ಮಲ್ಲಿಗೆ ಮನೆಯ ಪ್ರೇಮಾ ಪೂಜಾರಿ ಹೂ ಬೆಳೆದು ಮಾದರಿಯಾದ ಮಹಿಳೆ; ಈ ಜೀವ ಈ ಜೀವನ

ಇದು ಮಲ್ಲಿಗೆ ಬೆಳೆದು, ಅದನ್ನು ಮಾರಿ ಬಂದ ಹಣದಲ್ಲಿ ಹಂತಹಂತವಾಗಿ ಮನೆಕಟ್ಟಿ, ಈಗ ಆ ಮನೆಯ ತಾರಸಿಯ ಮೇಲೆಯೇ ಮಲ್ಲಿಗೆ ಬೆಳೆಯುತ್ತಿರುವ ಅಪರೂಪದ ಸಾಧಕಿಯೊಬ್ಬರ ಜೀವನಗಾಥೆ! (ಇಂಟ್ರೊ)
——
ಏಳನೇ ಕ್ಲಾಸಲ್ಲಿ ಕಲಿಯುತ್ತಿದ್ದ ಆ ಪೋರಿಗೆ ಆವತ್ತು ಶಾಲೆಯಲ್ಲಿ ಏನೋ ವಿಶೇಷ ಕಾರ್ಯಕ್ರಮವೊಂದಿತ್ತು. ಅದಕ್ಕಾಗಿ ಅವಳು ವಿಶೇಷವಾಗಿ ತಯಾರುಗೊಂಡು, ಎರಡು ಜಡೆ ಹಣೆದುಕೊಂಡು ಹೊರಟಿದ್ದಳು. ಆ ಜಡೆಗಳಲ್ಲಿ ನಾಲ್ಕಾರು ಮಲ್ಲಿಗೆ ಹೂವುಗಳಿದ್ದರೆ ಎಷ್ಟು ಚೆನ್ನ ಎಂದು ಆಸೆಯಾಗಿ ಹೂಮಾರುವ ಪರಿಚಯದ ತನ್ನ ನೆರೆಮನೆಗೆ ದೌಡಾಯಿಸಿದಳು. ಆದರೆ, ಅವರು ಇವಳಿಗೆ ಹೂ ಕೊಡಲು ನಿರಾಕರಿಸಿದರು.

ದುಡ್ಡು ಕೊಡುತ್ತೇನೆ, ಕೊಡಿ ಎಂದು ಅವಲತ್ತುಕೊಂಡರೂ ಕೊಡಲಿಲ್ಲ. ಅವಳಿಗೆ ತೀವ್ರ ನಿರಾಶೆಯಾಯಿತು. ಜಡೆಯಲ್ಲಿ ಮಲ್ಲಿಗೆ ಹೂವಿಲ್ಲದೆ ಶಾಲೆಗೆ ಹೋದಳು. ಆದರೆ, ಹೋಗುವಾಗ ಮನದಲ್ಲೇ ಒಂದು ನಿರ್ಧಾರ ಮಾಡಿದ್ದಳು-‘ನಾನೂ ಅವರಂತೆ ಮಲ್ಲಿಗೆ ಬೆಳೆಯುತ್ತೇನೆ’ ಅಂತ. ಶಾಲೆಯಲ್ಲಿ ಕಾರ್ಯಕ್ರಮ ಮುಗಿದು, ಮನೆಗೆ ವಾಪಾಸ್ ಬಂದವಳು ಅಪ್ಪನಿಗೆ ಹೇಳಿ ಹತ್ತು ಮಲ್ಲಿಗೆ ಗಿಡಗಳನ್ನು ತರಿಸಿ ಬೆಳೆಸತೊಡಗಿದಳು. ಅಂದಿನಿಂದ ಮಲ್ಲಿಗೆಗಿಡ ಅವಳ ಜೀವನ ಸಂಗಾತಿಯಾಯಿತು. ಆ ಪೋರಿಯ ಹೆಸರು ಪ್ರೇಮ ಪೂಜಾರಿ.

