ರಾಜ್ಯ ಸಾರಿಗೆ ನೌಕರರಿಗೆ ಇನ್ನೂ ಸಿಗದ ಏಪ್ರಿಲ್‌ ತಿಂಗಳ ಸಂಬಳ

ಮೈಸೂರು: ಕೊರೊನಾ ೨ನೇ ಅಲೆಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಾಹನಗಳ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಇದರಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಈಶಾನ್ಯ ಸಾರಿಗೆ ನೌಕರರಿಗೆ ಆರ್ಥಿಕ ಸಂಕಷ್ಟ ತಲೆದೋರಿದೆ.
ಸಾರಿಗೆ ನೌಕರರ ಮುಷ್ಕರದ ಬೆನ್ನಲ್ಲೇ ಜನತಾ ಕರ್ಫ್ಯೂ ಪ್ರಾರಂಭವಾಯಿತು. ಮೇ ೧೦ರಿಂದ ಲಾಕ್‌ಡೌನ್ ಸಹ ಪ್ರಾರಂಭವಾಯಿತು. ಇದರಿಂದ ರಾಜ್ಯದ ಸಾರಿಗೆ ನಿಗಮಗಳ ನೌಕರರಿಗೆ ಏಪ್ರಿಲ್ ತಿಂಗಳ ವೇತನವೇ ಪಾವತಿಯಾಗಿಲ್ಲ. ಈ ಬಗ್ಗೆ ನೌಕರರು ಪ್ರಶ್ನಿಸಿದರೆ, ‘ಸಂಬಳ ನೀಡಲು ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರಲಾಗಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಸಬೂಬು ಹೇಳುತ್ತಾರೆ ಎಂದು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ್ ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಈಶಾನ್ಯ ಸಾರಿಗೆ ನಿಗಮಗಳ ಸುಮಾರು ೧.೨೫ ಲಕ್ಷ ನೌಕರರು ಏ.೭ರಿಂದ ೨೧ರ ವರೆಗೆ ಕೆಲಸ ಬಹಿಷ್ಕರಿಸಿ ಮುಷ್ಕರ ನಡೆಸಿದ್ದರು. ಇದರಿಂದ ಇಲಾಖೆಗೆ ಸುಮಾರು ೬ ಕೋಟಿ ರೂ.ಗಳಿಗಿಂತಲೂ ಅಧಿಕ ಆದಾಯ ನಷ್ಟವಾಗಿತ್ತು. ನಂತರ ಸರ್ಕಾರ ನೀಡಿದ ಭರವಸೆ ನಂಬಿ ಪ್ರತಿಭಟನೆ ಕೈಬಿಟ್ಟಿದ್ದ ನೌಕರರು, ಕೋವಿಡ್ ಪರೀಕ್ಷೆ ಮಾಡಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಬೆನ್ನಲ್ಲೇ ರಾಜ್ಯದಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದು ಬಸ್‌ಗಳು ಆಯಾ ವಿಭಾಗಗಳಲ್ಲೇ ನಿಂತಿದ್ದು, ಸಾರಿಗೆ ನೌಕರರ ಕುಟುಂಬಗಳಿಗೆ ಆರ್ಥಿಕ ಸಂಕಷ್ಟದ ಹೊರೆಯಾಗಿದೆ.
ಬಸ್‌ಗಳು ಆಯಾ ಡಿಪೊಗಳಲ್ಲೇ ನಿಂತಿವೆ. ಏಪ್ರಿಲ್ ವೇತನಕ್ಕಾಗಿ ಲ್ ಸಂಬಳಕ್ಕಾಗಿ ಕಾಯುತ್ತಿದ್ದ ನೌಕರರಿಗೆ, ಹಣವಿಲ್ಲವೆಂಬ ಸಾರಿಗೆ ಇಲಾಖೆಯ ಉತ್ತರ ನಿರಾಶೆಯನ್ನುಂಟು ಮಾಡಿದೆ.
‘ಮುಷ್ಕರ ಹೊರತುಪಡಿಸಿ ಏ.೧ರಿಂದ ೬ರ ವರೆಗೆ ಹಾಗೂ ಏಪ್ರಿಲ್ ೨೨ರಿಂದ ೩೦ರವರೆಗೆ ಬಹುತೇಕ ನೌಕರರು ಕೆಲಸ ಮಾಡಿದ್ದಾರೆ. ಆದರೆ, ನೌಕರರಿಗೆ ಇದುವರೆಗೂ ಇಲಾಖೆ ವೇತನ ನೀಡಿಲ್ಲ. ಲಾಕ್‌ಡೌನ್ ಸಮಯದಲ್ಲಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎನ್ನುತ್ತಾರೆ ವಿಶ್ವನಾಥ್.
ಅಲ್ಲದೆ, ‘ಆದಾಯದಲ್ಲಿ ಸಾಕಷ್ಟು ನಷ್ಟವಾಗಿದೆ. ಪ್ರತಿ ತಿಂಗಳು ಸಂಬಳ ನೀಡಲು ೩೨೫ ಕೋಟಿ ರೂ. ಬೇಕು. ಮುಂದಿನ ೩ ತಿಂಗಳು ವೇತನ ನೀಡುವುದಕ್ಕಾಗಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರಲಾಗಿದೆ. ಅನುದಾನ ಬರುತ್ತಿದ್ದಂತೆ ವೇತನ ಬಿಡುಗಡೆ ಮಾಡಲಾಗುತ್ತದೆ’ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
‘ಮುಷ್ಕರದಲ್ಲಿ ಪಾಲ್ಗೊಂಡಿದ್ದ ೧೮ ಸಾವಿರ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ, ತರಬೇತಿನಿರತ ೩ ಸಾವಿರ ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿದೆ’ ಎಂದೂ ಮೂಲಗಳು ಹೇಳಿವೆ.

