ಸುಮಲತಾರಿಗೆ ಮೈಷುಗರ್ ಮೇಲೆ ಕಣ್ಣು: ಶಾಸಕ ಸುರೇಶ್ ಗೌಡ

ನಾಗಮಂಗಲ: ಸಂಸದೆ ಸುಮಲತಾ ಅವರ ಕಣ್ಣು ಮೈಷುಗರ್‌ ಮೇಲೆ ಬಿದ್ದಿದ್ದು, ಅದನ್ನು ಖಾಸಗೀಕರಣಗೊಳಿಸಲು ಒಳಸಂಚು ನಡೆಯುತ್ತಿದೆ ಎಂದು ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದರು.

ತಾಲ್ಲೂಕಿನ ಬೆಳ್ಳೂರು ಹೋಬಳಿ ಇರುಬನಹಳ್ಳಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಮೈಷುಗರ್ ಆಸ್ತಿ ಮೇಲೆ ಕಣ್ಣು ಬಿದ್ದಿದೆ. ಅಂತೆಯೇ ಸಂಸದೆ ಸುಮಲತಗೂ ಮೈಷುಗರ್ ಮೇಲೆ ಕಣ್ಣಿದೆ. ಬೀದರ್ ಸರ್ಕಾರಿ ಸಕ್ಕರೆ ಕಾರ್ಖಾನೆ ಹೊರತುಪಡಿಸಿದರೆ, ಮೈಷುಗರ್ ಕಾರ್ಖಾನೆ ರಾಜ್ಯದಲ್ಲಿರುವ ಎರಡನೇ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ. ಇಲ್ಲಿ ಉತ್ಪಾದನೆ ನಡೆದರೆ ಸಕ್ಕರೆಯ ಲಾಭ-ನಷ್ಟ ಗೊತ್ತಾಗುತ್ತದೆ. ಅದ್ದರಿಂದ ಇದನ್ನು ಖಾಸಗೀಕರಣ ಮಾಡಲು ಒಳಸಂಚು ನಡೆಯುತ್ತಿದ್ದು, ಸಕ್ಕರೆ ಲಾಬಿ ಕೆಲಸ ಮಾಡುತ್ತಿದೆ ಎಂದು ದೂರಿದರು.

ಸುಮಲತಾ ಅವರಿಂದ ಸಂಸ್ಕಾರ ಅಥವಾ ಸಂಸ್ಕೃತಿಯನ್ನು ಕಲಿಯುವ ಅವಶ್ಯಕತೆಯಿಲ್ಲ. ಇವರು ನಟನಾ ಕ್ಷೇತ್ರದಿಂದ ಬಂದು ಚೆನ್ನಾಗಿ ನಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.‌

ಲೋಕಾನುರೂಢಿಯಾಗಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ. ಇವರು ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂದು ಸುಳ್ಳು ಆರೋಪ ಮಾಡಿದರೆ ಕೇಳಿಸಿಕೊಂಡು ಇರಬೇಕಾ? ಆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಹಾಗೆ ಮಾತನಾಡಿದ್ದಾರೆಯೇ ಹೊರತು, ಬೇರೇನಲ್ಲ ಎಂದು ಸಮರ್ಥಿಸಿಕೊಂಡರು.

ಎಚ್.ವಿಶ್ವನಾಥ್ ಹಿರಿಯರು, ಮೇಧಾವಿಗಳು. ಅವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆಯಿಲ್ಲ. ಅವರು ತಮ್ಮ ಮೇಧಾವಿತನವನ್ನು ಜನೋಪಯೋಗಿ ಕೆಲಸಕ್ಕೆ ಉಪಯೋಗಿಸಿದ್ದರೆ ಒಳಿತಾಗುತ್ತಿತ್ತು. ಅವರು ತೆಗೆದುಕೊಂಡ ನಿಲುವು ಮತ್ತು ಎಲುಬಿಲ್ಲದ ನಾಲಿಗೆಯಿಂದಾಗಿ ಅದರ ಫಲವನ್ನು ಅವರೀಗ ಉಣ್ಣುತ್ತಿದ್ದಾರೆ ಎಂದು ಛೇಡಿಸಿದರು.