ಮೈಸೂರು : ಸಹಜ ಸಮೃದ್ಧ ಸಂಸ್ಥೆ ಹಾಗೂ ದೇಸಿರಿ ನ್ಯಾಚುರಲ್ಸ್ ಸಹಯೋಗದಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ದೇಸಿ ಎಣ್ಣೆ ಮೇಳಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೇಳವನ್ನು ಕಪ್ಪಡಿ ಕ್ಷೇತ್ರ ಹಾಗೂ ಮಂಟೇಸ್ವಾಮಿ ಮಠದ ಪೀಠಾಧಿಪತಿ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಉದ್ಘಾಟಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಂಪ್ರದಾಯಿಕ ಎಣ್ಣೆ ಗಾಣಕ್ಕೆ ಚಾಲನೆ ನೀಡಿ, ವೀಕ್ಷಿಸಿದರು.
ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ. ಗ್ರಾಹಕರಲ್ಲಿ ಅರಿವು ಹೆಚ್ಚುತ್ತಿರುವುದರಿಂದ, ಮೂಲೆಗುಂಪಾಗಿದ್ದ ಹುಚ್ಚೆಳ್ಳು, ಎಳ್ಳು, ಕುಸುಬೆ, ಹರಳು, ಅಗಸೆ ಮೊದಲಾದ ಎಣ್ಣೆಕಾಳು ಬೆಳೆಗಳಿಂದ ತಯಾರಾಗುವ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ರೈತರಿಗೆ ಬೆಳೆ ವೈವಿಧ್ಯ ಹೆಚ್ಚಿಸಿಕೊಳ್ಳಲು, ಮತ್ತು ಅದಾಯ ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಮೇಳದಲ್ಲಿ ಏನಿದೆ
ಮೇಳದಲ್ಲಿ ೫೦ಕ್ಕೂ ಹೆಚ್ಚು ಸಾಂಪ್ರದಾಯಿಕ ಎಣ್ಣೆಗಳನ್ನು ಪರಿಚಯಿಸಲಾಗಿದೆ. ಎತ್ತಿನ ಗಾಣದಿಂದ ಅಡುಗೆ ಎಣ್ಣೆ ಹಾಗೂ ಹರಳೆಣ್ಣೆ ತೆಗೆಯುವ ಪ್ರಾತ್ಯಕ್ಷಿಕೆಯನ್ನೂ ವೀಕ್ಷಿಸಬಹುದು. ಸಿಎಫ್‌ಟಿಆರ್‌ಐ ವಿಜ್ಞಾನಿಗಳು ಕಲಬೆರಕೆ ಎಣ್ಣೆ ಪತ್ತೆ ಹಚ್ಚುವ ವಿಧಾನ ಪ್ರದರ್ಶಿಸುತ್ತಾರೆ. ಆಯುರ್ವೇದ ವೈದ್ಯರಿಂದ ಉಚಿತ ಸಲಹೆ ಮತ್ತು ಎಣ್ಣೆ ಬಳಕೆಯ ಮಾರ್ಗದರ್ಶನ ನೀಡಲಾಗುತ್ತಿದೆ. ಆಹಾರ ತಜ್ಞರು ದೇಹ ಪ್ರಕೃತಿಗಳಿಗೆ ಯೋಗ್ಯವಾದ ಎಣ್ಣೆಗಳ ಬಳಕೆಯ ಕುರಿತು ತಿಳಿಸಿಕೊಡಲಿದ್ದಾರೆ.
