ಬೇವು-ಬೆಲ್ಲದ ವೈದ್ಯಕೀಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ಯುಗಾದಿ ಎಂದರೆ ನೆನಪಾಗುವುದೇ ಬೇವು-ಬೆಲ್ಲ. ಜೀವನ ಸುಖ-ದುಃಖದ ಸಮ್ಮಿಲನ ಎಂಬ ಸಂಕೇತವಾಗಿ ಯುಗಾದಿಯಂದು ಬೇವು-ಬೆಲ್ಲವನ್ನು ಮಿಶ್ರಣ ಮಾಡಿ ಸೇವಿಸಲಾಗುತ್ತದೆ. ಕೆಲವರಿಗೆ ಇದಕ್ಕೆ ಇನ್ನಷ್ಟು ಪದಾರ್ಥಗಳನ್ನು ಸೇರಿಸಿ ಸೇವಿಸುವ ಅಭ್ಯಾಸವೂ ಇದೆ. ಒಟ್ಟಿನಲ್ಲಿ ಇದು ಯುಗಾದಿ ಹಬ್ಬದ ಪ್ರಮುಖ ಭಾಗ. ಬೇವು ಬೆಲ್ಲಕ್ಕೆ ಭಾರತದ ಪುರಾತನ ಔಷಧಶಾಸ್ತ್ರವಾದ ಆಯುರ್ವೇದದಲ್ಲಿ ವಿಶೇಷ ಸ್ಥಾನ ಇದೆ. ಬೇವು, ಬೆಲ್ಲ ಎರಡೂ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿವೆ.

ಬೇವು:
ಬೇವಿನ ಎಲೆಗಳನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಅವನ ದೇಹ ವಜ್ರದಷ್ಟು ಗಟ್ಟಿಯಾಗುತ್ತದೆ, ಆತ ಶತಾಯುಷಿಯಾಗುತ್ತಾನೆ ಎನ್ನುತ್ತದೆ ಆಯುರ್ವೇದ. ಬೇವು ನಮ್ಮ ದೇಹದಲ್ಲಿರುವ ಕೆಟ್ಟ ಅಂಶವನ್ನೆಲ್ಲಾ ಹೋಗಲಾಡಿಸಿ ನಾವು ಮತ್ತಷ್ಟು ಬಲಿಷ್ಟವಾಗುವಂತೆ ಮಾಡುತ್ತದೆ. ಬೇವನ್ನು ವೈದ್ಯಕೀಯ ಕಲ್ಪವೃಕ್ಷ ಎಂದರೂ ತಪ್ಪಿಲ್ಲ.

* ಬೇವಿನ ಎಲೆಗಳನ್ನು ರೋಗ ನಿರೋಧಕವಾಗಿ, ರೋಗ ನಿವಾರಕವಾಗಿಯೂ ಬಳಸಿಕೊಳ್ಳಬಹುದು.
* ಬೇವಿನ ಮರದ ಎಲ್ಲ ಭಾಗಗಳೂ ಆರೋಗ್ಯಕ್ಕೆ ಬಹಳ ಉಪಯುಕ್ತವಾದವು.
* ಬೇವನ್ನು ಕೀಟನಾಶಕವಾಗಿ, ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ.
* ಚರ್ಮ ರೋಗಗಳು ಕಾಣಿಸಿಕೊಂಡಾಗ ಬೇವಿನ ಎಲೆಯೇ ರಾಮಬಾಣ.
* ಬೇವಿನ ಎಲೆಗಳನ್ನು ನೀರಿಗೆ ಕುದಿಸಿ ಅದನ್ನು ಸ್ನಾನಕ್ಕೆ ಬಳಸಿದರೆ ಚರ್ಮದ ತೊಂದರೆಗಳು ನಿವಾರಣೆಯಾಗುತ್ತವೆ.

ಬೆಲ್ಲ:
ಬೆಲ್ಲ ಅತ್ಯಂತ ಪುರಾತನ ಸಿಹಿ ಪದಾರ್ಥ. ಈಗಲೂ ಸಕ್ಕರೆಯ ಬದಲು ಬೆಲ್ಲವನ್ನು ಬಳಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಿಹಿ ಪದಾರ್ಥ, ಕಾಫಿ ಹಾಗೂ ಚಹಾ, ಜ್ಯೂಸ್‌ಗೆ ಬೆಲ್ಲ ಬಳಸಿದರೆ ಯಾವ ಅಡ್ಡಪರಿಣಾಮಗಳೂ ಇರುವುದಿಲ್ಲ. ಅಲ್ಲದೆ ಇದರಿಂದಾಗಿ ಆರೋಗ್ಯಕ್ಕೆ ಸಾಕಷ್ಟು ಉಪಯೋಗಗಳಿವೆ.

* ಕೆಮ್ಮು, ಅಸ್ತಮಾಗೆ ಬೆಲ್ಲ ಬಹಳ ಒಳ್ಳೆಯ ಔಷಧ.
* ಬೆಲ್ಲ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.
* ನೀರಿನಲ್ಲಿ ತೊಳೆದ ಬೆಲ್ಲ ಸೇವಿಸಿದರೆ ಪಿತ್ತ ಹತೋಟಿಗೆ ಬರುತ್ತದೆ.
* ಬೇಸಿಗೆಯಲ್ಲಿ ಬರುವ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಬೆಲ್ಲ ರಾಮಬಾಣ. ಆದ್ದರಿಂದಲೇ ಇದನ್ನು ರಾಮನವಮಿಯಲ್ಲಿ ಸಹ ಪಾನಕಕ್ಕೆ ಬಳಸುತ್ತಾರೆ.
* ಮೂತ್ರವಿಸರ್ಜನೆ ಸಂಬಂಧಿ ಸಮಸ್ಯೆಗಳಿದ್ದರೆ ಅದನ್ನು ಗುಣಪಡಿಸುವಲ್ಲಿಯೂ ಬೆಲ್ಲ ಬಹಳ ಉಪಯುಕ್ತವಾದುದು.
* ಬೆಲ್ಲದ ಸೇವನೆಯಿಂದ ಆಸಿಡಿಟಿ ಕಡಿಮೆಯಾಗುತ್ತದೆ, ಹಿಮೊಗ್ಲೋಬಿನ್‌ ಪ್ರಮಾಣ ಹೆಚ್ಚಾಗುತ್ತದೆ, ರಕ್ತ ಶುದ್ಧಿಯಾಗುತ್ತದೆ.

– ಡಾ.ಡಿ.ಟಿ.ಉಷಾ
ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆ, ಮೈಸೂರು

× Chat with us