ಸ್ಥಳೀಯಾಡಳಿತ ವ್ಯವಸ್ಥೆಯ ಹೆಜ್ಜೆ ಗುರುತುಗಳು: ಗುಪ್ತರು, ಮೌರ್ಯರ ಆಡಳಿತದಲ್ಲಿ ಬಲಿಷ್ಠವಾಗಿದ್ದ ಸ್ಥಳೀಯಾಡಳಿತ

-ವಿಲ್ಫ್ರೆಡ್ ಡಿಸೋಜ

ಇಂದಿನ ಆಧುನಿಕ ಭಾರತದಲ್ಲಿ ನಾವು ಕಾಣುತ್ತಿರುವ ಸ್ಥಳೀಯಾಡಳಿತ ವ್ಯವಸ್ಥೆಗೆ ಸುದೀರ್ಘವಾದ ಇತಿಹಾಸವಿದೆ. ರಾಜ-ಮಹಾರಾಜರ ಪುರಾತನ ಆಡಳಿತದಿಂದ ಆರಂಭಿಸಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಮೂಲಕ ಸ್ಥಾಪಿಸಲ್ಪಟ್ಟ ಸ್ಥಳೀಯಾಡಳಿತ ವ್ಯವಸ್ಥೆ ಕ್ರಮಿಸಿದ ಹೆಜ್ಜೆ ಗುರುತುಗಳು ಇತಿಹಾಸದ ದಾಖಲೆಗಳಾಗಿ ಉಳಿದಿವೆ. ಸಾಂಪ್ರದಾಯಿಕ ಸ್ಥಳೀಯಾಡಳಿತ ವ್ಯವಸ್ಥೆಯಿಂದ ಇಂದಿನ ಆಧುನಿಕ ಸ್ಥಳೀಯ ಸ್ವಯಂ ಆಡಳಿತದ (Local self Government) ಗುರಿಯತ್ತ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಇತಿಹಾಸವನ್ನು ತಿಳಿದುಕೊಳ್ಳುವುದು ತುಂಬ ಅಗತ್ಯ.

ಚಾರಿತ್ರಿಕ ಹಿನ್ನೆಲೆ: ಸ್ಥಳೀಯಾಡಳಿತ ವ್ಯವಸ್ಥೆಯ ಉಗಮದ ಕುರಿತು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ (ಕ್ರಿ.ಪೂ.400) ಉಲ್ಲೇಖವಿದೆ. ಅಂದಿನ ಸ್ಥಳೀಯಾಡಳಿತ ವ್ಯವಸ್ಥೆ ಗ್ರಾಮ ಸಂಘದ ಮೂಲಕ ನಡೆಯುತ್ತಿತ್ತು. ಮಹಾಭಾರತದ ಶಾಂತಿ ಪರ್ವದಲ್ಲಿ ಸಂಸದ್ ಎನ್ನುವ ಪದ ಇದೆ. ಇದನ್ನು ಜನ ಸಂಸದ್ ಎಂದು ಕರೆಯುತ್ತಿದ್ದರು. ವಾಲ್ಮೀಕಿ ರಾಮಾಯಣದಲ್ಲಿ ಬರುವ ಗಣಪದಗಳು ಗ್ರಾಮಾಡಳಿತದ ಒಕ್ಕೂಟಗಳಾಗಿದ್ದವು ಎಂದು ಹೇಳಲಾಗುತ್ತಿದೆ.

ಮುಂದೆ ರಾಜ ಮಹಾರಾಜರ ಆಡಳಿತದಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಸ್ಥಳೀಯಾಡಳಿತ ವ್ಯವಸ್ಥೆ ಮುಂದುವರಿಯಿತು. ಪ್ರಬಲವಾದ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದ ಮೊಗಲರ ಕಾಲಾವಧಿಯಲ್ಲಿ ಸ್ಥಳೀಯಾಡಳಿತವನ್ನು ಬಹುತೇಕ ಕಂದಾಯ ಸಂಗ್ರಹ ಮಾಡುವ ಕಾರ್ಯಕ್ಕೆ ಬಳಸಲಾಗುತ್ತಿತ್ತು.

