ಮೈಸೂರು: ನಗರದ ಕೆಆರ್‌ಎಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಅವರನ್ನು ಓಲೈಸಲು ಅಧಿಕಾರಿಗಳು ಈ ಪ್ರಸ್ತಾವನೆ ಇರಿಸಿರುವುದು ಸರಿಯಲ್ಲ ಎಂದು ಮಾಜಿ ಮಹಾಪೌರ ಸಂದೇಶ್ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಇಂದು(ಡಿಸೆಂಬರ್.31) ಕೆಆರ್‌ಎಸ್ ರಸ್ತೆಯ ವಿಚಾರವಾಗಿ ಪರ-ವಿರೋಧ ವಿಚಾರ ಚರ್ಚೆಗೆ ಗ್ರಾಸವಾಗಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಸಮಾಜಕ್ಕೆ ಕೊಡುಗೆ ನೀಡಿರುವ ಗಣ್ಯರ ಹೆಸರನ್ನು ರಸ್ತೆ, ಉದ್ಯಾನವನ, ವೃತ್ತಗಳಿಗೆ ನಾಮಕರಣ ಮಾಡುವ ಸಂಪ್ರದಾಯವಿದೆ. ಆದರೆ, ಈ ಪ್ರಕ್ರಿಯೆ ನಿಯಮ ಬದ್ಧವಾಗಿಯೇ ನಡೆಯಬೇಕು. ನಾಮಕರಣ ಸಂಬಂಧ ಪಾಲಿಕೆ ನಾಮಕರಣ ಸಮಿತಿ ಮೂಲಕ ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಆ ನಂತರ
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಬೇಕು. ಅದನ್ನು ಪಾಲಿಕೆ ಕೌನ್ಸಿಲ್‌ನಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಕಳುಹಿಸಬೇಕು. ಆದರೆ, ಈ ಯಾವುದೇ ಪ್ರಕ್ರಿಯೆ ನಡೆಯದೆ ಅಧಿಕಾರಿಗಳು ಏಕಾಏಕಿ ಯಾವುದೇ ನಾಮಕರಣ ಮಾಡಲು ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.
ಅಂದಿನ ಕಾಲದಲ್ಲಿ ಅಂದರೆ ಸುಮಾರು 1921ರಲ್ಲಿ ಅಂದಿನ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಈಗಿನ ಮಾಂಡೋವಿ ಮೋಟಾರ್ಸ್‌ನಿಂದ ಪಿ.ಕೆ.ಸ್ಯಾನಿಟೋರಿಯಂ ಆಸ್ಪತ್ರೆವರೆಗಿನ ರಸ್ತೆಗೆ ‘ಪ್ರಿನ್ಸ್‌ಸ್ ರಸ್ತೆ’ ಎಂದು ನಾಮಕರಣ ಮಾಡಿದೆ ಎಂದು ಅಂದಿನ ನಕ್ಷೆಯಲ್ಲಿ ಈ ಬಗ್ಗೆ ಉಲ್ಲೇಖ ಇರುವುದನ್ನು ಪ್ರದರ್ಶಿಸಿದ್ದಾರೆ. ಅಲ್ಲದೇ ಅರಮನೆ ಬಳಿಯ ಕರ್ಜನ್ ಪಾರ್ಕ್‌ಗೆ ಡಾ.ರಾಜ್‌ಕುಮಾರ್ ಉದ್ಯಾನವನ ಎಂದು ನಾಮಕರಣ ಮಾಡಲು ಪಾಲಿಕೆ ಕೌನ್ಸಿಲ್‌ನಲ್ಲಿ ನಿರ್ಣಯ ಕೈಗೊಂಡು ಸರ್ಕಾರದ ಅನುಮತಿ ಪಡೆದು ನಾಮಕರಣ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಇನ್ನೂ ತಾವು ಮಹಾಪೌರರಾಗಿದ್ದ ಅವಧಿಯಲ್ಲಿ ಸಾರ್ವಜನಿಕರ ಮನವಿ ಮೇರೆಗೆ ಜೆ.ಪಿ.ನಗರದ ದೊಡ್ಡ ಉದ್ಯಾನವನಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಒಂದು ಕಡೆ ನಾಮಕರಣ ಮಾಡಿರುವ ವ್ಯಕ್ತಿಯ ಹೆಸರನ್ನು ಮತ್ತೊಂದು ಕಡೆ ನಾಮಕರಣ ಮಾಡಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ಓಲೈಸಲು ಅಧಿಕಾರಿಗಳು ಈ ಪ್ರಸ್ತಾವನೆ ಇರಿಸಿರುವುದು ಸರಿಯಲ್ಲ. ಅಧಿಕಾರಿಗಳು ಮಾಡುತ್ತಿರುವ ಈ ಕೆಲಸ ಜಾತಿ ಸಂಘರ್ಷಕ್ಕೆ ಕಾರಣವಾಗಲಿದೆ. ಮೊದಲು ಅಧಿಕಾರಿಗಳು ಮೈಸೂರಿನ ಇತಿಹಾಸ ತಿಳಿದುಕೊಳ್ಳಲಿ. ಬಳಿಕ ಕೆಆರ್‌ಎಸ್ ರಸ್ತೆಗೆ ಮರು ನಾಮಕರಣ ವಿಚಾರವಾಗಿ ನಿರ್ಧಾರ ಕೈಗೊಳ್ಳಲಿ. ಅದನ್ನು ಬಿಟ್ಟು ಗೊಂದಲ ಸೃಷ್ಟಿಸಬಾರದು, ಸಿಎಂ ಸಿದ್ದರಾಮಯ್ಯ ಈ ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿದ್ದರಾಮಯ್ಯ ಅವರಿಗೆ ಮುಜುಗರ ತರುವುದು ಸರಿಯಲ್ಲ. ಅವರ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…
ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…
ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ…