ಎಸ್ಸೆಸ್ಸೆಲ್ಸಿ ಪರೀಕ್ಷೆ: ವಲಸೆ ಕಾರ್ಮಿಕರ ಮಕ್ಕಳು, ಹಾಸ್ಟೆಲ್‌ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಕ್ಕೆ ನಿರ್ದೇಶನ

ಮೈಸೂರು: ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಗೆ ತೆರಳಿರುವ ವಲಸೆ ಕಾರ್ಮಿಕರ ಮಕ್ಕಳು, ಹಾಸ್ಟೆಲ್‌ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರಿರುವ ಸ್ಥಳದ ಜಿಲ್ಲೆ, ತಾಲ್ಲೂಕಿನ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಚಿಂತಿಸಿದೆ. ಹೀಗಾಗಿ, ಅಂತಹ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸುವಂತೆ ಶಿಕ್ಷಕರಿಗೆ ನಿರ್ದೇಶನ ನೀಡಿದೆ.

ಎಸ್‌ಎಸ್‌ಎಲ್‌ಸಿ 2021ರ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ವಲಸೆ ಕಾರ್ಮಿಕರ ಮಕ್ಕಳು, ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ನಿಗದಿತ ಕೇಂದ್ರದಲ್ಲಿ ಆಸನದ ಮತ್ತು ಪ್ರಶ್ನೆ ಪತ್ರಿಕೆಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಆನ್‌ಲೈನ್ ಮಾಹಿತಿಯನ್ನು ಕಡ್ಡಾಯವಾಗಿ ದಾಖಲು ಮಾಡುವಂತೆ ಸೂಚಿನೆ ನೀಡಿದೆ.

ವಿದ್ಯಾರ್ಥಿಗಳಿರುವ ಸ್ವಗ್ರಾಮ ಪ್ರದೇಶದ ಹತ್ತಿರದ ಕೇಂದ್ರದಲ್ಲಿ ಬರೆಯಲು ಅವಕಾಶ ಕಲ್ಪಿಸುವ ದೃಷ್ಠಿಯಿಂದ, ಇಂತಹ ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿಕೊಂಡಿರುವ ಕೇಂದ್ರದಲ್ಲಿ ಆಸನದ ಮತ್ತು ಪ್ರಶ್ನೆ ಪತ್ರಿಕೆಯ ವ್ಯವಸ್ಥೆ ಕಲ್ಪಿಸಬೇಕಾಗಿರುವುದರಿಂದ ಈ ಮಾಹಿತಿಯನ್ನು ಪಡೆಯಲು ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ. ರಾಜ್ಯ ಎಲ್ಲ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರ ಅವರ ಶಾಲೆಯಲ್ಲಿನ ವಲಸೆ ಕಾರ್ಮಿಕರ ಮಕ್ಕಳು ವಸತಿ ಶಾಲೆಗಳ ಹಾಗೂ ಹಾಸ್ಟೆಲ್‌ಗಳ ವಿದ್ಯಾರ್ಥಿಗಳನ್ನು ಶಾಲಾ ಅಭ್ಯರ್ಥಿಗಳು (ಸಿಸಿಇಆರ್‌ಎಫ್) ದೂರವಾಣಿ ಮೂಲಕ ಸಂಪರ್ಕಿಸಿ, ಅವರು ಮೂರು ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಬದಲಾಗಿ ತಮ್ಮ ಮೂಲಕ ಜಿಲ್ಲೆ, ತಾಲ್ಲೂಕಿನ ಯಾವ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಚಿಸಿದ್ದಾರೆ ಎನ್ನುವ ಮಾಹಿತಿ ಪಡೆದು ಶಾಲಾ ಲಾಗಿನ್ ನಮೂದಿಸುವುದು ಎಂದು ತಿಳಿಸಿದೆ.

ಮಂಡಳಿಯ ಜಾಲತಾಣ http://sslc.karnataka.gov.in/ ಮಂಡಳಿ ಶಾಲಾ ಲಾಗಿನ್‌ನಲ್ಲಿ ತಂತ್ರಾಂಶ ಲಭ್ಯವಿದೆ. ಈಗಾಗಲೇ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡಿರುವ ತಂತ್ರಾಂಶದ ಯೂಸರ್‌ನೇಮ್ ಹಾಗೂ ಪಾಸವರ್ಡ್‌ನ್ನು ಬಳಸಿ ಕೇಂದ್ರ ಬದಲಾವಣೆ ಮಾಹಿತಿಯನ್ನು ಕೀಲೀಕರಿಸಿ ಬಳಸುವುದು ಸೇರಿದಂತೆ ಹಲವಾರು ನಿರ್ದೇಶನಗಳನ್ನು ನೀಡಲಾಗಿದೆ.
ಶಾಲೆಗಳ ಮುಖ್ಯ ಶಿಕ್ಷಕರಿಗೆ ಜೂ.25ರೊಳಗೆ ಆನ್‌ಲೈನ್ ಮಾಹಿತಿಯನ್ನು ಕಡ್ಡಾಯವಾಗಿ ಕೀಯಿಂಗ್ ಮಾಡಲು ಸೂಚಿಸಿ ಮಂಡಳಿ ಪ್ರಕಟಣೆ ಹೊರಡಿಸಿದೆ.