ಮೆಹ್ತಾ ಟವರ್‌, ಜಿಕೆವಿಕೆ ಹಾಸ್ಟೆಲ್‌ನಲ್ಲಿ ಕೊರೊನಾ ಸ್ಫೋಟ

ಬೆಂಗಳೂರು: ರಾಜಧಾನಿಯ ಜಿಕೆವಿಕೆ ವಿದ್ಯಾರ್ಥಿ ಹಾಸ್ಟೆಲ್ ಹಾಗೂ ಮೆಹ್ತಾ ಟವರ್ ನ ಶೇರ್ ಖಾನ್ ಗಲ್ಲಿಯಲ್ಲಿ ಕೊರೊನಾ ಪ್ರಕರಣಗಳು ಸ್ಫೋಟಗೊಂಡಿದೆ. ಜಿಕೆವಿಕೆ ಹಾಸ್ಟೆಲ್‌ನ ೩೦ ವಿದ್ಯಾರ್ಥಿಗಳು ಹಾಗೂ ಮೆಹ್ತಾ ಟವರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 39 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಮೆಹ್ತಾ ಟವರ್‌ನಲ್ಲಿ ಮೊದಲು ಒಬ್ಬರಿಗೆ ಸೋಂಕು ತಗುಲಿತ್ತು. ನಂತರ ಅವರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಿದಾಗ ೩೯ ಮಂದಿಗೆ ಸೋಂಕು ತಗುಲಿರುವುದು ಕಂಡುಬಂದಿದೆ. ಸದ್ಯ ೨,000 ಜನರ ಪರೀಕ್ಷೆ ಮಾಡಲು ಗುರಿ ನಿಗದಿಪಡಿಸಿದ್ದು, ಇದಕ್ಕಾಗಿ ೮ ತಂಡಗಳು ಸಿದ್ಧವಾಗಿವೆ.

ʻಮೆಹ್ತಾ ಟವರ್ ಒಂದು ದೊಡ್ಡ ಕಟ್ಟಡದಲ್ಲಿ ಗೋಲ್ಡ್ ಮೇಕಿಂಗ್ ಮೊದಲಾದ ವಾಣಿಜ್ಯ ಮಳಿಗೆಗಳಿವೆ. ಆ ವಾಣಿಜ್ಯ ಮಳಿಗೆಗಳಲ್ಲಿ 150 ಜನ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ 20 ರಿಂದ 40 ವರ್ಷ ವಯಸ್ಸಿನವರು. ಒಬ್ಬರಿಗೆ ಕೆಮ್ಮು ನೆಗಡಿ ಎಂಬ ಕಾರಣಕ್ಕೆ ಪರೀಕ್ಷೆ ಮಾಡಿದಾಗ ಕೊರೊನಾ ದೃಢಪಟ್ಟಿದೆ. ಎಲ್ಲ ಮಳಿಗೆಗಳಲ್ಲೂ ಈಗ ಟೆಸ್ಟಿಂಗ್ ನಡೆಯುತ್ತಿದ್ದು, ಪಾಸಿಟಿವ್ ಬಂದವರನ್ನು ಅಲ್ಲೇ ಇದ್ದ ಖಾಲಿ‌ ಕಟ್ಟಡದಲ್ಲಿ ಐಸೋಲೇಟ್ ಮಾಡಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆʼ ಎಂದು ಆರೋಗ್ಯ ಅಧಿಕಾರಿ ದೇವಿಕಾ ರಾಣಿ ಮಾಹಿತಿ ನೀಡಿದ್ದಾರೆ.