ದೇಗುಲ ತೆರವು ಸ್ಥಗಿತಕ್ಕೆ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ: ಸಚಿವ ಸೋಮಶೇಖರ್

ಮೈಸೂರು: ದೇಗುಲ ತೆರವು ಸ್ಥಗಿತಕ್ಕೆ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಿ ಎಂದು ಮುಖ್ಯಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದೇಶ ಶೇ. 90ರಷ್ಟು ಪಾಲನೆಯಾಗಿದೆ. ಆದರೆ, ಒಂದೆರಡು ಹೆಚ್ಚು ಕಡಿಮೆಯಾಗಿದೆ. ಯಾಕೆ ಹೀಗಾಗಿದೆ ಎಂಬ ಬಗ್ಗೆ ಸಿಎಂ ನೋಟಿಸ್‌ ಜಾರಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಎಲ್ಲಾ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಇನ್ನೆರಡು ದಿನದಲ್ಲಿ ಕ್ಯಾಬಿನೆಟ್‌ ಕರೆದು ಸುಪ್ರೀಂ ಕೋರ್ಟ್‌ ಆದೇಶ ಹಾಗೂ ಇತ್ತೀಚಿನ ಬೆಳವಣಿಗೆ ಕುರಿತು ಚರ್ಚಿಸುತ್ತಾರೆ. ದೇಗುಲ ತೆರವು ಸ್ಥಗಿತಗೊಳಿಸುವುದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ದೇಗುಲ ಧ್ವಂಸಗೊಳಿಸಿದರು ಎಂದು ಹಿಂದೂಪರ ಸಂಘಟನೆಗಳು ನೋವನ್ನು ತೋಡಿಕೊಂಡಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡಿದ್ದು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿದರು.

ದಸರಾ ಉದ್ಘಾಟಕರ ಆಯ್ಕೆ ಕುರಿತು ಮಾತನಾಡಿ, ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಬ್ಯುಸಿ ಇದ್ದಾರೆ. ಅದು ಮುಕ್ತಾಯದ ಹಂತ ತಲುಪಿದಾಗ ಉದ್ಘಾಟಕರ ಆಯ್ಕೆ ಮಾಡಲಿದ್ದಾರೆ ಎಂದರು.

× Chat with us