ಜನತಾ ಜಲಧಾರೆ: ಜಾ.ದಳದಿಂದ ಚುನಾವಣೆಗೆ ಜಲ ಕಹಳೆ

ನೆಲಮಂಗಲ: ಮುಂದಿನ ಜೂನ್‌, ಜುಲೈ ತಿಂಗಳಿನಲ್ಲಿ ಮತ್ತೊಂದು ಸುತ್ತಿನ ರಥ ಯಾತ್ರೆ ಮಾಡುತ್ತೇನೆ. ಮೂರು ತಿಂಗಳ ಕಾಲ ಹಳ್ಳಿ ಹಳ್ಳಿಗಳಿಗೆ ಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನಾಡಿನ ಜನತೆಯ ಹಿತವನ್ನು ದೃಷ್ಟಿಯಲ್ಲಿ ಪಂಚರತ್ನ ಯೋಜನೆಗಳನ್ನು ರೂಪಿಸಿ ಜನತೆಯ ಮುಂದೆ ಹೋಗುತ್ತಿದ್ದೇವೆ. ನಮಗೆ ಒಂದು ಬಾರಿ ಪೂರ್ಣ ಬಹುಮತದ ಸರ್ಕಾರವನ್ನು ನೀಡಿ. ನಾವು ನೀಡಿದ ಭರವಸೆಗಳನ್ನು ಈಡೇರಿಸದೇ ಇದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇವೆ. ನಮ್ಮ ಪಕ್ಷದ ಯುವ ಮಿತ್ರರು ಪ್ರಾಮಾಣಿಕವಾಗಿ ಕೆಲಸ ಮಾಡಿ, ನಿಮ್ಮ ದುಡಿಮೆ ಮೇಲೆ ನೀವು ನಾಯಕರಾಗುತ್ತೀರಿ. ಮುಂದಿನ ದಿನಗಳಲ್ಲಿ ಕಲಬುರಗಿ ಅಥವಾ ಬೆಳಗಾವಿಯಲ್ಲಿ ಒಂದು ಸಮಾರಂಭ ಮಾಡಿ ಒಂದು ಲಕ್ಷಕ್ಕೂ ಅಧಿಕ ಮಂದಿ ಯುವಕರನ್ನು ಒಳಗೊಂಡ ಬೃಹತ್‌ ಸಮಾವೇಶ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.


ಇದಕ್ಕೂ ಮೊದಲು ಮಾತನಾಡಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಜೆಡಿಎಸ್‌. ನಮ್ಮ ಪಕ್ಷ ರೈತರಿಗಾಗಿ, ನೀರಾವರಿಗಾಗಿ ಸಾಕಷ್ಟು ಕೆಲಸ ಮಾಡಿದೆ. ನಾನು ಪ್ರಧಾನಿಯಾಗಿದ್ದ ವೇಳೆಯಲ್ಲಿ ನಾಡಿನ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಹೇಳಿದರು.
ಜಾ.ದಳ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಮಾತನಾಡಿ, ಕುಮಾರಸ್ವಾಮಿ ಅವರು ಮತ್ತೊಮ್ಮೆ ಈ ನಾಡಿನ ಮುಖ್ಯಮಂತ್ರಿಯಾಗಬೇಕು. ಅವರು, ದೇವೇಗೌಡರು ಈ ನಾಡಿಗೆ ನೀಡಿರುವ ಕೊಡುಗೆ ಅಪಾರವಾದದ್ದು, ನಾನು ಮುಂದಿನ ದಿನಗಳಲ್ಲಿ ಬಸವ ಕಲ್ಯಾಣ, ಬಸವನ ಬಾಗೇವಾಡಿ, ಕಲಬುರಗಿಯಲ್ಲಿ ಪ್ರಚಾರ ಆರಂಭ ಮಾಡಲಿದ್ದೇನೆ ಎಂದು ತಿಳಿಸಿದರು.
ನಂಜಾವಧೂತ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು, ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ಕಾರ್ಯಕರ್ತರು ಭಾಗಿಯಾಗಿದ್ದರು. ಕಡೆಯಲ್ಲಿ ವಾರಣಾಸಿಯ ಆಚಾರ್ಯರಿಂದ ವಿಶೇಷ ಗಂಗಾರತಿ ಕಾರ್ಯಕ್ರಮ ನಡೆಯಿತು.