ಪಂಚಮಸಾಲಿ 3ನೇ ಪೀಠವಾದರೆ ತಪ್ಪೇನಲ್ಲ, ಇದಕ್ಕೂ ನನಗೂ ಸಂಬಂಧವಿಲ್ಲ; ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ

ಬಾಗಲಕೋಟೆ: ಪಂಚಮಸಾಲಿ 3ನೇ ಪೀಠವಾದರೆ ತಪ್ಪೇನಲ್ಲ. ನನ್ನಲ್ಲಿ ಎರಡು ಪೀಠಗಳು ಒಂದೇ ಎಂಬ ಭಾವನೆ ಇದೆ. ಮೂರನೇ ಪೀಠದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, 3ನೇ ಪೀಠ ಆದರೆ ತಪ್ಪಲ್ಲ, ಪಂಚಮಸಾಲಿ ಸಮಾಜ ದೊಡ್ಡದಿದೆ. ಇದಕ್ಕೆ ನಾವು ಸಹಮತ ವ್ಯಕ್ತಪಡಿಸಬೇಕು. ಸ್ವಾಮೀಜಿಗಳು ಆಪಾದನೆ ಬಿಟ್ಟು ಜವಾಬ್ದಾರಿ ತೆಗೆದುಕೊಳ್ಳಲಿ. ಅವರೇ ಮುಂದೆ ನಿಂತು ಪೀಠ ರಚನೆಯ ಜವಾಬ್ದಾರಿ ತೆಗೆದುಕೊಳ್ಳಬೇಕು. ಪ್ರತಿಷ್ಠೆಗಾಗಿ ಬರೀ ಅಪಾದನೆ ಮಾಡಬಾರದು ಎಂದು ಸಚಿವ ಮುರುಗೇಶ್ ನಿರಾಣಿ  ಅಭಿಪ್ರಾಯಪಟ್ಟಿದ್ದಾರೆ.

ವೀರಶೈವ ಲಿಂಗಾಯತ ಪಂಚಮಸಾಲಿ ಹೆಸರಲ್ಲಿ ಮೂರನೆ ಪೀಠದ ಹಿಂದೆ ಮುರುಗೇಶ್ ನಿರಾಣಿ ಕೈವಾಡವಿದೆ ಎಂಬ ಕಾಶಪ್ಪನವರ್ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಬಾಗಲಕೋಟೆಯಲ್ಲಿ ಸಚಿವ‌ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮಾಜಕ್ಕಾಗಿ ನಿರಾಣಿ ಕುಟುಂಬ ಏನು ಮಾಡಿದೆ ಅನ್ನೋದು ರಾಜ್ಯದ ಜನತೆಗೆ ಗೊತ್ತಿದೆ. ನನ್ನಲ್ಲಿ ಎರಡು ಪೀಠಗಳು ಒಂದೇ ಎಂಬ ಭಾವನೆ ಇದೆ. ಮೂರನೇ ಪೀಠದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಮೂರನೇ ಪೀಠ ಆದ್ರೆ ತಪ್ಪಲ್ಲ, ಸಮಾಜ ದೊಡ್ಡದಿದೆ. ಇದಕ್ಕೆ ನಾವು ಸಹಮತ ವ್ಯಕ್ತಪಡಿಸಬೇಕು. ಸ್ವಾಮೀಜಿಗಳು ಆಪಾದನೆ ಬಿಟ್ಟು ಅವರೇ ಮುಂದೆ ನಿಂತು ಪೀಠ ರಚನೆಯ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಪಂಚಮಸಾಲಿ 3ನೇ ಪೀಠದ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ವಿಚಾರವಾಗಿ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಮುರುಗೇಶ್ ನಿರಾಣಿ, 3ನೇ ಪೀಠಕ್ಕೂ ನನಗೂ ಸಂಬಂಧ ಇಲ್ಲ. ಪಂಚಮಸಾಲಿ 3ನೇ ಪೀಠ ಆದರೆ ಅವರು ಏನಾದರೂ ಸಹಾಯ ಸಹಕಾರ ಕೇಳಿದರೆ ಆಗ ನನ್ನ ಅಳಿಲು ಸೇವೆ ಮಾಡಲು ಸಿದ್ದನಿದ್ದೇನೆ. ನಾನು ಸಿಎಂ ಸ್ಥಾನದ ಕನಸು ಕಂಡಿಲ್ಲ. ನಮ್ಮ ಪಕ್ಷ ಏನು ಜವಾಬ್ದಾರಿ ಕೊಡುತ್ತದೋ ಅದನ್ನು ಮಾಡುತ್ತೇನೆ. ಯಾರೋ ತಾವೇ ಕಲ್ಪನೆ ಮಾಡಿಕೊಂಡು ನನ್ನ ಬಗ್ಗೆ ಏನೇನೋ ಹೇಳಬಾರದು. ಟಿವಿಯಲ್ಲಿ, ಪತ್ರಿಕೆಯಲ್ಲಿ ಬರಲು ನನ್ನ ಮೇಲೆ ಆಪಾದನೆ ಮಾಡಬಾರದು. ಪಂಚಮಸಾಲಿ ಸಮಾಜವನ್ನು ಒಡೆಯುವ ಕೆಲಸಕ್ಕೆ ನನಗೆ ಸಮಯವಿಲ್ಲ. ಸಮಾಜ ಒಡೆಯುವ ಹುನ್ನಾರ ಮಾಡಿದವರು ಯಾರೆಂದು ನಿಮಗೆ ಗೊತ್ತು ಎಂದಿದ್ದಾರೆ.

