, ಒಣಗಲಾರಂಭಿಸಿದಾಗ ಬಾಧೆ ಅರಿವಿಗೆ ಬರುತ್ತದೆ ಎಂದರು.

ಬೇರುಹುಳುವಿನ ಪರಿಚಯ:-
ರಾಜ್ಯದಲ್ಲಿ ಕಬ್ಬು ಬೆಳೆಯನ್ನು ಬಾಧಿಸುವ ಬೇರುಹುಳುವಿನ ವೈಜ್ಞಾನಿಕ ಹೆಸರು ಹೊಲೊಟ್ರೈಕಿಯ ಸೆರ್ರಟ. ಈ ಜಾತಿಯ ಬೇರುಹುಳು ಕಬ್ಬು, ನೆಲಗಡಲೆ, ಜೋಳ, ಮೆಕ್ಕೆಜೋಳ, ತರಕಾರಿ ಬೆಳೆಗಳು ಇನ್ನೂ ಅನೇಕ ಬಗೆಯ ಸಸ್ಯಗಳ ಬೇರನ್ನು ತಿನ್ನುತ್ತದೆ.

ಬೇರು ಹುಳುವಿನ ಗುರುತಿಸುವಿಕೆ:-
ಸಾಮಾನ್ಯವಾಗಿ ಗೊಬ್ಬರ ಗುಂಡಿಗಳಲ್ಲಿ ಅಥವಾ ಗೊಬ್ಬರ ಹಾಕಿದ ಗದ್ದೆಯನ್ನು ಅಗೆಯುವಾಗ ಸಿಕ್ಕುವ ಗೊಬ್ಬರದ ಹುಳುವನ್ನೇ ಗೊಣ್ಣೆಹುಳು ಅಥವಾ ಬೇರುಹುಳು ಎಂದು ರೈತರು ಭಾವಿಸಿದ್ದಾರೆ. ಗೊಬ್ಬರದಹುಳು ಹಾಗೂ ಬೇರುಹುಳುಗಳು ಬಣ್ಣ ಮತ್ತು ಆಕಾರದಲ್ಲಿ ಒಂದೇ ರೀತಿ ಇರುದರಿಂದ ಈ ತಪ್ಪು ಭಾವನೆ ಬಂದಿದೆ. ಆದರೆ ಗೊಬ್ಬರದ ಹುಳು ಕೇವಲ ಗೊಬ್ಬರವನ್ನು ತಿಂದು ಜೀವಿಸುವುದು. ಬೇರುಹುಳು ಸಸ್ಯದ ಜೀವಂತ ಬೇರನ್ನು ತಿಂದು ಜೀವಿಸುತ್ತದೆ.

ಬೇರುಹುಳುವಿನ ಬಾಧೆಯ ಲಕ್ಷಣಗಳು:-
ಕಬ್ಬಿನ ಗರಿಗಳು ಹಳದಿಯಾಗಿ ಒಣಗುವುದು ಬೇರುಹುಳುವಿನ ಬಾಧೆಯ ಮೊದಲ ಸೂಚನೆಯಾಗಿರುತ್ತದೆ. ಹಾನಿಗೊಳಗಾದ ಗಿಡಗಳು ಪೂರ್ಣ ಬೆಳೆಯದೆ ಗಿಡ್ಡವಾಗುತ್ತವೆ. ತೀವ್ರವಾಗಿ ಹಾನಿಗೊಳಗಾದ ಗಿಡಗಳು ಸಂಪೂರ್ಣವಾಗಿ ಸೊರಗುತ್ತವೆ. ಇಂತಹ ಗಿಡಗಳನ್ನು ಕೈಯಿಂದ ಸುಲಭವಾಗಿ ಬುಡ ಸಮೇತ ಕೀಳಬಹುದು.