ಗುಪ್ತರು ಮತ್ತು ಮೌರ್ಯ ಅರಸರ ಆಡಳಿತಾವಧಿಯಲ್ಲಿ ಸ್ಥಳೀಯಾಡಳಿತ ವ್ಯವಸ್ಥೆ ಹೆಚ್ಚು ಬಲಿಷ್ಠವಾಯಿತು. ಆದರೆ ಈ ವ್ಯವಸ್ಥೆ ಸಂಪೂರ್ಣವಾಗಿ ಜಮೀನ್ದಾರಿ ವ್ಯವಸ್ಥೆಯ ಹಿಡಿತಕ್ಕೆ ಒಳಪಟ್ಟಿತ್ತು. ರಾಜ, ಪಾಳೇಗಾರರ ಹಿಡಿತದಲ್ಲಿದ್ದು, ಅವರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಪಂಚರ ಗುಂಪು ಗ್ರಾಮೀಣ ಆಡಳಿತದ ನಿಯಂತ್ರಣವನ್ನು ಮಾಡುತ್ತಿತ್ತು. ಇಂದಿನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶವನ್ನು ಒಳಗೊಂಡಿದ್ದ ಭಾರತೀಯ ಉಪಖಂಡದಲ್ಲಿ ಆಡಳಿತವು ಸುಮಾರು 600 ಅರಸರ ಆಳ್ವಿಕೆಯಲ್ಲಿ ಹರಿದು ಹಂಚಿ ಹೋಗಿತ್ತು. ಆದರೆ ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ವ್ಯತ್ಯಾಸಗಳು ಇರಲಿಲ್ಲ ಎಂದು ಇತಿಹಾಸದ ಅಧ್ಯಯನಕಾರರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಅಂದಿನ ಆಳರಸರು ತಮ್ಮ ಹಿಂಬಾಲಕರಾಗಿದ್ದ ಗ್ರಾಮಾಡಳಿತದ ಪ್ರಮುಖರಾದ ಪಂಚರಿಗೆ 3 ಅಧಿಕಾರಗಳನ್ನು ಕೊಟ್ಟಿದ್ದರು.

1. ನ್ಯಾಯ ತೀರ್ಮಾನದ ಅಧಿಕಾರ

2. ಭೂಮಿ ಹಂಚುವ ಅಧಿಕಾರ

3. ಕರ ಸಂಗ್ರಹಿಸುವ ಅಧಿಕಾರ

ಅಂದಿನ ಪಂಚರ ಗ್ರಾಮಾಡಳಿತವು ಜಮೀನ್ದಾರಿ ಪದ್ಧತಿಯನ್ನು ಪೋಷಿಸಲು ಮತ್ತು ಆ ವರ್ಗದ ಹಿತವನ್ನು ಕಾಪಾಡಲು ಹೆಚ್ಚು ಗಮನ ನೀಡಿತ್ತು. ಅನುಸೂಚಿತ ಜಾತಿ, ಪಂಗಡ, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಭೂರಹಿತರಿಗೆ ಆಡಳಿತದಲ್ಲಿ ಭಾಗಿಗಳಾಗುವ ಯಾವುದೇ ಅವಕಾಶಗಳು ಇರಲಿಲ್ಲ. ಪ್ರಜಾಪ್ರಭುತ್ವ ಮೌಲ್ಯಗಳು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಅವಕಾಶಗಳು ತೀರಾ ವಿರಳವಾಗಿದ್ದವು. ಸಾವಿರಾರು ವರ್ಷಗಳು ಚಾಲ್ತಿಯಲ್ಲಿದ್ದ ಇಂತಹ ಪುರಾತನ ವ್ಯವಸ್ಥೆಯ ಪಳೆಯುಳಿಕೆಗಳು ಗ್ರಾಮೀಣ ಭಾರತದ ಕೆಲವೆಡೆಗಳಲ್ಲಿ ಇಂದಿಗೂ ಜೀವಂತವಾಗಿರುವುದನ್ನು ಕಾಣಬಹುದಾಗಿದೆ.

ಬ್ರಿಟಿಷರ ಆಡಳಿತ: ಭಾರತೀಯ ಉಪಖಂಡದಲ್ಲಿ ಆಡಳಿತ ನಡೆಸುತ್ತಿದ್ದ ರಾಜರುಗಳ ನಡುವೆ ನಡೆಯುತ್ತಿದ್ದ ಯುದ್ಧಗಳು ಮತ್ತು ಅನೈಕ್ಯತೆಯ ಪರಿಸ್ಥಿತಿಯನ್ನು ಬಳಸಿಕೊಂಡು ಸಾಮ್ರಾಜ್ಯಶಾಹಿ ಬ್ರಿಟಿಷರು ಈ ನೆಲದಲ್ಲಿ ಪಾದ ಊರಿದ್ದು, ಸುಮಾರು 300 ವರ್ಷಗಳು ಆಡಳಿತದ ಹಿಡಿತವನ್ನು ಸಾಧಿಸಿದ್ದು ತಿಳಿದಿರುವ ವಿಚಾರವಾಗಿದೆ. ಬ್ರಿಟಿಷರ ಆಡಳಿತದಲ್ಲಿ ಭಾರತ ದೇಶ (Nation state)ವಾಗಿ ಬದಲಾಯಿತು. ಬ್ರಿಟಿಷರು ಭಾರತದ ಸ್ಥಳೀಯಾಡಳಿತ ವ್ಯವಸ್ಥೆಯನ್ನು ತಮ್ಮ ಆಡಳಿತಕ್ಕೆ ಪೂರಕವಾಗಿ ಬದಲಾವಣೆ ಮಾಡಿದರು. ಬ್ರಿಟಿಷ್ ಭಾರತದಲ್ಲಿ ಸ್ಥಳೀಯಾಡಳಿತದಲ್ಲಾದ ಬದಲಾವಣೆಗಳನ್ನು ಅನುಕ್ರಮವಾಗಿ ಈ ಕೆಳಗಿನಂತೆ ದಾಖಲಿಸಲಾಗಿದೆ.

