ಹೊಸ ಬಜೆಟ್‌ನತ್ತ ಹರಿದಿದೆ ರೈತರ ಚಿತ್ತ

ಅನ್ನದಾತರ ಅಂಗಳ

 

ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ೩ ಲಕ್ಷ ರೂ.ವರೆಗಿನ ಬೆಳೆ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಸಾಲಕ್ಕೆ ಬಡ್ಡಿ ಕಟ್ಟಿ ಹೈರಾಣಾಗುವ ಪ್ರಮೇಯವೇ ಇಲ್ಲ. ೩ ಲಕ್ಷ ರೂ.ವರೆಗಿನ ಬೆಳೆ ಸಾಲವನ್ನು ಬಳಸಿಕೊಂಡು ಬಿತ್ತನೆ ಬೀಜ, ಗೊಬ್ಬರ, ಉಳುಮೆ, ಕೂಲಿಯಾಳುಗಳ ಖರ್ಚು ವೆಚ್ಚವನ್ನು ನಿಭಾಯಿಸಬಹುದು.

ನೇಗಿಲಯೋಗಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ೨೦೨೨ರ ಮುಂಗಡ ಪತ್ರದಲ್ಲಿ ಮಹತ್ವದ ಹತ್ತು ಹಲವು ಯೋಜನೆಗಳನ್ನು ಪ್ರಕಟಿಸಲು ಕೇಂದ್ರ ಸರ್ಕಾರ ಚಿಂತಿಸಿದೆ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಫೆಬ್ರವರಿ ೧ರಂದು ಮಂಡಿಸಲಿರುವ ೨೦೨೨-೨೩ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕೃಷಿ ಸಾಲದ ಗುರಿಯನ್ನು ಸುಮಾರು ೧೮ ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಕೇಂದ್ರದ ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ.

 

ಸಾಮಾನ್ಯವಾಗಿ ಕೃಷಿ ಸಾಲಗಳು ಶೇ.೯ರಷ್ಟು ಬಡ್ಡಿದರವನ್ನು ಆಕರ್ಷಿಸುತ್ತವೆ. ಆದಾಗ್ಯೂ, ಅಲ್ಪಾವಧಿಯ ಬೆಳೆ ಸಾಲವನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡಲು ಸರ್ಕಾರವು ಬಡ್ಡಿ ರಿಯಾಯಿತಿಯನ್ನು ಒದಗಿಸುತ್ತಿದೆ.

 

ರೈತರಿಗೆ ೩ ಲಕ್ಷದವರೆಗಿನ ಅಲ್ಪಾವಧಿಯ ಕೃಷಿ ಸಾಲವನ್ನು ವಾರ್ಷಿಕ ಶೇ.೭ ರ ಪರಿಣಾಮಕಾರಿ ದರದಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬಡ್ಡಿ ದರದಲ್ಲಿ ಶೇ.೨ ಸಬ್ಸಿಡಿಯನ್ನು ನೀಡುತ್ತಿದೆ.

ನಿಗದಿತ ದಿನಾಂಕದೊಳಗೆ ಸಾಲವನ್ನು ತ್ವರಿತವಾಗಿ ಮರುಪಾವತಿಸುವ ರೈತರಿಗೆ ಮೂರು ಪರ್ಸೆಂಟ್ ದರದಲ್ಲಿ ಹೆಚ್ಚುವರಿ ಪ್ರೋತ್ಸಾಹವನ್ನು ನೀಡಲಾಗುತ್ತಿದೆ, ಇದು ಪರಿಣಾಮಕಾರಿ ಬಡ್ಡಿ ದರವನ್ನು ಶೇ. ೪ಕ್ಕೆ ಇಳಿಕೆ ಮಾಡುತ್ತದೆ. ಔಪಚಾರಿಕ ಸಾಲ ವ್ಯವಸ್ಥೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ವ್ಯಾಪ್ತಿಯನ್ನು ಹೆಚ್ಚಿಸಲು ಆರ್‌ಬಿಐ ಮೇಲೆ ಆಧಾರರಹಿತ ಕೃಷಿ ಸಾಲದ ಮಿತಿಯನ್ನು ೧ ಲಕ್ಷ ರೂ.ಗಳಿಂದ ೧.೬ ಲಕ್ಷ ರೂ.ಗೆ ಏರಿಸಲು ನಿರ್ಧರಿಸಿದೆ.

 

 

ಕರ್ನಾಟಕ ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ೩ ಲಕ್ಷ ರೂ.ವರೆಗಿನ ಬೆಳೆ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಸಾಲಕ್ಕೆ ಬಡ್ಡಿ ಕಟ್ಟಿ ಹೈರಾಣಾಗುವ ಪ್ರಮೇಯವೇ ಇಲ್ಲ. ೩ ಲಕ್ಷ ರೂ.ವರೆಗಿನ ಬೆಳೆ ಸಾಲವನ್ನು ಬಳಸಿಕೊಂಡು ಬಿತ್ತನೆ ಬೀಜ, ಗೊಬ್ಬರ, ಉಳುಮೆ, ಕೂಲಿಯಾಳುಗಳ ಖರ್ಚುವೆಚ್ಚವನ್ನು ನಿಭಾಯಿಸಬಹುದು. ಕರ್ನಾಟಕದ ಬಹಳಷ್ಟು ಪ್ರಗತಿ ಪರ ರೈತರು ಬೆಳೆ ಸಾಲ ಪಡೆದು ಕೃಷಿ ವೆಚ್ಚ ನಿಭಾಯಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಶೂನ್ಯ ಬಡ್ಡಿದರದಲ್ಲಿ ೩ ಲಕ್ಷ ರೂ.ವರೆಗಿನ ಬೆಳೆ ಸಾಲ ಯೋಜನೆಯು ರೈತರಿಗೆ ಸಾಕಷ್ಟು ಅನುಕೂಲಕರವಾಗಿದೆ.