ಎಸ್‌ಎಸ್‌ಎಲ್‌ಸಿ ಮುಗಿಸಿ, ಮದುವೆಯಾಗಿರುವ ಪ್ರೇಮ ಪೂಜಾರಿ ಈಗ ಇಬ್ಬರು ಮಕ್ಕಳ ತಾಯಿ. ಕುಂದಾಪುರದ ಕಾಳಾವರ ಎಂಬುದು ಇವರ ಹುಟ್ಟೂರು. ಮದುವೆಯಾದ ನಂತರ ಗಂಡನ ಮನೆಯಿರುವ ಕುಂಭಾಸಿಗೆ ಬಂದರು. ಗಂಡ ಗಣೇಶ ಪೂಜಾರಿ ಮನೆತನದ ಕೃಷಿ ಜೊತೆ ಮೀನುಗಾರಿಕೆ ಮಾಡುವ ಬೋಟೊಂದನ್ನು ನಡೆಸುತ್ತಿದ್ದಾರೆ. ಮನೆ ಆಸ್ತಿ ಮಕ್ಕಳ ನಡುವೆ ಪಾಲಾದಾಗ ಗಣೇಶ ಪೂಜಾರಿ ಪಾಲಿಗೆ ಚಿಕ್ಕದೊಂದು ಜಾಗ ಬಂತು. ಆದರೆ, ಉಳಿದುಕೊಳ್ಳಲು ಮನೆಯಿಲ್ಲ. ಹಾಗಾಗಿ, ಒಂದು ಕೊಠಡಿಯಲ್ಲಿ ಸಂಸಾರ ಹೂಡಿದರು. ಪ್ರೇಮಾರಿಗೆ ಚಿಕ್ಕದಾದರೂ ಒಂದು ತಮ್ಮದೇ ಆದ ಮನೆಯನ್ನು ಕಟ್ಟಿಸಿಕೊಳ್ಳುವ ಆಸೆಯಾದರೂ ಅದಕ್ಕೆ ಬೇಕಾದ ಆರ್ಥಿಕ ಅನುಕೂಲತೆಯಿರಲಿಲ್ಲ.

ಕೃಷಿಯಲ್ಲಿ ಹೇಳಿಕೊಳ್ಳುವಂತಹ ಆದಾಯವಿರಲಿಲ್ಲ. ಗಂಡನ ಮೀನುಗಾರಿಕೆ ಸಂಪಾದನೆ ದೊಡ್ಡ ಮಟ್ಟದ್ದಾಗಿರಲಿಲ್ಲ. ಆಗ ಪ್ರೇಮಾರ ಸಹಾಯಕ್ಕೆ ಬಂದುದು ಇದೇ ಮಲ್ಲಿಗೆ ಹೂ. ಅವರೊಂದು ಯೋಜನೆ ಹಾಕಿ ಕೆಲವು ಲಕ್ಷಗಳ ಸಾಲ ತಂದು ಮನೆ ಕಟ್ಟಲು ಪ್ರಾರಂಭಿಸಿದರು. ಸಾಲದ ಕಂತು ತೀರಿಸಲು ಮಲ್ಲಿಗೆ ಬೆಳೆಯಲು ತೀರ್ಮಾನಿಸಿದರು.

ಆದರೆ, ಮಲ್ಲಿಗೆ ಬೆಳೆಯುವಷ್ಟು ಜಾಗ ಇವರಿಗಿರಲಿಲ್ಲ. ತಮ್ಮ ಪಾಲಿಗೆ ಬಂದ ತುಂಡು ಜಾಗ ಮನೆ ಕಟ್ಟಲು ಹೋದರೆ, ಉಳಿದದ್ದು ಚಿಕ್ಕದೊಂದು ಕೃಷಿ ಭೂಮಿ. ಅದರಲ್ಲಿ ಮಲ್ಲಿಗೆ ಬೆಳೆಯಲು ಸಾಧ್ಯವಿರಲಿಲ್ಲ. ಆಗ ಪ್ರೇಮಾ ಪೂಜಾರಿ ಕುಂಡಗಳಲ್ಲಿ ಮಲ್ಲಿಗೆ ಬೆಳೆಯಲು ತೀರ್ಮಾನಿಸಿದರು. ಆದರೆ, ಅವುಗಳನ್ನು ಇಡುವುದು ಎಲ್ಲಿ? ಮೊದಲಿಗೆ ಅವುಗಳನ್ನು ಹೊಸದಾಗಿ ಹಾಕಿದ ಮನೆಯ ಪಂಚಾಂಗದ ಮೇಲಿರಿಸಿದರು. ಒಂದೆರಡು ವರ್ಷಗಳ ನಂತರ ಪಂಚಾಂಗದ ಕೆಲಸ ಪೂರ್ಣವಾಗುತ್ತಲೇ ಅವುಗಳನ್ನು ತಾರಸಿಗೆ ಹೋಗಲು ನಿರ್ಮಿಸಿದ ಮೆಟ್ಟಿಲುಗಳ ಮೇಲಿರಿಸಿದರು. ಮುಂದೆ, ಒಂದೆರಡು ವರ್ಷಗಳ ನಂತರ ತಾರಸಿ ಪೂರ್ಣಗೊಂಡಾಗ ಮಲ್ಲಿಗೆ ಕುಂಡಗಳನ್ನು ಅಲ್ಲಿಗೆ ಸ್ಥಳಾಂತರಿಸಿದರು. ಅಂದಿನಿಂದ ಪ್ರೇಮಾ ಪೂಜಾರಿಯವರ ಮಲ್ಲಿಗೆ ಗಿಡಗಳಿಗೆ ಇವರ ಮನೆಯ ತಾರಸಿಯೇ ಶಾಶ್ವತ ನೆಲೆಯಾಯಿತು. ತಾರಸಿಯಲ್ಲಿ ಬೆಳೆಯುವುದರಿಂದ ಜಾನುವಾರುಗಳ ಕಾಟವಿಲ್ಲ. ಕ್ರಿಮಿಕೀಟಗಳ ಪೀಡೆಯೂ ಕಡಿಮೆ.

