ಕೇರಳದಲ್ಲಿ ಟೊಮ್ಯಾಟೋ ಜ್ವರ ಹಿನ್ನೆಲೆ, ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಕಟ್ಟೆಚ್ಚರ!

ಚಾಮರಾಜನಗರ : ಕಳೆದೆರಡು ದಿನಗಳಿಂದ ಕೇರಳದಲ್ಲಿರುವ ಮಕ್ಕಳಲ್ಲಿ ಟೊಮ್ಯಾಟೋ ಜ್ವರ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಮಕ್ಕಳ ಪೋಷಕರಲ್ಲಿ ಸಾಕಷ್ಟು ಆತಂಕವನ್ನುಂಟುಮಾಡಿದೆ.

ಕೇರಳದಿಂದ ಸಾಕಷ್ಟು ಪ್ರಯಾಣಿಕರು ಗುಂಡ್ಲುಪೇಟೆ ಮಾರ್ಗವಾಗಿ ನಿತ್ಯ ಸಂಚರಿಸುವ ಕಾರಣ ಇಲ್ಲಿನ ಮಕ್ಕಳಿಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ ಗಡಿಯ ಮೂಲೆಹೊಳೆ ಚೆಕ್‌ ಪೋಸ್ಷಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಚಾಮರಾಜನಗರ ಡಿಎಚ್‍ಒ ಡಾ.ವಿಶ್ವೇಶ್ವರಯ್ಯ ತಿಳಿಸಿದ್ದಾರೆ. ಇಂದಿನಿಂದಲೇ ಕೇರಳದಿಂದ ಬರುವ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ತಪಾಸಣೆಯನ್ನು ಮಾಡಲು ಇಂದಿನಿಂದಲೇ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು. ಚಾಮರಾಜನಗರದಲ್ಲಿ ಒಟ್ಟು 67 ಸಾವಿರ ಮಕ್ಕಳು ವರ್ಷ ಒಳಪಟ್ಟಿನವರಿದ್ದಾರೆ, ಹೀಗಾಗಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ಪ್ರತಿ ಮನೆ-ಮನೆಗೂ ಬೇಟಿ ನೀಡಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಟೊಮ್ಯಾಟೋ ಜ್ವರದಂತಹ ಲಕ್ಷಣಗಳು ಮಕ್ಕಳಲ್ಲಿ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.