ನಮ್ಮ ಮೈಸೂರ ದಸರಾ 2024

ಅದ್ಧೂರಿ ಜೊತೆಗೆ ಅಚ್ಚುಕಟ್ಟಾದ ದಸರಾ: ಜಿಲ್ಲಾಡಳಿತದ ಶ್ರಮ ಮತ್ತು ಶಿಸ್ತಿಗೆ ಸಿಎಂ ಅಭಿನಂದನೆ

ಅಂಬಾರಿ ಏರಿದ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಭಾಗ್ಯ: ರಾಜ್ಯದ ಜನತೆಗೆ ಕೃತಜ್ಞತೆ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಅದ್ಧೂರಿ ಮತ್ತು ಅಚ್ಚುಕಟ್ಟಾದ ದಸರಾ ಆಯೋಜಿಸಿದ ಜಿಲ್ಲಾಡಳಿತ ಶ್ರಮ ಮತ್ತು ಶಿಸ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಅಲ್ಲಿಸಿದ್ದಾರೆ.

ಕೋಟ್ಯಾಂತರ ಕನ್ನಡಿಗರ ಸಾಕ್ಷಿಯಾಗಿ ತಾಯಿ ಚಾಮುಂಡಿಗೆ ಪುಷ್ಪಾರ್ಚನೆ ಅರ್ಪಿಸಿದ ಬಳಿಕ ಮುಖ್ಯಮಂತ್ರಿಗಳು ವಿಜ್ರಂಭಣೆಯ ದಸರಾ ವೈಭವವನ್ನು ಮೆಚ್ಚಿಕೊಂಡು ಜಿಲ್ಲಾಡಳಿತಕ್ಕೆ ಅಭಿನಂದಿಸಿದರು.

ಅಂಬಾರಿ ಏರಿದ ತಾಯಿ ಚಾಮುಂಡಿಗೆ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿ ಪುಷ್ಪಾರ್ಚನೆ ಅರ್ಪಿಸಿದ ಭಾಗ್ಯ ತಮ್ಮ ಪಾಲಿಗೆ ಒದಗಿ ಬಂದಿದ್ದಕ್ಕಾಗಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಳೆದ ವರ್ಷ ಭೀಕರ ಬರಗಾಲದ ಕಾರಣದಿಂದ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದ ಸರಳ ದಸರಾವನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿ, ನಿರೀಕ್ಷಿತ ಮಟ್ಟಕ್ಕಿಂತ ಉತ್ತಮ ಬೆಳೆ ಆಗುವ ಲಕ್ಷಣಗಳೂ ಸ್ಪಷ್ಟವಾಗಿವೆ. ಸಾಲದ್ದಕ್ಕೆ ಈ ಬಾರಿ ಜಿಎಸ್ ಟಿ ಮತ್ತು ತೆರಿಗೆ ಸಂಗ್ರಹವೂ ನಿರಾಸೆ ಮೂಡಿಸಿಲ್ಲ. ಇದು ರಾಜ್ಯದ ಆರ್ಥಿಕತೆ ಆರೋಗ್ಯಕರವಾಗಿ ಏರುಗತಿಯಲ್ಲಿ ಇರುವುದಕ್ಕೆ ಸಾಕ್ಷಿಯಾಗಿದೆ. ಎಲ್ಲವೂ ಒಟ್ಟಾಗಿ ದಸರಾ ಸಂಭ್ರಮವನ್ನು ಹೆಚ್ಚಿಸಿದೆ ಎನ್ನುವ ಸಂತೋಷವನ್ನೂ ವ್ಯಕ್ತಪಡಿಸಿದ್ದಾರೆ.

ದಸರಾ ಪೂರ್ವಭಾವಿ ಸಭೆಗಳಲ್ಲಿ ಕೊಟ್ಟ ಸೂಚನೆ ಮತ್ತು ತೆಗೆದುಕೊಂಡ ನಿರ್ಣಯಗಳನ್ನು ಜಿಲ್ಲಾಡಳಿತ ಶಿಸ್ತುಬದ್ದವಾಗಿ ಜಾರಿಗೊಳಿಸಿದೆ. ಇದೇ ಮೊದಲ ಬಾರಿಗೆ ಯುವ ದಸರಾವನ್ನು ಚಾಮುಂಡಿ ತಪ್ಪಲಿನ ಉತ್ತನಹಳ್ಳಿಯಲ್ಲಿ ಸಂಘಟಿಸಿ ಲಕ್ಷ ಲಕ್ಷ ಮಂದಿ ಸಂಭ್ರಮಿಸಿದರು. ಶಾಸ್ತ್ರೀಯ ಸಂಗೀತ ಪ್ರಕಾರಗಳಿಂದ, ಸಮಕಾಲೀನ ಸಂಗೀತವನ್ನೂ, ಶಾಸ್ತ್ರೀಯ ನೃತ್ಯದಿಂದ ಸಮಕಾಲೀನ ನೃತ್ಯ ಪ್ರಕಾರಗಳು, 20 ಕ್ಕೂ ಹೆಚ್ಚು ತಂಡಗಳು, ನೂರಾರು ಕಲಾವಿದರು ಯುವ ದಸರಾ ಸಡಗರವನ್ನು ಹೆಚ್ಚಿಸಿದ್ದಾರೆ.