ಏಳೆಂಟು ವರ್ಷಗಳ ನಂತರ ಚಿಕ್ಕದಾದರೂ ತಮ್ಮದೇ ಆದ ಒಂದು ಸ್ವಂತ ಮನೆಯನ್ನು ಹೊಂದಿರುವ ತೃಪ್ತಿ ಪ್ರೇಮಾ ಪೂಜಾರಿಯವರದ್ದು. ಈ ಮನೆಗೆ ಗಂಡನ ದುಡಿಮೆ ಜೊತೆ ಅರ್ಧಕ್ಕರ್ಧ ಹಣ ತನ್ನ ಮಲ್ಲಿಗೆ ಕೃಷಿಯಿಂದ ಬಂತು ಎಂದು ಹೇಳುವಾಗ ಇವರ ಮುಖದಲ್ಲಿ ತನ್ನ ಸಂಪಾದನೆಯ ಬಗ್ಗೆ ಹೆಮ್ಮೆ, ತನ್ನ ಮಲ್ಲಿಗೆ ಗಿಡಗಳ ಬಗೆಗಿನ ಪ್ರೀತಿ ಎದ್ದು ಕಾಣುತ್ತದೆ.

ಸ್ವಂತ ಮನೆ ಹೊಂದುವ ತಮ್ಮ ಕನಸನ್ನು ನನಸಾಗಿಸಿದ ಈ ಮಲ್ಲಿಗೆ ಗಿಡಗಳು ಸಹಜವಾಗಿಯೇ ಇವರಿಗೆ ಬಹು ಅಚ್ಚುಮೆಚ್ಚು. ದಿನಕ್ಕೆರಡು ಬಾರಿಯಾದರೂ ತಾರಸಿಗೆ ಹೋಗಿ ಮಲ್ಲಿಗೆ ಗಿಡಗಳನ್ನು ಮಾತಾಡಿಸಿ, ಸ್ಪರ್ಶಿಸಿಬಾರದಿದ್ದರೆ ಮನಸ್ಸಿಗೇನೋ ತಳಮಳವಾಗುತ್ತದೆ. ಅವುಗಳ ಲಾಲನೆ ಪಾಲನೆಯಲ್ಲಿ ತುಸುವೂ ಕೊರತೆಯಾಗದಂತೆ ಜಾಗ್ರತೆ ವಹಿಸುತ್ತಾರೆ. ಅವುಗಳಿಗೆ ನೀರುಣಿಸುವುದು, ೧೫ ದಿನಗಳಿಗೊಮ್ಮೆ ಗೊಬ್ಬರ ಹಾಕುವುದು, ಅವುಗಳನ್ನು ಸವರುವುದು ಮೊದಲಾದ ಯಾವ ಕೆಲಸಕ್ಕೂ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸುತ್ತಾರೆ. ಗೊಬ್ಬರವನ್ನು ಖರೀದಿಸದೆ ತಾವೇ ಸ್ವತಃ ತಯಾರಿಸುತ್ತಾರೆ. ನಿಯಮಿತವಾಗಿ ನೆಲಗಡಲೆ ಹಿಂಡಿ, ಬೇವಿನಹಿಂಡಿ ಹಾಕುತ್ತಾರೆ. ಕೀಟನಾಶಕವಾಗಿ ಬೇವಿನೆಣ್ಣೆಯನ್ನು ಸಿಂಪರಿಸುತ್ತಾರೆ. ಆರು ತಿಂಗಳಿಗೊಮ್ಮೆ ಮಣ್ಣು ಬದಲಾಯಿಸುತ್ತಾರೆ. ಇವರ ಇಬ್ಬರು ಗಂಡು ಮಕ್ಕಳು ಮಲ್ಲಿಗೆ ಗಿಡಗಳ ಲಾಲನೆ ಪೋಷಣೆ, ಹೂ ಕೀಳುವುದು ಮೊದಲಾದ ಕೆಲಸಗಳಲ್ಲಿ ತಾಯಿಗೆ ಜೊತೆ ನೀಡುತ್ತಾರೆ. ಇವರಿಬ್ಬರ ಶಾಲಾ ಫೀಸು ಕೂಡ ಈ ಮಲ್ಲಿಗೆ ಗಿಡಗಳೇ ಸಂಪಾದಿಸಿ ಕೊಡುತ್ತಿವೆ.

