ಸೆ.28ಕ್ಕೆ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ: ಕುಮಾರಸ್ವಾಮಿ

ಮೈಸೂರು: 2023ರ ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ಧತೆ ಆರಂಭಿಸಿದ್ದು, ಸೆ.28ಕ್ಕೆ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ. ಈಗ 108 ಜನರ ಪಟ್ಟಿ ಸಿದ್ಧವಿದೆ, ಇನ್ನೂ 8-10 ಮಂದಿ ಹೆಸರು ಸೇರಿಸಿ ಮೊದಲ ಪಟ್ಟಿಯನ್ನು ಬಿಡದಿಯ ನನ್ನ ತೋಟದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ತನ್ನದೇ ಆದ ವಿಷನ್-1,2,3 ನೊಂದಿಗೆ 2023ರ ಚುನಾವಣೆಗೆ ತಯಾರಾಗುತ್ತಿದೆ. ಬಿಡದಿ ತೋಟದಲ್ಲಿ ಎರಡು ದಿನಗಳ ಕಾರ್ಯಾಗಾರ ನಡೆಸಿ ಪಕ್ಷದ ಅಭ್ಯರ್ಥಿಗಳಿಗೆ ತರಬೇತು ನೀಡಿ ಚುನಾವಣೆಗೆ ಅಣಿ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ೧೨೩ ಸ್ಥಾನ ಗೆಲ್ಲಲು ಅನುವಾಗುವಂತೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಕೋವಿಡ್‌ನ ಮಾರ್ಗಸೂಚಿ ಉಲ್ಲಂಘನೆಯಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಓಡಾಡುತ್ತಿಲ್ಲ ಎಂದರು.

ಯಾರೂ ಫ್ಯೂಸ್ ತೆಗೆಯಲು ಆಗಲ್ಲ

ಜೆಡಿಎಸ್ ಪಕ್ಷಕ್ಕೆ ಯಾರೂ ಫ್ಯೂಸ್ ತೆಗೆಯಲು ಆಗಲ್ಲ. ನಮ್ಮ ಕಾರ್ಯಕರ್ತರೆ ಗ್ರೌಂಡಿಂಗ್ ಇದ್ದ ಹಾಗೆ ಎಂದು ವಿಪಕ್ಷ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದರು.

ಮೇಕೆದಾಟು ವಿಚಾರದಲ್ಲಿ ಬಿಜೆಪಿ ಸಂಸದರು, ಸಚಿವರು ಮೂಳೆ ಇಲ್ಲದ, ಎಲುಬಿಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ. ಮೈಸೂರಿಗೆ ಬಂದಿದ್ದ ದಲ್ಲಾಳಿ ಅರುಣ್ ಸಿಂಗ್ ಕೇಂದ್ರಕ್ಕೆ ಹೋಗಿ ಕನ್ನಡಿಗರ ಕಷ್ಟ ತಿಳಿಸಲಿ.ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಪರಿಹಾರ ಸಿಗಲಿದೆ. ಬಿಜೆಪಿಯವರು ಸರಕಿಲ್ಲದ ಪಕ್ಷ. ಅವರಿಗೆ ಸೌಂಡ್ ಒಂದೇ ಜೀವಾಳ ಎಂದು ಮೂದಲಿಸಿದರು.

× Chat with us