ಮಂಡ್ಯದಲ್ಲಿ ಅಪ್ರಾಪ್ತರ ಪ್ರೇಮ ಪ್ರಕರಣ: ಪ್ರಿಯಕರನ ಕೊಲೆ, ಖಿನ್ನತೆಯಿಂದ ಬಾಲಮಂದಿರದಲ್ಲೇ ಅಪ್ರಾಪ್ತೆ ಆತ್ಮಹತ್ಯೆ!

ಮಂಡ್ಯ: ಕೊಲೆ ಆರೋಪದ ಮೇಲೆ ಜೈಲು ಪಾಲಾಗಿರುವ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಪುತ್ರಿ ಮನ್ವಿತಾ (17) ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ವಿಶ್ವೇಶ್ವರಯ್ಯ ನಗರದ 14ನೇ ಕ್ರಾಸ್‌ನಲ್ಲಿರುವ ಬಾಲಮಂದಿರದಲ್ಲಿ ಬಾಲಕಿಗೆ ರಕ್ಷಣೆ ಒದಗಿಸಲಾಗಿತ್ತು. ಕಳೆದ ನಾಲ್ಕೈದು ತಿಂಗಳಿಂದ ಬಾಲಮಂದಿರದಲ್ಲೇ ಇದ್ದ ಮಾನ್ವಿತಾ ಮಾನಸಿಕ ಖಿನ್ನತೆಗೆ ಒಳಗಾಗಿ ಸ್ನಾನಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಕಳೆದ ಏ.15 ರಂದು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ನಗರ ಭಜರಂಗ ದಳದ ವಿದ್ಯಾರ್ಥಿ ನಗರ ಘಟಕದ ಅಧ್ಯಕ್ಷ ದರ್ಶನ್ (17) ಎಂಬಾತನ ಮೇಲೆ ಮನ್ವಿತಾ ಪೋಷಕರು ಮಾರಾಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ದರ್ಶನ್ ಮೃತಪಟ್ಟಿದ್ದನು.

ದರ್ಶನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಲಿಂಗು ಹಾಗೂ ಆತನ ಪತ್ನಿ ಅನುರಾಧ ಸೇರಿದಂತೆ ೧೦ಕ್ಕೂ ಹೆಚ್ಚು ಮಂದಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸಾವಿಗೆ ಶರಣಾಗಿರುವ ಮನ್ವಿತಾ ತನ್ನ ಸಾವಿಗೂ ಮೊದಲು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us