ಎರಡನೇ ಡೋಸ್ ಶೇಕಡವಾರು ಪ್ರಗತಿಗೆ ಬಿ.ಸಿ.ನಾಗೇಶ್ ಸೂಚನೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣ ಸಂಬಂಧ ಪ್ರಥಮ ಡೋಸ್ ಅನ್ನು ಶೇಕಡವಾರು ಕ್ಕಿಂತ ಹೆಚ್ಚು ಸಾಧನೆ ಮಾಡಲಾಗಿದೆ. ಅದರಂತೆ ಎರಡನೇ ಡೋಸ್ ನೀಡುವಲ್ಲಿ ಜನವರಿ 31 ರೊಳಗೆ ಶೇ 100 ರಷ್ಟು ಪ್ರಗತಿ ಸಾಧಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನಗರದ ಜಿ.ಪಂ.ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಕೈಗೊಳಲ್ಳಾಗಿರುವ ಕ್ರಮಗಳು ಹಾಗೂ ಲಸಿಕಾ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆದು ಸಚಿವರು ಮಾತನಾಡಿದರು.
ಜಿಲ್ಲೆಯಲ್ಲಿ ಎರಡನೇ ಡೋಸ್ ಪ್ರಗತಿಯಲ್ಲಿ ಶೇ 90 ರಷ್ಟು ಸಾಧನೆ ಮಾಡಲಾಗಿದೆ. ಇನ್ನು ಶೇ 10 ರಷ್ಟು ಜನರಿಗೆ ಎರಡನೇ ಡೋಸ್ ನೀಡಬೇಕಿದೆ. ಆ ನಿಟ್ಟಿನಲ್ಲಿ ತ್ವರಿತವಾಗಿ ಅಗರ್ಹರೆಲ್ಲರಿಗೂ ಎರಡನೇ ಡೋಸ್ ಅನ್ನು ಪೂರ್ಣಗೊಳಿಸಬೇಕು. ಈ ಕಾರ್ಯವನ್ನು ಎಲ್ಲಾ ಹಂತದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುವಂತೆ ಸಚಿವರು ಸೂಚಿಸಿದರು.
ಹಾಗೆಯೇ ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣಗೊಂಡವರು ಬೂಸ್ಟರ್ ಡೋಸ್ ಪಡೆಯಬೇಕು. ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಸದ್ಯ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಯಲ್ಲಿ ಯಾವುದೇ ರೀತಿ ವ್ಯತ್ಯಯ ಉಂಟಾಗದಂತೆ ಗಮನ ಹರಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿನಿತ್ಯ ಶಾಲಾ-ಕಾಲೇಜುಗಳಲ್ಲಿನ ಪಾಸಿಟಿವಿಟಿ ಪ್ರಮಾಣ ಮಾಹಿತಿ ಒದಗಿಸಬೇಕು. ಶಾಲೆಗೆ ದಿನನಿತ್ಯ ವಿದ್ಯಾರ್ಥಿಗಳು ಬರುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ವಿದ್ಯಾರ್ಥಿಗಳ ಒಳಿತಿಗಾಗಿ ಸರ್ಕಾರ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಶಾಲೆ ನಡೆಸುತ್ತಿದೆ. ಆದ್ದರಿಂದ ಪ್ರತಿನಿತ್ಯ ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯ ನಿಖರ ಮಾಹಿತಿ ಒದಗಿಸುವಂತೆ ಸಾರ್ವಜನಿಕ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸಚಿವರು ಸೂಚಿಸಿದರು.