* ವೈಸರಾಯ್ ಲಾರ್ಡ್ ಮೆಯೋ ರೆಸಲ್ಯೂಷನ್-1870

* ಲಾರ್ಡ್ ರಿಪ್ಪನ್ಸ್ ರೆಸಲ್ಯೂಷನ್-1882

*ದಿ ರಿಪೋರ್ಟ್ ಆಫ್ ರಾಯಲ್ ಕಮಿಷನ್ ಆನ್ ಡಿಸೆಂಟ್ರಲೈಸೇಷನ್- 1909

ಈ ಮೇಲಿನ ನಿರ್ಧಾರಗಳಿಗೆ ಅನುಗುಣವಾಗಿ ರಾಜರ ಮಹಾರಾಜರಯಿತಿ (Village Pancahayth) ಮತ್ತು ಡಿಸ್ಟ್ರಿಕ್ಟ್ ಬೋರ್ಡ್ (District Board) ವ್ಯವಸ್ಥೆಗಳು ಜಾರಿಗೆ ಬಂದವು.

ಇದಕ್ಕೆ ಪೂರಕವಾಗಿ ಅಂದಿನ ಪ್ರಾಂತೀಯ ಸರ್ಕಾರಗಳು ಅನುಮೋದಿಸಿದ ಪ್ರಮುಖ ಕಾಯಿದೆಗಳು ಹೀಗಿವೆ.