 

ಮೈಸೂರಿನಲ್ಲಿ ಚಾಲಕರು, ನಿರ್ವಾಹಕರು ಸೇರಿದಂತೆ ನಗರದಲ್ಲಿ ೧,೫೦೦ ಹಾಗೂ ಗ್ರಾಮಾಂತರ ವಿಭಾಗದಲ್ಲಿ ೧,೬೦೦ ಮಂದಿ ಕೆಎಸ್‌ಆರ್‌ಟಿಸಿ ನೌಕರರರು ಇದ್ದಾರೆ. ನಮ್ಮ ಯಾವ ಮನವಿಗೂ ಸರ್ಕಾರ ಸ್ಫಂದಿಸುತ್ತಿಲ್ಲ. ಅದಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಮೇ ೨೬ರಂದು ಹೈಕೋರ್ಟ್‌ನಲ್ಲಿ ವಿಚಾರಣೆಯಿದೆ. ಅಲ್ಲಿಯೇ ನಮ್ಮ ಬೇಡಿಕೆಗಳು, ನೌಕರರ ವರ್ಗಾವಣೆ ಹಾಗೂ ತರಬೇತುದಾರರನ್ನು ವಜಾಗೊಳಿಸಿರುವ ವಿಚಾರಗಳನ್ನು ಪ್ರಸ್ತಾಪಿಸಲಾಗುವುದು.
-ವಿಶ್ವನಾಥ್, ಅಧ್ಯಕ್ಷ, ಮೈಸೂರು ಕೆಎಸ್‌ಆರ್‌ಟಿಸಿ ನೌಕರರ ಸಂಘ

ನೌಕರರ ಬಗ್ಗೆ ನಮಗೂ ಕಾಳಜಿಯಿದೆ. ವೇತನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ವೇತನ ನೀಡಲಾಗುವುದು.
-ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ,
ಗ್ರಾಮಾಂತರ ಬಸ್ ನಿಲ್ದಾಣ,ಮೈಸೂರು