ಕೆ.ಆರ್.ಆಸ್ಪತ್ರೆಯಲ್ಲಿ ಬುದ್ಧಿಮಾಂದ್ಯೆಯ ಮೇಲೆ ಅತ್ಯಾಚಾರ

ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆಯ ವಾರ್ಡ್‌ನಲ್ಲೇ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರವಾಗಿರುವ ದಾರುಣ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅತ್ಯಾಚಾರದ ಬಗ್ಗೆ ವೃದ್ಧೆಯೊಬ್ಬರು ಮಾಹಿತಿ ನೀಡಿದರೂ ಆಸ್ಪತ್ರೆಯ ವೈದ್ಯರು ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ವಾರ್ಡ್ ಕಿಟಕಿ ಗ್ರಿಲ್ ಅನ್ನು ಕಿತ್ತು ವಾರ್ಡ್ ಒಳ ನುಗ್ಗಿದ ಪಾತಕಿ ಅಪರಿಚಿತ ವ್ಯಕ್ತಿಯೊಬ್ಬ, ೩೦ ವರ್ಷದ ಮಹಿಳೆಯ ಮೇಲೆ ಅಮಾನುಷ ಕೃತ್ಯ ಎಸಗಿದ್ದಾನೆ. ಅತ್ಯಾಚಾರದ ಬಗ್ಗೆ ವೃದ್ಧೆಯೊಬ್ಬರು ಮಾಹಿತಿ ನೀಡಿದರೂ ಆಸ್ಪತ್ರೆಯವರು ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಾರ್ಡ್‌ನಲ್ಲಿದ್ದ ವೃದ್ಧೆ ಅತ್ಯಾಚಾರದ ಬಗ್ಗೆ ವಾರದ ಹಿಂದೆಯೇ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಾಹಿತಿ ನೀಡಿದ ವೃದ್ಧೆಯ ಮೇಲೆಯೇ ಹಲ್ಲೆ ಮಾಡಿ, ಬಾಯಿ ಬಿಡದಂತೆ ಆಸ್ಪತ್ರೆಯ ಸಿಬ್ಬಂದಿ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಮಾನವ ಹಕ್ಕುಗಳ ಸೇವಾ ಸಮಿತಿಯು ಮಾಹಿತಿ ನೀಡಿದ ನಂತರ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಪ್ರಕರಣದ ವಿಚಾರವಾಗಿ ಕೆ.ಆರ್.ಆಸ್ಪತ್ರೆ ಸೂಪರಿಂಟೆಂಡೆಂಟ್ ನಂಜುಂಡಸ್ವಾಮಿ ಮಾತನಾಡಿ, ಕಳ್ಳತನದ ಯತ್ನ ನಡೆದಿದೆ ಎಂದು ಹೇಳಲಾಗಿತ್ತು. ಅದಕ್ಕೆ ಸುಮ್ಮನಿದ್ದೆವು. ಆದರೆ ನಂತರ ಅತ್ಯಾಚಾರ ನಡೆದಿದೆ ಅನ್ನೋ ಆರೋಪ ಬಂದಿದೆ. ಈ ಕಾರಣದಿಂದ ಪೊಲೀಸರಿಗೆ ದೂರು ನೀಡಿದ್ದೇವೆ. ಆಕೆ ಬುದ್ಧಿಮಾಂದ್ಯ ಮಹಿಳೆ. ಸದ್ಯ ಪ್ರಾಥಮಿಕ ಪರೀಕ್ಷೆ ಮಾಡಲಾಗಿದೆ. ಅತ್ಯಾಚಾರದ ಬಗ್ಗೆ ಕಂಡುಬಂದಿಲ್ಲ. ಎಫ್.ಎಸ್.ಎಲ್ ವರದಿಗೆ ಕಳುಹಿಸಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಸಿಸಿಟಿವಿ ಫೂಟೆಜ್ ಅನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಸಿದ್ದಾರೆ.

× Chat with us