ಈ ಲಕ್ಷಣಗಳು ಬೇರುಹುಳುವಿನ ಇರುವಿಕೆಯನ್ನು ಸೂಚಿಸುತ್ತವೆ. ಆದರೆ ಬೇರೆ ಕಾರಣಗಳಿಂದ ಬೇರುಗಳು ಸತತವಾಗಿ ಸಾಯುತ್ತಿದ್ದರೂ ಸಹ ಇಂತಹ ಲಕ್ಷಣಗಳನ್ನು ಕಾಣಬಹುದು. ಆದ್ದರಿಂದ ಇಂತಹ ಗಿಡಗಳ ಬುಡವನ್ನು ಶೋಧಿಸಿದಾಗ ಬೇರುಗಳ ಪಾರ್ಶದಲ್ಲಿ ಬೆಳ್ಳನೆಯ, ತೋರು ಬೆರಳು ಗಾತ್ರದ, ಅರ್ಧಚಂದ್ರಾಕಾರದ ಮೂರು ಜೊತೆ ಕಾಲುಗಳುಳ್ಳ ಹುಳುಗಳನ್ನು ಕಂಡರೆ ಮಾತ್ರ ಅದು ಬೇರು ಹುಳುಗಳ ಬಾಧೆ ಎಂದು ರೈತ ಬಾಂಧವರಿಗೆ ತಿಳಿಸಿದರು.

ರೈತರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ವತಿಯಿಂದ 2023-24 ನೇ ಸಾಲಿನಲ್ಲಿ ತಾಲೂಕಿನ 6 ಪ್ರಗತಿಪರ ರೈತರಿಗೆ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ ಮಾಡಿ ಪ್ರಮಾಣ ಪತ್ರ ವಿತರಣೆ ಮಾಡಿ ಸನ್ಮಾನಿಸಲಾಯಿತು.

ಜಿಲ್ಲಾ ಮಟ್ಟದಲ್ಲಿ ಅರಕೆರೆ ಹೋಬಳಿ, ಅರಕೆರೆ ಗ್ರಾಮದ ಸಿ.ಕೆ ಶಿವಣ್ಣ ಬಿನ್ ಕೃಷ್ಣೇಗೌಡ, ತಾಲೂಕು ಮಟ್ಟದಲ್ಲಿ ಅರಕೆರೆ ಹೋಬಳಿ ಗಾಮನಹಳ್ಳಿ ಗ್ರಾಮದ ಬಸವಯ್ಯ ಬಿನ್ ಬಸವಯ್ಯ, ಕಸಬಾ ಹೋಬಳಿ ಹೆಬ್ಬಾಡಿ ಗ್ರಾಮದ ಜಯರಾಮೇಗೌಡ ಬಿನ್ ಕುಳ್ಳೇಗೌಡ, ಚಂದಗಾಲು ಗ್ರಾಮದ ಕುಮಾರಸ್ವಾಮಿ ಬಿನ್ ಜಯರಾಮಯ್ಯ, ಕೆ ಶೆಟ್ಟಿಹಳ್ಳಿ ಹೋಬಳಿ ಎಂ ಶೆಟ್ಟಿಹಳ್ಳಿ ಗ್ರಾಮದ ಬದ್ರುನ್ನೀಸಾ ಕೋಂ ಅನ್ವರ್ ಜೀ, ಕೂಡಲಕುಪ್ಪೆ ಗ್ರಾಮದ ಶಂಕರನಾರಾಯಣ ಬಿನ್ ಲಿಂಗಯ್ಯ ಮತ್ತು ರೇಷ್ಮೆ ಇಲಾಖೆ ವತಿಯಿಂದ ಅತ್ಯುತ್ತಮ ರೇಷ್ಮೆ ಬೆಳೆಗಾರರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಅಶೋಕ ವಿ ಎಸ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಿ. ಪುಟ್ಟಸ್ವಾಮಿ, ಪಾಂಡವಪುರ ಉಪ ವಿಭಾಗ ಉಪ ಕೃಷಿ ನಿರ್ದೇಶಕ ಭಾನು ಪ್ರಕಾಶ್, ಮುನೇಗೌಡ ಸೇರಿದಂತೆ ಇನ್ನಿತರ ವಿಜ್ಞಾನಿಗಳು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

30 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago