ಮೈಸೂರು ನಗರ

ಮೈಸೂರಲ್ಲಿ ಸಂಭ್ರಮದ ಹನುಮೋತ್ಸವ ; ಮೆರವಣಿಗೆಯಲ್ಲಿ ಸಾಗಿದ ಅತ್ಯಾಕರ್ಷಕ ಹನುಮಮೂರ್ತಿಗಳು

ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು ಸಹಸ್ರ ಸಹಸ್ರಾರು ಸಾರ್ವಜನಿಕರ ಗಮನ ಸೆಳೆಯಿತಲ್ಲದೆ, ಶಾಂತಿಯುತವಾಗಿ ಅತ್ಯಂತ ವೈಭವದಿಂದ ಜರುಗಿತು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೊದಲಿಗೆ ಹೋಮ-ಹವನ ನಡೆಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ, ತುಳಸಿ,ಮೈಸೂರು ಮಲ್ಲಿಗೆ, ವೀಳ್ಯೆದೆಲೆ, ಹಲಸಂದೆಯಿಂದ ಮಾಡಿದ್ದ ವಡೆ, ನಿಪ್ಪಟ್ಟು ಹಾರವನ್ನು ಹಾಕಿ ಹೂವಿನ ಅಲಂಕಾರದಿಂದ ಸಿಂಗಾರಗೊಳಿಸಲಾಗಿದ್ದ ಹನುಮಮೂರ್ತಿಗೆ ಪೂಜೆ ಸಲ್ಲಿಸಲಾಯಿತು.

ನಂತರ, ಶಾಸಕರಾದ ಜಿ.ಟಿ.ದೇವೇಗೌಡ,ಜಿ.ಡಿ.ಹರೀಶ್ ಗೌಡ,ಮಾಜಿ ಸಂಸದ ಪ್ರತಾಪ್ ಸಿಂಹ,ಮಾಜಿ ಶಾಸಕ ಎಲ್.ನಾಗೇಂದ್ರ ಮತ್ತಿತರರು ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ತೆರೆದ ವಾಹನದಲ್ಲಿ ವಿರಾಜಮಾನರಾಗಿ ನಿಂತಿದ್ದ ಹನುಮಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ನಂದೀಧ್ವಜಕ್ಕೆ ಪೂಜೆ ಸಲ್ಲಿಸಿದರು. ನಂತರ ಹೊರಟ ಆಂಜನೇಯ ಮೂರ್ತಿಗಳ ಮೆರವಣಿಗೆಯು ದೊಡ್ಡಗಡಿಯಾರ,ಅಶೋಕ ರಸ್ತೆ, ಇರ್ವಿನ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ,ಸಯ್ಯಾಜಿರಾವ್ ರಸ್ತೆ,ಚಿಕ್ಕಗಡಿಯಾರ ವೃತ್ತ, ಡಿ.ದೇವರಾಜ ಅರಸು ರಸ್ತೆ,ನಾರಾಯಣಶಾಸ್ತ್ರಿ ರಸ್ತೆ, ಶಾಂತಲಾ ಚಿತ್ರಮಂದಿರ ವೃತ್ತ,ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ಶ್ರೀಶಿವರಾತ್ರಿರಾಜೇಂದ್ರ ವೃತ್ತದ ಮೂಲಕ ಹಾದು ಗನ್‌ಹೌಸ್‌ನಲ್ಲಿ ಅಂತ್ಯಗೊಂಡಿತು. ರಾವಣನ ವಿರುದ್ಧ ಸೆಣಸಾಡುವಾಗ ಗದೆಯನ್ನು ಎತ್ತಿದ ಹನುಮಂತ, ಜೈಶ್ರೀರಾಮ್ ಎನ್ನುವಂತೆ ಕೈಯಲ್ಲಿ ಗದೆ ಹಿಡಿದು ನಿಂತಿರುವುದು, ಓಂ ಅಕ್ಷರದ ಎದುರು ನಿಂತಿದ್ದ ಆಂಜನೇಯ ಸೇರಿದಂತೆ ವಿವಿಧ ಮಾದರಿಯ ಮೂರ್ತಿಗಳು ಗಮನ ಸೆಳೆದರೆ, ತಪಸ್ಸು ಕುಳಿತಿದ್ದ ಈಶ್ವರನ ಮೂರ್ತಿ ಮನಮೋಹಕವಾಗಿ ಭಕ್ತಾದಿಗಳನ್ನು ಆಕರ್ಷಿಸಿತು.

ಇದನ್ನೂ ಓದಿ:-ಮೈಸೂರು | ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ!