* ಬೆಂಗಾಲ್ ವಿಲೇಜ್ ಸೆಲ್ಫ್ ಗವರ್ನಮೆಂಟ್ ಆಕ್ಟ್-1919

* ಮದ್ರಾಸ್ ಬಾಂಬೆ ಆಂಡ್ ಯುನೈಟೆಡ್ ಪ್ರಾವಿನ್ಸಸ್ ವಿಲೇಜ್ ಪಂಚಾಯಿತಿ ಆಕ್ಟ್- 1920

* ಬಿಹಾರ್ ಆಂಡ್ ಒರಿಸ್ಸ ವಿಲೇಜ್ ಅಡ್ಮಿನಿಸ್ಟ್ರೇಶನ್ ಆಕ್ಟ್- 1926

* ಅಸ್ಸಾಂ ರೂರಲ್ ಸೆಲ್ಫ್ ಗವರ್ನಮೆಂಟ್ ಆಕ್ಟ್ – 1926

*ಪಂಜಾಬ್ ವಿಲೇಜ್ ಪಂಚಾಯತ್ ಆಕ್ಟ್- 1935

ಬ್ರಿಟಿಷ್ ಆಡಳಿತದ ಭಾರತದಲ್ಲಿ ಪ್ರಾಂತೀಯ ಸರ್ಕಾರಗಳಿಗೆ ಸ್ವಲ್ಪಮಟ್ಟಿನ ಸ್ವಾಯತ್ತತೆಯನ್ನು ಕೊಡುವ 1934ರ ಕಾಯಿದೆ 1937ರಿಂದ ಅನುಷ್ಠಾನಕ್ಕೆ ಬಂದಿತು. 11 ಪ್ರಾಂತೀಯ ಸರ್ಕಾರಗಳ ಪೈಕಿ ೮ರಲ್ಲಿ ಅಧಿಕಾರಕ್ಕೆ ಬಂದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸ್ಥಳೀಯಾಡಳಿತ ವ್ಯವಸ್ಥೆಗೆ ಹೆಚ್ಚಿನ ಒತ್ತನ್ನು ನೀಡಿತ್ತು ಎನ್ನುವ ಅಂಶಗಳು ಇತಿಹಾಸದಲ್ಲಿ ದಾಖಲಾಗಿವೆ. ಆದರೆ ಅಂದಿನ ಸ್ಥಳೀಯಾಡಳಿತ ಸಂಸ್ಥೆಗಳು ತುಂಬ ದುರ್ಬಲವಾಗಿದ್ದವು. ಸಮಾಜದ ಎಲ್ಲಾ ವರ್ಗಗಳಿಗೆ ಭಾಗವಹಿಸುವಿಕೆಯ ಅವಕಾಶ ಇರಲಿಲ್ಲ. ಭೂ ಒಡೆತನ ಹೊಂದಿದ ಜಮೀನ್ದಾರರು ಮತ್ತು ಅಧಿಕಾರಶಾಹಿ ಎಲ್ಲವನ್ನೂ ನಿಯಂತ್ರಿಸುತ್ತಿತ್ತು. ಪ್ರಜಾಪ್ರಭುತ್ವದ ಯಾವ ಗುಣ ಲಕ್ಷಣಗಳೂ ಈ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಇರಲಿಲ್ಲ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಆಶಯ ಇದಕ್ಕಿಂತ ಭಿನ್ನವಾಗಿತ್ತು. ಅವರು ಗ್ರಾಮ ಸ್ವರಾಜ್ಯದ ಬುನಾದಿಯ ಮೇಲೆ ರಾಷ್ಟ್ರೀಯ ಸರ್ಕಾರ ಸ್ಥಾಪಿಸುವ ಆಶಯವನ್ನು ಹೊಂದಿದ್ದರು. ಗಾಂಧೀಜಿಯವರ 1948ರ ಜನವರಿ ಪ್ಲಾನ್ ಅವರ ಆಶಯವನ್ನು ಪ್ರತಿಪಾದಿಸುತ್ತದೆ. ಪ್ರತಿಯೊಂದು ಗ್ರಾಮವೂ ಜನರಿಂದ ಆರಿಸಲ್ಪಟ್ಟ ನಾಯಕ(ಸರಪಂಚ್)ನನ್ನು ಹೊಂದಿರಬೇಕು. ಒಂದು ತಾಲ್ಲೂಕಿನ ವ್ಯಾಪ್ತಿಯ ಎಲ್ಲ ಗ್ರಾಮಗಳ ಸರಪಂಚರನ್ನು ಒಳಗೊಂಡ ತಾಲ್ಲೂಕು ಪಂಚಾಯಿತಿ ಮತ್ತು ತಾಲ್ಲೂಕು ಸರಪಂಚರನ್ನು ಒಳಗೊಂಡ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಸರಪಂಚ್ ಮತ್ತು ಮುನ್ಸಿಪಲ್ ಪಂಚಾಯಿತಿಗಳ ಪ್ರತಿನಿಧಿಗಳನ್ನೊಳಗೊಂಡ ಪ್ರಾಂತೀಯ ಸರ್ಕಾರದ ಪರಿಕಲ್ಪನೆಯನ್ನು ಗಾಂಧೀಜಿಯವರು ಪ್ರತಿಪಾದಿಸಿದ್ದರು. ರಕ್ಷಣೆ, ನೋಟು ಮುದ್ರಣ ಮತ್ತು ನಿಯಂತ್ರಣ, ತೆರಿಗೆ, ಬೃಹತ್ ಕೈಗಾರಿಕೆಗಳು ಮತ್ತು ರಾಷ್ಟ್ರೀಯ ಮಹತ್ವದ ವಲಯಗಳು ಮಾತ್ರ ರಾಷ್ಟ್ರೀಯ ಪಂಚಾಯಿತಿಯ ನಿಯಂತ್ರಣದಲ್ಲಿ ಇರಬೇಕು ಎನ್ನುವುದು ಅವರ ವಾದವಾಗಿತ್ತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಾವು ಗಾಂಧೀ ಪ್ರಣೀತ ಹಿಂದ್ ಸ್ವರಾಜ್ ಆಡಳಿತವನ್ನು ರಾಷ್ಟ್ರ ಮಟ್ಟದಲ್ಲಿ ಸ್ಥಾಪಿಸುವ ದಾರಿಯಿಂದ ವಿಮುಖರಾಗಿದ್ದೇವೆ. ಆದರೆ ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣದ ಮೂಲಕ ಗ್ರಾಮ ಸ್ವರಾಜ್ ಆಶಯಗಳನ್ನು ಸ್ವಲ್ಪ ಮಟ್ಟಿಗೆ ಜೀವಂತವಾಗಿ ಇಡುವ ಪ್ರಯತ್ನಗಳು ಮುಂದುವರಿದಿವೆ.

× Chat with us