ಮಲ್ಲಿಗೆ ಕೃಷಿ ಶ್ರಮವನ್ನು ಬೇಡುವ ಕಾಯಕ. ಪ್ರೇಮಾ ಪೂಜಾರಿಯವರು ಬೆಳಗ್ಗೆ ೫.೩೦ಕ್ಕೆ ಎದ್ದು, ಮನೆಗೆಲಸವನ್ನೆಲ್ಲ ಮುಗಿಸಿ, ಹೂ ಕೊಯ್ಯುತ್ತಾರೆ. ಗಂಡ ಮತ್ತು ಮಕ್ಕಳೂ ಹೂ ಕೀಳುವುದರಲ್ಲಿ ಸಹಾಯ ಮಾಡುತ್ತಾರೆ. ಕಿತ್ತ ಹೂಗಳನ್ನು ಸುಂದರವಾಗಿ ನೇಯಬೇಕು. ಹೀಗೆ ನೇಯ್ದ ಹೂಗಳ ಚಂಡೆಗಳನ್ನು ಅಂಗಡಿಗಳಿಗೋ ಅಥವಾ ನೇರವಾಗಿ ಗ್ರಾಹಕರಿಗೋ ಮಾರಬೇಕು. ಹತ್ತಿರದ ಗ್ರಾಹಕರು ಮನೆಗೆ ಬಂದು ಕೊಂಡುಹೋಗುತ್ತಾರೆ. ಹೂವಲ್ಲದೆ ಮಲ್ಲಿಗೆ ಗಿಡಗಳನ್ನು ತಯಾರಿಸಿ ಮಾರುತ್ತಾರೆ. ಕರ್ನಾಟಕದ ದೂರದೂರುಗಳಿಂದಲೂ ಗ್ರಾಹಕರು ಇವರಿಂದ ಗಿಡಗಳನ್ನು ಖರೀದಿಸುತ್ತಾರೆ.