ಪಿ.ಯು ಕಾಲೇಜು ವ್ಯಾಪ್ತಿಯಲ್ಲಿನ ಉಪನ್ಯಾಸಕರು. ಅತಿಥಿ ಉಪನ್ಯಾಸಕರು, ಸಿಬ್ಬಂದಿಗಳ ಮಾಹಿತಿ ಒದಗಿಸುವಂತೆ ಸಚಿವರು ಹೇಳಿದರು. ಅರ್ಹರೆಲ್ಲರೂ ಕೋವಿಡ್ ನಿಯಂತ್ರಣ ಲಸಿಕೆ ಪಡೆಯಬೇಕು, ಪಡೆಯದಿದ್ದಲ್ಲಿ ಪಡೆಯುವಂತೆ ಮನವರಿಕೆ ಮಾಡಬೇಕು ಎಂದು ಸಚಿವರು ಸಲಹೆ ಮಾಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಲಸಿಕಾ ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಚುರುಕಿನಿಂದ ಕಾರ್ಯನಿರ್ವಹಿಸಬೇಕು ಎಂದರು.

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ಡಾಟಾ ಎಂಟ್ರಿ ಆಪರೇಟರ್ ಗಳಿಗೆ ವೇತನ ಪಾವತಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ದ್ವನಿಗೂಡಿಸಿದ ಅಪ್ಪಚ್ಚು ರಂಜನ್ ಅವರು ಸ್ಥಳೀಯ ಏಜೆನ್ಸಿಗಳಿಗೆ ಅವಕಾಶ ಮಾಡುವಂತೆ ಅವರು ಸಲಹೆ ಮಾಡಿದರು.

ಶಾಸಕರಾದ ಕೆ,ಜಿ ಬೋಪಯ್ಯ ಅವರು ಮಾತನಾಡಿ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು, ಅಲ್ಲಿನ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಆದ್ದರಿಂದ ವೈದ್ಯರನ್ನು ನಿಯೋಜಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯಲ್ಲಿ ಪ್ರಥಮ ಡೋಸ್ ಪ್ರಗತಿ ಸಾಧಿಸಲಾಗಿದೆ. ಎರಡನೇ ಡೋಸ್ ಪ್ರಗತಿ ಸಾಧಿಸಲಾಗುವುದು. ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣಗೊಂಡವರಿಗೆ ಬೂಸ್ಟರ್ ಡೋಸ್ ಪ್ರಗತಿ ಸಾಧಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಲಸಿಕಾಧಿಕಾರಿ ಡಾ.ಗೋಪಿನಾಥ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟರಾಜು ಹಲವು ಮಾಹಿತಿ ನೀಡಿದರು.

ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಚಿವರಾದ ಬಿ.ಸಿ.ನಾಗೇಶ್ ಅವರು ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿದ್ದು, ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ ಎಂದರು.

ಜಿಲ್ಲೆಯಲ್ಲಿ ಕೊವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ. ಕೋವಿಡ್ ಪಾಸಿಟಿವ್ ಬಂದಲ್ಲಿ ಹೋಮ್ ಐಸೋಲೇಷನ್ ಹಾಗೂ ಆಸ್ಪತ್ರೆಗಳಿಗೆ ದಾಖಲು ಮಾಡಲಾಗುತ್ತಿದ್ದು, ವೈದ್ಯಕೀಯ ಸೇವೆ ಕಲ್ಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಅರ್ಹರೆಲ್ಲರು ಕೋವಿಡ್ ಲಸಿಕೆ ಪಡೆಯಬೇಕು. ಮುಂಚೂಣಿ ಕಾರ್ಯಕರ್ತರು ಬೂಸ್ಟರ್ ಡೋಸ್ ಪಡೆಯಬೇಕು ಎಂದು ಸಚಿವರು ಹೇಳಿದರು. ಎಸ್‍ಎಸ್‍ಎಲ್.ಸಿ ಪರೀಕ್ಷೆಯು ನಿಗದಿಯಂತೆ ನಡೆಯಲಿದೆ ಎಂದು ಸಚಿವರು ಪ್ರತಿಕ್ರಿಯಿಸಿದರು.

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ರವಿಕುಶಾಲಪ್ಪ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿ,ಪಂ ಸಿಇಒ ಭನ್ವರ್ ಸಿಂಗ್ ಮೀನಾ, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡೂ ಇತರರು ಇದ್ದರು.