ಕಾಂಚನಾ-3 ಖ್ಯಾತಿಯ ರಷ್ಯಾ ನಟಿ ಗೋವಾದಲ್ಲಿ ನಿಗೂಢ ಸಾವು

ಪಣಜಿ: ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದ ರಷ್ಯಾ ನಟಿ ಮತ್ತು ರೂಪದರ್ಶಿ ಅಲೆಗ್ಸಾಂಡ್ರಾ ಜವಿ ಗೋವಾದಲ್ಲಿ ನಿಗೂಢ ಸಾವಿಗೀಡಾಗಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ.

ಉತ್ತರ ಗೋವಾದ ಸೋಯಿಲಿಮ್ ಗ್ರಾಮದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ 24 ವರ್ಷದ ನಟಿಯ ನೇಣುಬಿಗಿದ ಮೃತದೇಹ ಪತ್ತೆಯಾಗಿದೆ. ರೂಮಿನಲ್ಲಿದ್ದ ಆಕೆಯ ಬಾಯ್ ಫ್ರೆಂಡ್ ಹಾಗೂ ಚೆನ್ನೈನ ಫೋಟೋಗ್ರಫರ್ ಇವರಿಬ್ಬರನ್ನು ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ಧಾರೆ.

ಕಾಂಚನಾ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದ ಅಲೆಗ್ಸಾಂಡ್ರಾ ಅವರ ಮರಣೋತ್ತರ ಪರೀಕ್ಷೆ ಮತ್ತಿತ್ತರ ಪ್ರಕ್ರಿಯೆಗಾಗಿ ಗೋವಾ ಪೊಲೀಸರು ರಷ್ಯಾದ ಕಾನ್ಸುಲೇಟ್ ಕಚೇರಿಯ ಸಂಪರ್ಕದಲ್ಲಿದ್ಧಾರೆ. ಆಕೆಯ ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿದ್ದು, ರಷ್ಯಾದ ಅಧಿಕಾರಿಗಳಿಂದ ನಿರಾಕ್ಷೇಪಣೆ ಪತ್ರ (ಎನ್‌ಒಸಿ) ನಿರೀಕ್ಷೆಯಲ್ಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲೆಗ್ಸಾಂಡ್ರಾ 2019ರಲ್ಲಿ ಚೆನ್ನೈನ ಛಾಯಾಗ್ರಾಹಕ ತಮಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

× Chat with us