ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಅವಧಿಯಲ್ಲಿ ಡಿಪಿಆರ್ ಮಾಡಿಲ್ಲ: ಎಚ್​ಡಿ ಕುಮಾರಸ್ವಾಮಿ

ಬೆಂಗಳೂರು: ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿಸಿದ್ದೇವೆ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಯನ್ನು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಮಂಗಳವಾರ ಸಾರಾಸಗಟಾಗಿ ತಳ್ಳಿಹಾಕಿದರು. ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ಯಾವುದೇ ಡಿಪಿಆರ್ ಆಗಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೆ. ಕಾಂಗ್ರೆಸ್ ನಾಯಕರ ಪಾದಯಾತ್ರೆ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ. ಇನ್ನೂ 5 ವರ್ಷ ಯಾರು ಬೇಕಾದರೂ ಪಾದಯಾತ್ರೆ ಮಾಡಲಿ ಎಂದು ಸವಾಲು ಹಾಕಿದರು. ಅವರು (ಕಾಂಗ್ರೆಸ್​ನವರು) ಪಾದಯಾತ್ರೆ ಮಾಡಿದರೂ, ನಿಲ್ಲಿಸಿದರೂ ನಮಗೆ ಗಾಬರಿಯಿಲ್ಲ. ಜನರ ಮಾರಣಹೋಮ ಮಾಡಲು ನಾವು ತಯಾರು ಇಲ್ಲ. ಒಂದು ಎರಡು ಇದ್ದ ಸೋಂಕಿತರ ಸಂಖ್ಯೆಯು ಈಗ 400 ದಾಟುತ್ತಿದೆ. ಜನವರಿ 26ರಿಂದ ಜಲಧಾರಿ ಕಾರ್ಯಕ್ರಮ ಆರಂಭಿಸಬೇಕಿತ್ತು. ಆದರೆ ಕೊರೊನಾ ಪಿಡುಗು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯಿಂದ ಹಿಂದೆ ಸರಿದೆವು. ಕಳೆದ ಎರಡು ವರ್ಷಗಳಿಂದ ಕೊರೊನಾ ಪಿಡುಗು ಹೆಚ್ಚಾಗಿರುವ ಕಾರಣ, ಪಕ್ಷದ ಸಂಘಟನೆಯಿಂದಲೂ ಹಿಂದೆ ಸರಿಯಬೇಕಾಯಿತು ಎಂದು ವಿವರಿಸಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ನಡೆಸಿದ ವರ್ಚುವಲ್ ಕಾನ್ಫರೆನ್ಸ್​ನಲ್ಲಿ ಗತಿಶಕ್ತಿ ಯೋಜನೆಯ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ನೀರನ ವಿಚಾರದಲ್ಲಿ ನಾವು ಪೆಟ್ಟು ತಿಂದಿದ್ದೇವೆ. ಇದೇ ವಿಚಾರಗಳನ್ನು ಜನತೆಗೆ ತಿಳಿಸುತ್ತೇವೆ. ನಮ್ಮ ನೀರನ್ನು ಬಳಕೆ ಮಾಡುವಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಅನಾಹುತಗಳೇ ಆಗಿವೆ. ಚುನಾವಣೆ ಬಂದಾಗ ಮಾತ್ರ ಇವರಿಗೆ ನೀರು ನೆನಪಾಗುತ್ತದೆ. 20 ದಿನಗಳ ಕಾಲ ಜಲಧಾರೆ ಕಾರ್ಯಕ್ರಮವನ್ನು ಕೊರೊನಾ ಹಿನ್ನೆಲೆಯಲ್ಲಿ ಜೆಡಿಎಸ್ ಮುಂದೂಡಿದೆ ಎಂದರು.