ದಾರಿಯುದ್ದಕ್ಕೂ ಕೇಸರಿ ಶಾಲು,ಟೀಶರ್ಟ್‌ಗಳನ್ನು ಧರಿಸಿದ್ದ ಯುವಕರು ದೊಡ್ಡ ದೊಡ್ಡದಾದ ಬಾವುಟಗಳನ್ನು ಹಿಡಿದು ಜೈಶ್ರೀರಾಮ್,ಜೈ ಜೈ ಶ್ರೀರಾಮ, ಪವನಸುತ ಹನುಮಾನ್‌ಕೀ ಜೈ ಮೊದಲಾದ ಘೋಷಣೆಗಳನ್ನು ಮೊಳಗಿಸಿದರು. ನಟ ಶಿವರಾಜಕುಮಾರ್ ಅಭಿನಯದ ವಜ್ರಕಾಯ ಚಿತ್ರದ ಜೈ ಆಂಜನೇಯ ಹಾಡಿಗೆ ನೂರಾರು ಯುವಕರು ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರೆ, ಹನುಮೋತ್ಸವ ಸಮಿತಿ ಕಾರ್ಯಕರ್ತರು ಪ್ರತಿಯೊಂದು ಹನುಮಮೂರ್ತಿಗಳ ಮುಂದೆ ಭಜನೆ,ಜೈಕಾರ ಹೇಳಿಕೊಂಡು ಜತೆಗೆ ಹೆಜ್ಜೆ ಹಾಕಿದರು. ನಂದಿಕಂಬ, ವೀರಗಾಸೆ, ಕಂಸಾಳೆ, ಬೀಸುಕಂಸಾಳೆ,ಗಾರುಡಿಗೊಂಬೆ,ಡೊಳ್ಳುಕುಣಿತ,ನಗಾರಿ, ಕಾಡಿನ ಮಕ್ಕಳ ವೇಷಧಾರಿಗಳು, ಪೂಜಾ ಕುಣಿತ, ಒಂಟಿ ಬಸವ ಕಲಾವಿದರು ದಾರಿಯುದ್ದಕ್ಕೂ ತಮ್ಮದೇ ಆದ ಶೈಲಿಯಲ್ಲಿ ನೃತ್ಯ ಪ್ರದರ್ಶಿಸಿ ಮೆರಗು ತಂದುಕೊಟ್ಟರು. ಕೆಲ ಪೋಷಕರು ತಮ್ಮ ಮಕ್ಕಳಿಗೆ ಹನುಮಂತನ ವೇಷ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿಸಿದರು.ಕೆಲವರು ಈ ಮಕ್ಕಳೊಂದಿಗೆ ಸೆಲಿ ಕ್ಲಿಕ್ಕಿಸಿಕೊಂಡರು.ಮಾಜಿ ಮಹಾಪೌರರಾದ ಎಸ್.ಸಂದೇಶ್ ಸ್ವಾಮಿ, ಶಿವಕುಮಾರ್, ಲಾಗೈಡ್ ಕಾನೂನು ಮಾಸಪತ್ರಿಕೆ ಸಂಪಾದಕ ಎಚ್.ಎನ್.ವೆಂಕಟೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಎಂ.ಶಿವಕುಮಾರ್,ನಗರಪಾಲಿಕೆಮಾಜಿ ಸದಸ್ಯರಾದ ಎಂ.ಸತೀಶ್, ಛಾಯಾದೇವಿ, ವಿವಿ ಸಿಂಡಿಕೇಟ್ ಸದಸ್ಯ ಗೋಕುಲ್ ಗೋವರ್ಧನ್, ಹನುಮಂತ್ಯೋತ್ಸವ ಸಮಿತಿಯ ಸಂಜಯ್, ಶಂಭು,ಮನು, ಅಪ್ಪಿಮೊದಲಾದವರು ಪಾಲ್ಗೊಂಡಿದ್ದರು.

ಆಂದೋಲನ ಡೆಸ್ಕ್

Recent Posts

ಚಾ.ನಗರ | ಬೇಡರಪುರದಲ್ಲಿ ಮತ್ತೊಂದು ಚಿರತೆ ಸೆರೆ

ಚಾಮರಾಜನಗರ : ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇನ್ನೂ ಒಂದು ಚಿರತೆ ಸೆರೆಯಾಗಿದೆ. ಗ್ರಾಮದ ಮಲ್ಲಣ್ಣ…

5 hours ago

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸಿ : ಡಿಸಿ, ಸಿಇಓಗಳಿಗೆ ಮಧು ಬಂಗಾರಪ್ಪ ಸೂಚನೆ

ಬೆಂಗಳೂರು : 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಅಭಿಯಾನ ಯಶಸ್ವಿಯಾಗಿ ನಡೆಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು…

6 hours ago

ಕಾರು-ಬೈಕ್‌ ನಡುರೆ ಭೀಕರ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು

ಸಿದ್ದಾಪುರ : ಎರಡು ಬೈಕ್‌ಗಳು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ…

6 hours ago

ವಾಣಿಜ್ಯ ಬಳಕೆಯ ಸಿಲಿಂಡರ್‌ ಪೂರೈಕೆಯಲ್ಲಿ ಶೇ20 ರಷ್ಟು ಹೆಚ್ಚಳ

ಹೊಸದಿಲ್ಲಿ : ಎಲ್‌ಪಿಜಿ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು…

6 hours ago

ಇರಾನ್‌ ಡ್ರೋನ್‌ ಉತ್ಪಾದನಾ ಘಟಕದ ಮೇಲೆ ಅಮೆರಿಕ ದಾಳಿ : ಚಿತ್ರ ಬಿಡುಗಡೆ

ಟೆಹ್ರಾನ್ : ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ಸೇನೆ ನಡೆಸಿದ ನಿಖರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಉಪಗ್ರಹ…

7 hours ago

ಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರ್ಕಾರ : ಪುನರ್‌ ಪರಿಶೀಲನೆಗೆ ಒತ್ತಾಯ

ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…

7 hours ago