ಶನಿವಾರ ಬೆಳಿಗ್ಗೆ ೧೧ಕ್ಕೆ ಎಣ್ಣೆ ಬೆಳೆಗಳ ಕೃಷಿ ಮತ್ತು ಮೌಲ್ಯವರ್ಧನೆಯ ಬಗ್ಗೆ ತರಬೇತಿ ನಡೆಯಲಿದೆ. ೧೧ರಂದು ಬೆಳಿಗ್ಗೆ ೧೦.೩೦ಕ್ಕೆ ಸಾಂಪ್ರದಾಯಿಕ ಎಣ್ಣೆಗಳ ಬಗ್ಗೆ ಅರಿವು ಮೂಡಿಸಲು ೫ರಿಂದ ೧೨ ವರ್ಷದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಎಣ್ಣೆ ಬೀಜಗಳು ಮತ್ತು ಕೃಷಿ, ಎತ್ತುಗಳಿಂದ ಚಾಲಿತವಾಗುವ ಗಾಣ, ರೈತರು ಮತ್ತು ಎಣ್ಣೆ ಹೊರತೆಗೆಯುವ ಪ್ರಕ್ರಿಯೆಯನ್ನು ಚಿತ್ರದ ಮೂಲಕ ತೋರಿಸಬೇಕು. ಆರೋಗ್ಯಕರ ಎಣ್ಣೆ, ಹಳ್ಳಿಯ ಆರ್ಥಿಕತೆ, ಮತ್ತು ಪರಿಸರ ಸ್ನೇಹಿ ಎಂಬ ಸಂದೇಶಗಳನ್ನು ಚಿತ್ರ ಒಳಗೊಂಡಿರಬೇಕು.
ಭಾನುವಾರ ಮಧ್ಯಾಹ್ನ ೧೨ಕ್ಕೆ ಸಾಂಪ್ರದಾಯಿಕ ಎಣ್ಣೆಗಳ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸಾಂಪ್ರದಾಯಿಕ ಎಣ್ಣೆಗಳಿಂದ ತಯಾರಿಸಿದ ಅಡುಗೆಗಳನ್ನು ತರಬೇಕು. ಅಪರೂಪದ ಎಣ್ಣೆ ಬಳಸಿದ ಅಡುಗೆಗಳಿಗೆ ಆದ್ಯತೆ ನೀಡಲಾಗುವುದು. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.
ಮೇಳದಲ್ಲಿ ವೈವಿಧ್ಯಮಯ ದೇಸಿ ಆಹಾರ ಸವಿಯಲು ಅವಕಾಶವಿದೆ. ಸಾವಯವ ಉತ್ಪನ್ನಗಳು, ಸಿರಿಧಾನ್ಯ, ನಾಟಿ ಬೀಜ ಮತ್ತು ಹಣ್ಣಿನ ಗಿಡಗಳನ್ನು ಖರೀದಿಸಬಹುದು. ದೇಸಿ ಬೀಜ, ಹಣ್ಣಿನ ಗಿಡ, ಸಾವಯವ ಬೆಲ್ಲ, ಅಕ್ಕಿ, ಸಿರಿಧಾನ್ಯ ಮತ್ತು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಸಂಕ್ರಾಂತಿಗಾಗಿ ಸಾವಯವ ಎಳ್ಳು ಬೆಲ್ಲ, ಅವರೆ, ಶೇಂಗಾ, ಗೆಣಸು ಕೊಳ್ಳಬಹುದಾಗಿದೆ.
ಗಿರೀಶ್ ಹುಣಸೂರು ಮೈಸೂರು: ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮೊದಲ ದಿನವೇ ಅಥವಾ ಒಂದೆರಡು ದಿನಗಳಲ್ಲಿ ಹೊಸ…
ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ : ಸಿಎಂ ಸಿದ್ದರಾಮಯ್ಯ ಆಕ್ರೋಶ ಬೆಂಗಳೂರು : ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ…
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ ವಾಪಸ್ ದ್ವೇಷ ಭಾಷಣ, ಅಪರಾಧಗಳ ಪ್ರತಿಬಂಧಕ ಮಸೂದೆಯೂ ಹಿಂದಕ್ಕೆ ಬೆಂಗಳೂರು :…
ಎರಡು ದಶಕಗಳ ಕೂಗು,ಬೇಡಿಕೆ ಈಡೇರಿಕೆ ಮೈಸೂರು : ಮೈಸೂರಿನ ಲಕ್ಷಾಂತರ ಜನರ ಎರಡು ದಶಕದ ಕನಸು, ಬೇಡಿಕೆ ನನಸಾಗುವ ಕಾಲ…
ಬೆಂಗಳೂರು : ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ…