ಮೈಸೂರು : ಕನ್ನಡಿಗರಾದ ನಾವು ಅನ್ಯ ಭಾಷೆಯ ಪ್ರಭಾವಕ್ಕೆ ಒಳಗಾಗಬಾರದು ಎಂದು ಕನ್ನಡ ಶಾಸ್ತ್ರೀಯ ಭಾಷೆ ಅತ್ಯುನ್ನತ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ಹೇಳಿದರು.
ನಗರದ ಖಿಲ್ಲೆ ಮೊಹಲ್ಲಾದ ಶ್ರೀ ನಟರಾಜ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವದಲ್ಲಿ ಪ್ರದಾನ ಭಾಷಣ ಮಾಡಿದ ಅವರು, ಕನ್ನಡ ಭಾಷೆಯು ಆಯಾಯ ಕಾಲಘಟ್ಟದಲ್ಲಿ ಸಂಸ್ಕೃತ, ಪ್ರಾಕೃತ, ಹಿಂದಿ ಭಾಷೆಗಳಿಗೆ ಒಳಗಾಗಿದ್ದರೂ ತನ್ನದೇ ಆದ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದೆ. ಈಗ ಇಂಗ್ಲಿಷ್ ಭಾಷೆಯ ಪ್ರಭಾವಕ್ಕೆ ಒಳಗಾಗಿದೆ ಎಂದರು.
ಇಂಗ್ಲಿಷ್ ಭಾಷೆ ಅಂಬೆಗಾಲಿಡುವಾಗಲೇ ಕನ್ನಡ ಭಾಷೆ ಪ್ರಬುದ್ಧವಾಗಿತ್ತು. ಬಿ.ಎಂ.ಶ್ರೀಕಂಠಯ್ಯನವರು ಒಂದು ಕೈಯಲ್ಲಿ ಕುಮಾರವ್ಯಾಸನ ಕೃತಿಯನ್ನು, ಮತ್ತೊಂದು ಕೈಯಲ್ಲಿ ಪಂಪನ ಕೃತಿಯನ್ನು ಹಿಡಿದುಕೊಂಡು ಪ್ರಪಂಚವನ್ನು ಸುತ್ತಿಕೊಂಡು ಬರುತ್ತೇನೆ ಎಂದು ಇಂಗ್ಲಿಷ್ ಬರುವ ಮೊದಲೇ ಅಭಿಮಾನದಿಂದ ನುಡಿದಿದ್ದರು. ಕನ್ನಡಿಗರಾದ ನಾವು ಬೇರೆ ಭಾಷೆಯ ಪ್ರಭಾವಕ್ಕೆ ಒಳಗಾಗದೇ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವುದರ ಜೊತೆಗೆ ನೆರೆ-ಹೊರೆಯವರೊಂದಿಗೆ ಸೌಹಾರ್ದದಿಂದ ಬದುಕಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಎಂ.ಆರ್. ಸತ್ಯನಾರಾಯಣ ಮಾತನಾಡಿ, ನಮ್ಮ ನಾಲಿಗೆಯ ಭಾಷೆ ಮತ್ತು ತನು -ಮನದ ಭಾಷೆ ಕನ್ನಡ. ಕನ್ನಡ ಭಾಷೆಗೆ ಹೃದಯವನ್ನು ಕಂಪಿಸುವ ಮತ್ತು ಕಿವಿಯನ್ನು ನಿಮಿರಿಸುವ ಶಕ್ತಿ ಇದೆ ಎಂದರು.
ಇದನ್ನೂ ಓದಿ:-ಹುಲಿ ಓಡಾಡುವ ನಕಲಿ (AI) ವಿಡಿಯೋ : ಕ್ರಮ ಮುಂದಾದ ಅರಣ್ಯ ಇಲಾಖೆ
ಸನ್ಮಾನ ಸ್ವೀಕರಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲೇ ಕನ್ನಡಿಗರು ಒಂದಾಗಬೇಕು ಎಂಬ ಪರಿಕಲ್ಪನೆಯಲ್ಲಿ ನಮ್ಮ ಕವಿಗಳಾದ ಹುಯಿಲಗೋಳ ನಾರಾಯಣರಾವ್, ಕುವೆಂಪು ಮತ್ತು ಡಿ.ಎಸ್.ಕರ್ಕಿಯವರು ಕನ್ನಡದ ಗೀತೆಗಳನ್ನು ರಚಿಸಿದ್ದಾರೆ. ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಕನ್ನಡಿಗರ ಹೋರಾಟದ ಫಲವಾಗಿ ಕನ್ನಡ ರಾಜ್ಯ ಉದಯವಾಯಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಽಕಾರಿ ಪ್ರೊ.ಎಸ್.ಶಿವರಾಜಪ್ಪ, ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಗೌರಿಶಂಕರ ನಂದಿಧ್ವಜ ಸಂಘದ ಅಧ್ಯಕ್ಷ ಉಡಿಗಾಲ ಮಹದೇವಪ್ಪ ಮಾತನಾಡಿದರು. ಇದಕ್ಕೂ ಮುನ್ನ ಶ್ರೀ ನಟರಾಜ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಕನ್ನಡ ಅರಿವು ಜಾಥಾಕ್ಕೆ ಕೃಷ್ಣರಾಜ ಉಪ ವಿಭಾಗದ ಎಸಿಪಿ ಎಚ್.ಬಿ.ರಮೇಶ್ ಕುಮಾರ್ ಚಾಲನೆ ನೀಡಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲಾ-ಕಾಲೇಜುಗಳ ಹಂತದಲ್ಲಿ ನಡೆದ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಕನಕ ಓದು-ವ್ಯಾಖ್ಯಾನ-ಗಾಯನ-ರಸಪ್ರಶ್ನೆ ಕುರಿತ ಪ್ರತಿಭಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.
ಶ್ರೀ ನಟರಾಜ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪ್ರಾಂಶುಪಾಲರಾದ ವಿ.ಡಿ.ಸುನೀತಾರಾಣಿ, ಶ್ರೀ ನಟರಾಜ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಎಂ.ಆರ್.ಪವಿತ್ರಾ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎಚ್.ಜಿ.ಮಮತಾ, ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು. ನಂತರದಲ್ಲಿ ಸಂಸ್ಥೆಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…
ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್ ಮುಂದೆ…
ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…