ವಾಸ್ತವದಲ್ಲಿ, ಕರಾವಳಿಯಲ್ಲಿ ಅದೆಷ್ಟೋ ಸಂಸಾರಗಳನ್ನು ಬಡತನದ ರೇಖೆಯಿಂದ ಮೇಲೆತ್ತಿದ ಹೆಗ್ಗಳಿಕೆ ಈ ಮಲ್ಲಿಗೆ ಹೂವಿನದ್ದು. ಹಾಗೆಯೇ, ಎಷ್ಟೋ ಜನ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವುದರಲ್ಲೂ ಈ ಮಲ್ಲಿಗೆ ತನ್ನ ಕೊಡುಗೆ ನೀಡುತ್ತಿದೆ. ಸ್ವತಃ ಪ್ರೇಮಾರೇ ಹೇಳುವಂತೆ, ಚೆನ್ನಾಗಿ ೫೦ ಮಲ್ಲಿಗೆ ಗಿಡಗಳನ್ನು ಬೆಳೆಸಿದರೆ ಒಂದು ಚಿಕ್ಕ ಸಂಸಾರದ ಖರ್ಚನ್ನು ಸರಿದೂಗಿಸಲು ಸಾಕಾಗುತ್ತದೆ. ಪ್ರೇಮಾ ಪೂಜಾರಿಯವರ ತಾರಸಿಯಲ್ಲಿ ೧೫೦ ಗಿಡಗಳಿವೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಹೂವುಗಳು ಕಡಿಮೆ. ಆದರೂ ದಿನಕ್ಕೆ ೫೦೦-೬೦೦ ರೂಪಾಯಿಗಳಿಗೆ ಏನೂ ತೊಂದರೆಯಿಲ್ಲ. ಏಪ್ರಿಲ್-ಮೇ ಸಮಯದಲ್ಲಿ ಮಲ್ಲಿಗೆ ಹೆಚ್ಚು. ಆಗ ದಿನಕ್ಕೆ ೨೫೦೦ ರೂ.ಗಳಿಗೂ ಹೆಚ್ಚು ಗಳಿಸುತ್ತಾರೆ. ಒಬ್ಬ ಮಹಿಳೆ ಬರೀ ಹತ್ತು ಮಲ್ಲಿಗೆ ಗಿಡಗಳನ್ನು ನೆಟ್ಟು ಬೆಳೆಸಿದರೂ ಸಣ್ಣಪುಟ್ಟ ಖರ್ಚುಗಳಿಗೆ ಗಂಡನನ್ನು ಅವಲಂಬಿಸುವ ತಾಪತ್ರಯ ತಪ್ಪುತ್ತದೆ ಎಂದು ಹೇಳುವಾಗ ಪ್ರೇಮಾ ಪೂಜಾರಿಯವರ ಮುಖದಲ್ಲಿ ತುಂಟ ನಗುವೊಂದು ಹಾದುಹೋಗುತ್ತದೆ.

ಪ್ರೇಮಾ ಪೂಜಾರಿಯವರ ಮಲ್ಲಿಗೆ ಯಶಸ್ಸು ನೋಡಿ ಪ್ರೇರೇಪಿತರಾದ ಆನೇಕ ಮಹಿಳೆಯರು ತಾವೂ ಮಲ್ಲಿಗೆ ಬೆಳೆಸತೊಡಗಿದ್ದಾರೆ. ಹಲವರು ಇವರನ್ನು ಸಂಪರ್ಕಿಸಿ ಮಲ್ಲಿಗೆ ಬೆಳೆಯಲು ಸಹಕಾರ, ಸಲಹೆಗಳನ್ನು ಕೇಳುತ್ತಾರೆ. ಪ್ರೇಮಾ ಪೂಜಾರಿಯವರು ಬಹಳ ಸಂತೋಷದಿಂದ ಇವರಿಗೆ ತನ್ನಿಂದಾಗುವ ಸಹಕಾರಗಳನ್ನು ನೀಡುತ್ತಾರೆ. ಅವರು ಮಲ್ಲಿಗೆ ಬೆಳೆಯುವ ಜಾಗಕ್ಕೆ ಸ್ವತಃ ಹೋಗಿ, ಮಲ್ಲಿಗೆ ಗಿಡ ನೆಡುವ, ಪೋಷಣೆ ಮಾಡುವ ಕ್ರಮಗಳನ್ನು ತಿಳಿಸಿಕೊಡುತ್ತಾರೆ. ತನ್ನಂತೆಯೇ ಆರ್ಥಿಕ ಅಡಚಣೆ ಎದುರಿಸುತ್ತಿರುವ ಮಹಿಳೆಯರು ಹೀಗೆ ಮಲ್ಲಿಗೆ ಬೆಳೆದು ಏಳಿಗೆ ಹೊಂದಲು ತಾನೊಂದು ಮಾದರಿಯಾಗುತ್ತಿರುವುದರ ಬಗ್ಗೆ ತಿಳಿದಾಗ ಪ್ರೇಮಾ ಪೂಜಾರಿ ಸಂತೃಪ್ತಿಯ ನಗೆ ಬೀರುತ್ತಾರೆ. ತನ್ನೊಡತಿಯ ಸಂತೃಪ್ತಿಯನ್ನು ನೋಡಿ ಮಲ್ಲಿಗೆ ಗಿಡಗಳು ತಾರಸಿಯಿಂದಲೇ ಹೌದು ಹೌದು ಎಂದು ಸಮ್ಮತಿ ಸೂಚಿಸುವಂತೆ ಭಾಸವಾಗುತ್ತದೆ.

× Chat with us