ಪ್ರತಿದಿನ ಕೋವಿಡ್‌ನಿಂದ 40-50 ಜನ ಸತ್ತರೂ ಸುಳ್ಳು ಲೆಕ್ಕ ತೋರಿಸಲಾಗುತ್ತಿದೆ: ಎಂ. ಲಕ್ಷ್ಮಣ್‌

ಮೈಸೂರು: ಮೈಸೂರಿನಲ್ಲಿ ಕೊರೊನಾದಿಂದ ಮೃತಪಡುವವರ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ. ಪ್ರತಿದಿನ ೪೦-೫೦ ಜನರು ಮೃತಪಟ್ಟರೂ ಸಂಖ್ಯೆಯನ್ನು ೧೫ಕ್ಕೆ ಸೀಮಿತಗೊಳಿಸಲಾಗುತ್ತಿದೆ. ಕೊರೊನಾ ಪ್ರಕರಣಗಳು ಕಡಿಮೆಯಾಗಲೆಂದು ಪರೀಕ್ಷೆಯನ್ನೇ ಕಡಿಮೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆಗಳಾಗುವ ಮುನ್ಸೂಚನೆ ಕಾಣುತ್ತಿದೆ. ಕೊರೊನಾ ನಿಯಂತ್ರಣದಲ್ಲಿದೆ ಎಂದು ತೋರಿಸಲು ಪರೀಕ್ಷೆಗಳನ್ನು ಕಡಿಮೆ ಮಾಡಿ ಸಾವಿನ ಸಂಖ್ಯೆಗಳನ್ನು ಮರೆಮಾಚಲಾಗುತ್ತಿದೆ. ಸ್ಮಶಾನಗಳಿಗೆ ಭೇಟಿ ನೀಡಿದರೆ ನಿಜಾಂಶ ತಿಳಿಯುತ್ತದೆ ಎಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಚಾಮರಾಜನಗರಕ್ಕೆ ತಾವೇ ಆಕ್ಸಿಜನ್ ಕಳುಹಿಸಿಕೊಟ್ಟಿದ್ದು ಎನ್ನುತ್ತಾರೆ. ಆದರೆ ನ್ಯಾಯಮೂರ್ತಿ ನೀಡಿರುವ ವರದಿಯಲ್ಲಿ ಒಂದು ಕಡೆಯೂ ಅವರ ಹೆಸರಿಲ್ಲ. ಇನ್ನು ಸ್ವತಃ ಪ್ರತಾಪ್ ಸಿಂಹ ಅವರೇ ಹೇಳಿರುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಸಾಕಷ್ಟು ಆಸ್ಪತ್ರೆಗಳು ನಿರ್ಮಾಣವಾಗಿವೆ. ಇದನ್ನು ತಮ್ಮ ಪಕ್ಷದ ಸಂಸದರೇ ಹೇಳಿದ್ದರೂ ಬಿಜೆಪಿ ವಕ್ತಾರರು ಮೈಸೂರಿಗೆ ಸಿದ್ದರಾಮಯ್ಯ ಅವರ ಕೊಡುಗೆ ಏನು ಎಂದು ಪ್ರಶ್ನಿಸಿರುವುದು ಹಾಸ್ಯಾಸ್ಪದ ಎಂದರು.

ಕಳೆದ ಬಾರಿ ಕೊರೊನಾ ಕಾಣಿಸಿಕೊಂಡಾಗ ಸಾಕಷ್ಟು ಸಂಘ-ಸಂಸ್ಥೆಗಳು, ಎನ್‌ಜಿಒಗಳು ನಿರ್ಗತಿಕರಿಗೆ ಸಹಾಯ ಮಾಡಲು ಮುಂದೆ ಬಂದಿದ್ದವು. ಆದರೆ ಸರ್ಕಾರ ಅವರಲ್ಲಿ ಎಷ್ಟೋ ಜನರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ, ಸಹಾಯ ಮಾಡಲು ಹಣ ಹೇಗೆ ಬಂತು ಎಂಬುದನ್ನು ಪ್ರಶ್ನಿಸಿರುವುದರಿಂದ ಈಗ ಯಾರೂ ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಮೈಸೂರಿನಲ್ಲಿ ಜಿಲ್ಲಾಡಳಿತ, ನಗರಪಾಲಿಕೆ ನಿರಾಶ್ರಿತರ ಕೇಂದ್ರ ತೆರೆದು ನಿರ್ಗತಿಕರಿಗೆ ಆಹಾರ, ಆಶ್ರಯ ನೀಡಿರುವುದು ಅಭಿನಂದನಾರ್ಹ. ಆದರೆ ಈ ವಿಷಯದಲ್ಲಿ ಸಂಘ-ಸಂಸ್ಥೆಗಳ ಸಹಾಯ ಅತ್ಯಗತ್ಯ. ಕಳೆದ ಬಾರಿಯಂತೆ ಎನ್‌ಜಿಒಗಳು ಮುಂದೆ ಬಂದು ನಿರ್ಗತಿಕರು, ಬಡವರಿಗೆ ಆಹಾರ ನೀಡಿ, ಸಹಾಯ ಮಾಡಿ ಎಂದು  ಜಿಲ್ಲಾಧಿಕಾರಿ, ನಗರಪಾಲಿಕೆ ಆಯುಕ್ತರು ಮನವಿ ಮಾಡಬೇಕು ಎಂದು ಹೇಳಿದರು.

ಮೈಸೂರಿನಲ್ಲಿ ಕೊರೊನಾ ನಿರ್ವಹಣೆ ಪಕ್ಷಾತೀತವಾಗಿ ನಡೆಯಬೇಕು. ಆದರೆ ಇಲ್ಲಿನವರು ತಮ್ಮ ಪಕ್ಷದವರನ್ನು ಮಾತ್ರ ಕೊರೊನಾ ನಿರ್ವಹಣೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾದರೆ ಎಲ್ಲರೂ ಸೇರಿ ಕೊರೊನಾ ಮಣಿಸಲು ಸಾಧ್ಯವಿಲ್ಲ. ಆಕ್ಸಿಮೀಟರ್, ಔಷಧಿಗಳ ವ್ಯಾಪಾರದಲ್ಲಿ ದಂಧೆ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ವಹಿಸಬೇಕು. ಮೈಸೂರಿನಲ್ಲೂ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಅಲ್ಲದೆ ಇಂದಿರಾ ಕ್ಯಾಂಟೀನ್‌ನಲ್ಲಿ ಹಳಸಿದ ಆಹಾರ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆದು ಉತ್ತಮ ಆಹಾರ ಸಿಗುವಂತಾಗಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಶಿವಣ್ಣ, ಗಿರೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.