Mysore Palace
ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ನಗರಗಳ ಪಟ್ಟಿ ಪ್ರಕಟ
ಮೈಸೂರಿಗೆ ಮೂರನೇ ಸ್ಥಾನ
ಸತತ 8ನೇ ಸಲ ಇಂದೋರ್‌ಗೆ ಮೊದಲ ಸ್ಥಾನ
ಹೊಸದಿಲ್ಲಿ: ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಹೊಸದಾಗಿ ಪರಿಚಯಿಸಲಾದ ಸೂಪರ್ ಸ್ವಚ್ಛ ಲೀಗ್ ನಗರಗಳ ಪಟ್ಟಿಯಲ್ಲಿ 3ರಿಂದ 10ಲಕ್ಷದೊಳಗಿನ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮೈಸೂರು ಮೂರನೇ ಸ್ಥಾನ ಪಡೆದಿದೆ.
ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ 23ನೇ ಸ್ಥಾನ ಪಡೆದಿದ್ದ ಮೈಸೂರು ನಗರ ಈ ಬಾರಿ ದೇಶದ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ 3ನೇ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಮತ್ತೆ ಗೌರವ ತಂದುಕೊಟ್ಟಿದೆ. ಈ ವಿಭಾಗದಲ್ಲಿ ಮೊದಲ ಸ್ಥಾನವನ್ನು ನೋಯಿಡಾ, ಎರಡನೇ ಸ್ಥಾನ ವನ್ನು ಚಂಡೀಗಢ ಪಡೆದುಕೊಂಡಿವೆ. ಭಾರತದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕೆಲ ರಾಜ್ಯಗಳ ಒಂದಕ್ಕಿಂತ ಹೆಚ್ಚು ನಗರಗಳು ಸ್ಥಾನ ಪಡೆದಿವೆ. ಆದರೆ ಕರ್ನಾಟಕದ ಏಕೈಕ ನಗರ ಮೈಸೂರು ಈ ಸ್ಥಾನ ಪಡೆದಿದೆ.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಸರಳ ಸಮಾರಂಭ ದಲ್ಲಿ ಸಂಬಂಧಪಟ್ಟ ನಗರಗಳ ಪ್ರತಿನಿಧಿಗಳಿಗೆ ರಾಷ್ಟ್ರಪತಿ ದೌಪದಿ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಮೈಸೂರು ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವಿರ್ ಆಸೀಫ್ ಅವರು ಪ್ರಶಸ್ತಿ ಸ್ವೀಕರಿಸಿದರು.
2016ರಲ್ಲಿ ದೇಶದಲ್ಲಿಯೇ ನಂಬರ್ 1 ಸ್ವಚ್ಛ ನಗರ ಸ್ಥಾನ ಪಡೆದಿದ್ದ ಮೈಸೂರು ಬಳಿಕ ಕುಸಿತ ಕಂಡಿತ್ತು. ಅದರಲ್ಲೂ 2023ನೇ ಸಾಲಿನಲ್ಲಿ 23ನೇ ಸ್ಥಾನಕ್ಕೆ ಇಳಿದಿತ್ತು. ಇದು ನಗರದ ಅತ್ಯಂತ ಕಳಪೆ ಸಾಧನೆಯಾಗಿತ್ತು. ಈ ಬಾರಿ ನಗರದ ಅಂದವನ್ನು ಹೆಚ್ಚಿಸುವಲ್ಲಿ ಮಹಾನಗರಪಾಲಿಕೆಯು ಹೆಚ್ಚು ಶ್ರಮ ವಹಿಸಿತ್ತು.
ಮಧ್ಯಪ್ರದೇಶದ ಇಂದೋರ್ ನಗರವು 2024-25ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರಗಳ ವಿಭಾಗ ದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಸತತ 8ನೇ ಬಾರಿಗೆ ದೇಶದ ಅತ್ಯಂತ ಸ್ವಚ್ಛ ನಗರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಜರಾತ್‌ನ ಸೂರತ್ ಎರಡನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಸ್ವಚ್ಛತೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ನಗರಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲು ಮತ್ತು ನಗರದ ಸ್ವಚ್ಛತೆ, ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ಸ್ವಚ್ಛ ಸರ್ವೇಕ್ಷಣೆಯನ್ನು ನಡೆಸಲಾಗುತ್ತದೆ.
ಸ್ವಚ್ಛ ಸೂಪರ್ ಲೀಗ್ ಫಲಿತಾಂಶಗಳ ಜೊತೆಗೆ, ಭಾಗವಹಿಸುವ ಎಲ್ಲಾ ನಗರಗಳಿಗೆ ಸಮನಾದ ನ್ಯಾಯ ಒದಗಿಸುವ ಉದ್ದೇಶದಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಗರಗಳ ಜನಸಂಖ್ಯೆ ಆಧಾರದಲ್ಲಿ ಶ್ರೇಯಾಂಕ ಗಳನ್ನು ಪ್ರತ್ಯೇಕವಾಗಿ ಘೋಷಿಸಿದೆ.