ಹಾಗೆಯೇ ದಸರಾದ ಮುಖ್ಯ ಸಾಂಸ್ಕೃತಿಕ ವೇದಿಕೆಯಲ್ಲೂ ಸಾಹಿತ್ಯ, ಸಂಗೀತ, ಕಲೆ, ನೃತ್ಯಗಳು ಮೇಳೈಸಿ ಖುಷಿ ಕೊಟ್ಟಿದೆ.

ಒಟ್ಟಾರೆಯಾಗಿ ದಸರಾ ಉದ್ಘಾಟನೆಯಿಂದ ಅಂಬಾರಿಯ ತಾಯಿ ಚಾಮುಂಡಿಗೆ ಪುಷ್ಪಾರ್ಚನೆವರೆಗೂ ಯಾವುದೇ ಅಡಚಣೆಗಳು ಇಲ್ಲದಂತೆ ಒಂಬತ್ತು ದಿನಗಳ ಕಲಾ ಸಾಂಪ್ರದಾಯಿಕ ದಸರಾ ಸಂಭ್ರಮದಿಂದ ಮುಗಿದಿದೆ.

ಪಂಜಿನ ಮೆರವಣಿಗೆ ಕೂಡ ಹಳೆಯ ಮತ್ತು ಆಧುನಿಕತೆಯ ಮಿಶ್ರಣವಾಗಿದ್ದು ಈ ಬಾರಿಯ ವಿಶೇಷ.‌ ಅತ್ಯಂತ ಪುರಾತನವಾದ ಪಂಜಿನ ಬೆಳಕಿನ ಜೊತೆಗೆ ಆಕಾಶದಲ್ಲಿ ರಚಿಸಿದ ಅತ್ಯಂತ ಆಧುನಿಕವಾದ 1500 ಡ್ರೋನ್ ಗಳ ಬೆಳಕಿನ ರಂಗೋಲಿ ನೆರೆದಿದ್ದವರನ್ನು ವಿಸ್ಮಯದ ಜೊತೆಗೆ ರಂಜಿಸಿದ್ದಕ್ಕೂ ಸಿಎಂ ಜಿಲ್ಲಾಡಳಿತಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ದಸರಾ ಹೊತ್ತಲ್ಲಿ ಕಾನೂನು ಸುವ್ಯವಸ್ಥೆಗೆ ಎಲ್ಲೂ ಧಕ್ಕೆ ಆಗದಂತೆ, ಸಂಚಾರ ನಿರ್ವಹಣೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ತೋರಿಸಿದ ಸಂಯಮ, ಶ್ರಮ ಫಲ ನೀಡಿದೆ. ಅನಿವಾರ್ಯ ಕಾರಣಗಳಿಂದ, ಏಕಾ ಏಕಿ ಮೈಸೂರಿಗೆ ರಾಜ್ಯದ ಮೂಲೆ ಮೂಲೆಗಳಿಂದ, ಅಕ್ಕ‌ಪಕ್ಕದ ರಾಜ್ಯಗಳಿಂದ ಬಂದಿಳಿದ ವಾಹನಗಳ ಪ್ರವಾಹ ನಿಭಾಯಿಸಲು ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕಾಯಿತು. ಇದರಿಂದ ಸ್ವಲ್ಪ ಮಟ್ಟದ ಕಿರಿ ಕಿರಿ ಮೈಸೂರಿಗರಿಗೆ ಆಗಿದ್ದರೂ ಒಟ್ಟಾರೆಯಾಗಿ ಜಿಲ್ಲಾ ಪೊಲೀಸ್ ಮತ್ತು ನಗರ ಪೊಲೀಸ್ ಕಮಿಷನರೇಟ್ ನ ಶ್ರಮ ಮತ್ತು ವೃತ್ತಿಪರತೆಗೆ ನಾವು ಮೆಚ್ಚುಗೆ ಸೂಚಿಸೋಣ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಹಾಗೆಯೇ ಶುಕ್ರವಾರ ಸಂಜೆ ಅಂಬಾರಿ ಬಸ್ ನಲ್ಲಿ ನಗರ ಪ್ರದಕ್ಷಿಣೆ ಹೊರಟು ದೀಪಾಲಂಕಾರ ವೀಕ್ಷಿಸಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಭಿನ್ನ ಅನ್ನಿಸಿತು.‌ ಮತ್ತೊಬ್ಬರ ಸಂತೋಷಕ್ಕೆ ಘಾಸಿ ಮಾಡುವ ಹುಡುಗಾಟದ ತುತ್ತೂರಿಯನ್ನು, ಪೀಪಿಯನ್ನು ಈ ಬಾರಿ ಪೊಲೀಸರು ನಿಷೇಧಿಸಿದ್ದು ಒಳ್ಳೆಯದಾಯಿತು ಎನ್ನುವ ಅಭಿಪ್ರಾಯಗಳನ್ನೂ ನಗರ ಪ್ರದಕ್ಷಿಣೆ ವೇಳೆ ಹಲವರು ವ್ಯಕ್ತಪಡಿಸಿದರು.

ರಾಜ್ಯದ, ಹೊರ ರಾಜ್ಯದ, ವಿದೇಶಿಯರಿಗೆ ಅಚ್ಚುಕಟ್ಟಾದ ವಸತಿ, ಆತಿಥ್ಯ ನೀಡಿ ಮೈಸೂರಿನ, ರಾಜ್ಯದ ಘನತೆ ಹೆಚ್ಚಿಸಿದ ಹೋಟೆಲ್ ಉದ್ಯಮ ಮತ್ತು ಊಟೋಪಚಾರ, ಸಂಜೆಯ ಕುರುಕ್ ತಿಂಡಿಯವರಿಗೆಲ್ಲಾ ದಸರಾದ ಸಂಭ್ರಮ ಹೆಚ್ಚಿಸಿದ್ದಾರೆ.

ದಸರಾದ ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೆಚ್ಚಿಸುವ, ಸಾಂಪ್ರದಾಯಿಕ ಹಿರಿಮೆಯನ್ನು ವಿಸ್ತರಿಸಿದ ಜಿಲ್ಲಾಡಳಿತದ ಶ್ರಮಕ್ಕೆ ಮುಖ್ಯಮಂತ್ರಿಗಳು ಮೆಚ್ಚುಗೆ ಸೂಚಿಸಿದ್ದಾರೆ.‌

ಈ ಎಲ್ಲಾ ಸಾರ್ಥಕತೆಗೆ ಕಾರಣವಾದ ಪೌರ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳವರೆಗೆ, ಮಾವುತರಿಂದ ಜಿಲ್ಲಾ ಮಂತ್ರಿಗಳವರೆಗೆ ಪ್ರತಿಯೊಬ್ಬರ ಶ್ರಮ, ಕರ್ತವ್ಯ ಪ್ರಜ್ಞೆ, ವೃತ್ತಿಪರತೆಗೆ ಕೃತಜ್ಞತೆ  ಸಲ್ಲಿಸುತ್ತೇನೆ  ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ

ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…

45 mins ago

ಓದುಗರ ಪತ್ರ: ಡಿಕೆಶಿಯವರ ನಿಲುವು ಸ್ವಾಗತಾರ್ಹ

ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…

47 mins ago

ಓದುಗರ ಪತ್ರ: ಬಾಂಗ್ಲಾದಲ್ಲಿ ಹಿಂದೂಗಳ ಸರಣಿ ಹತ್ಯೆ ಖಂಡನೀಯ

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…

49 mins ago

ಓದುಗರ ಪತ್ರ: ನಂಜನಗೂಡಿನಲ್ಲಿ ಆಟೋಗಳಿಗೆ ಮೀಟರ್ ದರ ಜಾರಿಯಾಗಲಿ

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…

52 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ‘ನಿಯೋನೇಟಲ್ ಕೇರ್’ ಸೇವೆಯ ಮಾತೆ ಡಾ.ಅರ್ಮಿಡಾ ಫೆರ್ನಾಂಡೀಸ್

ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…

54 mins ago

ಮಲೆ ಮಹದೇಶ್ವರ ಬೆಟ್ಟ| ಕಾಲ್ನಡಿಗೆ ಪಾದಯಾತ್ರಿಗಳಿಗೆ ಸೌಲಭ್ಯ ಕಲ್ಪಿಸಿ: ಡಿಸಿಎಂ ಡಿಕೆಶಿ ಸೂಚನೆ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ…

58 mins ago