ನಾನು ವಿಜಯಪುರ, ಬಾಗಲಕೋಟೆ ಜಿಲ್ಲೆಯ ನೀರು ಕುಡಿದಿದ್ದೇನೆ. ಬೇರೆ ಬೇರೆಯವರು ಏನು ಮಾತಾಡ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನಾನು ಸುಮ್ಮನಿರುತ್ತೇನೆ ಎಂದರೆ ಅದು ನನ್ನ ಅಸಮರ್ಥತೆ ಅಲ್ಲ. ಟೀಕೆ, ಟಿಪ್ಪಣಿಗಳಿದ್ದರೆ ಹೇಳಲಿ. ನಾನು ನನ್ನ ತಪ್ಪು ತಿದ್ದಿಕೊಳ್ಳುತ್ತೇನೆ ಎಂದು ಬಾಗಲಕೋಟೆಯಲ್ಲಿ ಮುರಗೇಶ್ ನಿರಾಣಿ ಆಕ್ರೋಶ ಹೊರಹಾಕಿದ್ದಾರೆ.

ಪಂಚಮಸಾಲಿ ಮೂರನೇ ಪೀಠದ ಬಗ್ಗೆ ಸಮಾಜದ ಜನ ತೀರ್ಮಾನಿಸಿದ್ದಾರೆ. ಮೂರನೇ ಪೀಠದ ಬಗ್ಗೆ ತೀರ್ಮಾನಿಸಿಲ್ಲ. ನಾನು ಯಾವತ್ತಾದ್ರೂ ಸಿಎಂ ಆಗ್ತೀನಿ ಅಂತ ಹೇಳಿದ್ದೀನಾ? ತಾವೇ ಕಲ್ಪನೆ ಮಾಡಿಕೊಂಡು ಮಾತನಾಡ್ತಿದ್ದಾರೆ. ಸಮಯ ನಿಗದಿ ಮಾಡಿದರೆ ನಾನೇ ಶ್ರೀಗಳನ್ನು ಭೇಟಿಯಾಗ್ತೇನೆ ಎಂದು ಬಾಗಲಕೋಟೆಯಲ್ಲಿ ಸಚಿವ‌ ಮುರುಗೇಶ್ ನಿರಾಣಿ ಹೇಳಿದ್ದಾರೆ.