ಕೊಡಗಿನಲ್ಲಿ ಮಳೆ: ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ.

ಕೊಡಗಿನಲ್ಲಿ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 200 ಮಿ.ಮೀ.ಗೂ ಅಧಿಕ ಮಳೆಯಾಗಿದ್ದು, ಜನಜೀವನ ತತ್ತರಿಸಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಆರಂಭದಲ್ಲೇ ಭರ್ತಿಯಾಗಿದ್ದು, ಸ್ಥಳದಲ್ಲಿ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಶುಕ್ರವಾರ ಬೆಳಿಗ್ಗೆ ಮಳೆ ಕೊಂಚ ಕಡಿಮೆಯಾಗಿದ್ದು, ಸಂಜೆ ಮತ್ತೆ ಮಳೆ ಹೆಚ್ಚಾದಲ್ಲಿ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಉಳಿದಂತೆ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ನದಿ ತೊರೆಗಳು ತುಂಬಿ ಹರಿಯುತ್ತಿದೆ. ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುವ ಮುನ್ಸೂಚನೆ ನೀಡಿರುವ ಹಿನ್ನೆಲೆ ನದಿಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಅನಾಹುತ ಎದುರಿಸಲು ಎನ್‌ಡಿಆರ್‌ಎಫ್ ತಂಡ ಕೂಡ ಜಿಲ್ಲೆಯಲ್ಲಿ ತಂಗಿದೆ.