 

ರಾಜ್ಯದ ರೈತರಿಗೆ ಅನುಕೂಲ

ಕರ್ನಾಟಕದಲ್ಲಿ ೨೦೧೯-೨೦ ರಲ್ಲಿ ೨೨.೫೮ ಲಕ್ಷ ರೈತರಿಗೆ ೧೩,೫೭೭ ಕೋಟಿ ರೂ. ಬೆಳೆ ಸಾಲ ವಿತರಣೆ ಮಾಡಲಾಗಿತ್ತು. ೨೦೨೦-೨೧ರಲ್ಲಿ ೨೪.೫ ಲಕ್ಷ ರೈತರಿಗೆ ೧೪,೫೦೦ ಕೋಟಿ ರೂ. ಕೃಷಿ ಸಾಲ ನೀಡುವ ಗುರಿ ಇತ್ತು. ೨೦೨೧-೨೨ ರಲ್ಲಿ ೨೦ ಸಾವಿರ ಕೋಟಿ ರೂ. ಕೃಷಿ ಸಾಲ ನೀಡುವ ಗುರಿಯನ್ನು ಸಹಕಾರ ಇಲಾಖೆ ಹಾಕಿಕೊಂಡಿತ್ತು. ಈಗ ೨೦೨೨-೨೩ರಲ್ಲಿ ಕರ್ನಾಟಕದಲ್ಲೂ ಕೃಷಿ ಸಾಲ, ಬೆಳೆ ಸಾಲ ನೀಡುವ ಗುರಿಯನ್ನು ಸಹಜವಾಗಿಯೇ ಹೆಚ್ಚಿಸಲಾಗುತ್ತದೆ. ಈ ಬಾರಿ ೨೦೨೨ರ ಮಾರ್ಚ್‌ನಿಂದ ಪ್ರಾರಂಭವಾಗುವ ೨೦೨೨-೨೩ರ ಹಣಕಾಸು ವರ್ಷದಲ್ಲಿ ೨೫ ಸಾವಿರ ಕೋಟಿ ರೂ. ಕೃಷಿ ಸಾಲ, ಬೆಳೆ ಸಾಲ ನೀಡುವ ಗುರಿಯನ್ನು ಸಹಕಾರ ಇಲಾಖೆ ಹಾಕಿಕೊಳ್ಳುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ರೈತರಿಗೆ ಡಿಸಿಸಿ ಬ್ಯಾಂಕ್‌ಗಳು ೧೦ ಲಕ್ಷ ರೂ.ವರೆಗೂ ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡುತ್ತಿವೆ. ಹಸು ಸಾಕಣೆ, ಕೋಳಿ ಸಾಕಣೆ, ಕುರಿ ಸಾಕಣೆ, ಕೃಷಿ ಭೂಮಿ ಅಭಿವೃದ್ದಿ ಸೇರಿದಂತೆ ನಾನಾ ಉದ್ದೇಶಗಳಿಗೆ ಭೂಮಿಯನ್ನು ಅಡಮಾನ ಇಟ್ಟುಕೊಂಡು ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡುತ್ತಿವೆ. ಈ ಸಾಲಕ್ಕೆ ಶೇ.೪ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಈ ಸಾಲ ಪಡೆಯಲು ಕೃಷಿ ಭೂಮಿಯ ಅಸಲು ಪತ್ರಗಳು, ಪ್ರಾಜೆಕ್ಟ್ ವರದಿ, ಪಹಣಿ, ಭೂ ಕಂದಾಯ ರಸೀದಿ, ಮ್ಯುಟೇಷನ್, ಸಬ್ ರಿಜಿಸ್ಟ್ರಾರ್ ಕಚೇರಿಯ ಇ.ಸಿ. ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಡಿಸಿಸಿ ಬ್ಯಾಂಕ್‌ಗೆ ಸಲ್ಲಿಸಬೇಕು. ಈ ದಾಖಲೆಗಳನ್ನು ಸಾಲ ವಾಪಸ್ ತೀರಿಸುವವರೆಗೂ ಬ್ಯಾಂಕ್ ಇಟ್ಟುಕೊಂಡಿರುತ್ತದೆ. ಕೃಷಿ ಭೂಮಿ, ನೀರಿನ ಸೌಲಭ್ಯ ಇದ್ದು, ಹಸು ಸಾಕಣೆ, ಕೋಳಿ ಸಾಕಣೆ, ಕುರಿ ಸಾಕಣೆ ಸೇರಿದಂತೆ ವಿವಿಧ ಉದ್ಯೋಗಗಳನ್ನು ಉದ್ಯಮ ಸ್ವರೂಪದಲ್ಲಿ ಮಾಡ ಬಯಸುವ ನಿರುದ್ಯೋಗಿ ಯುವಜನತೆಗೆ, ರೈತರಿಗೆ ಈ ಯೋಜನೆಯೂ ಉಪಯುಕ್ತವಾಗಿದೆ.