ಸೂಪರ್ ಲೀಗ್ ಮಾದರಿ: ಹಿಂದಿನ ಸ್ವಚ್ಛ ಸರ್ವೇಕ್ಷಣಾ ಆವೃತ್ತಿಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ನಗರಗಳನ್ನು ಮಾತ್ರ ಸ್ವಚ್ಛ ಸೂಪರ್ ಲೀಗ್‌ಗೆ ಆರಿಸಿದೆ. ಅದರಲ್ಲಿ ಮೈಸೂರು ಸೇರಿರುವುದು ಸಂತಸದ ವಿಚಾರ. ಮುಂದಿನ ಸಮೀಕ್ಷೆಯಲ್ಲಿ ನಗರದ ಕಾರ್ಯಕ್ಷಮತೆ ಕುಸಿದರೆ, ಅದು ಸ್ವಯಂಚಾಲಿತವಾಗಿ ಸೂಪರ್ ಲೀಗ್‌ನಿಂದ ಹೊರಗಿಡಲ್ಪಡುತ್ತದೆ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಇತರರು ಅದರ ಸ್ಥಾನವನ್ನು ಪಡೆಯಬಹುದಾಗಿದೆ.
ಕೈ ತಪ್ಪಿದ ಮೊದಲ ಸ್ಥಾನ: ಈ ಬಾರಿ ಕೂಡ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುವ ಮೈಸೂರು ನಗರಪಾಲಿಕೆಯ ಕನಸು ಈಡೇರಿಲ್ಲ. ಇದಕ್ಕೆ ಕಾರಣ ಹಲವು. ಇಲ್ಲಿನ ಚರಂಡಿ ಹಾಗೂ ಒಳ ಚರಂಡಿ ವ್ಯವಸ್ಥೆ ಮತ್ತಷ್ಟು ಉತ್ತಮವಾಗಬೇಕಾಗಿದೆ. ತ್ಯಾಜ್ಯ ವಿಂಗಡಣೆ ಮತ್ತು ಮರುಬಳಕೆ ಮಾಡಲಾಗುತ್ತದೆ ಹಾಗೂ ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮೈಸೂರು ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರತಿದಿನ ೫೦೦ ಟನ್ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತದೆ. ಈ ತ್ಯಾಜ್ಯವನ್ನು ಒಂಬತ್ತು ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತದೆ. ಆದರೆ, ನಗರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ನಾಗರಿಕರ ನಿರಾಸಕ್ತಿ ಆತಂಕ ಹುಟ್ಟಿಸುತ್ತದೆ.
” ಸ್ವಚ್ಛತೆಯಲ್ಲಿ ನಿರಂತರ ಶ್ರೇಷ್ಠತೆಗೆ ಹೆಸರುವಾಸಿಯಾದ ಮೈಸೂರು ನಗರಕ್ಕೆ ಈ ಬಾರಿ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ದೊರೆತಿರುವುದು ಅತೀವವಾದ ಸಂತಸ ಉಂಟು ಮಾಡಿದೆ. ಈ ಪ್ರಶಸ್ತಿಯೊಂದಿಗೆ ಮೈಸೂರು ದೇಶದ ಸ್ವಚ್ಛ ನಗರಗಳೊಂದಿಗೆ ಸ್ಥಾನ ಪಡೆದಿದೆ. ಇದು ನಗರದ ನಾಗರಿಕರು ಹೆಮ್ಮೆ ಪಡುವ ವಿಚಾರ. ಪ್ರಶಸ್ತಿ ದೊರೆಯಲು ಸ್ವಚ್ಛತಾ ಸಿಬ್ಬಂದಿ, ನಾಗರಿಕರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದ ಪ್ರಯತ್ನ ಕಾರಣ.”
ಶೇಖ್ ತನ್ವೀರ್ ಆಸಿಫ್, ಆಯುಕ್ತ, ಮೈಸೂರು ನಗರ ಪಾಲಿಕೆ
” ವಿಚಾರದಲ್ಲಿ ಹೆಚ್ಚಿನ ಒತ್ತು ನೀಡಿದ ಪರಿಣಾಮ ಮೈಸೂರು ನಗರಕ್ಕೆ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ದೊರೆತಿದೆ. ಪೌರ ಕಾರ್ಮಿಕರು, ಅಧಿಕಾರಿಗಳ ಪರಿಶ್ರಮ, ನಗರದ ನಾಗರಿಕರು ಹಾಗೂ ಮಾಧ್ಯಮಗಳ ಸಹಕಾರದಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ನಗರವನ್ನು ಮತ್ತಷ್ಟು ಸ್ವಚ್ಛ ಹಾಗೂ ಸುಂದರಗೊಳಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು.”
ಡಾ.ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ
ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…
ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…