– ಜೆ.ಬಿ.ರಂಗಸ್ವಾಮಿ
೧೯೬೬ ರ ಘಟಿಕೋತ್ಸವ. ರಾಜ್ಯಪಾಲ ವಿ ವಿ ಗಿರಿಯವರು ಪದವಿ ಪ್ರದಾನ ಮಾಡಲಿದ್ದರು. ಆ ವರ್ಷದಲ್ಲಿ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿದ್ದವರ ಬಗ್ಗೆ ಚರ್ಚೆ ನಡೆದಿತ್ತು. ವೈಸ್ ಛಾನ್ಸರ್ಲ ಡಾ. ಕೆ.ಎಲ್ ಮಾಲಿ ಅವರು ( ೧೯೬೪ – ೧೯೬೯ ) ಮತ್ತು ರಿಜಿಸ್ಟ್ರಾರಾಗಿದ್ದ ಐಎಎಸ್ ಅಧಿಕಾರಿ ಸಿ.ರಾಮಚಂದ್ರನ್ ಗಾಢ ಸಮಾಲೋಚನೆಯಲ್ಲಿದ್ದರು. ಘಟಿಕೋತ್ಸವ ಇದೇ ರೀತಿ ಹೀಗೇ ನಡೆಯಬೇಕೆಂಬ ನಿಮಿಷ ಪ್ರತಿ ನಿಮಿಷಗಳ ಕಾರ್ಯಕ್ರಮ ಪಟ್ಟಿ ಸಿದ್ದವಾಗಿತ್ತು. ಆದರೆ ಸಮಸ್ಯೆ ಇದ್ದದ್ದು ಪ್ರೋಟೋಕಾಲ್ ವ್ಯವಸ್ಥೆಯನ್ನು ಯಾವ ರೀತಿ ನಿಭಾಯಿಸಬೇಕು ಎಂಬುದರಲ್ಲಿ.
ಅಂದಿನ ಘಟಿಕೋತ್ಸವ ಸಮಾರಂಭಕ್ಕೆ ಮದ್ರಾಸಿನ ರಾಜ್ಯಪಾಲರಾಗಿದ್ದ ಜಯ ಚಾಮರಾಜ ಒಡೆರ್ಯ (೧೮-೦೭-೧೯೧೯ – ೨೩-೦೯-೧೯೭೪ ) ತಾವೂ ಬರುತ್ತೇನೆಂಬ ಸಂದೇಶ ಕಳಿಸಿದ್ದರು. ಅರಮನೆಯ ನಿರೂಪವನ್ನು ತಂದಿದ್ದ ಹುಜೂರ್ ಭಕ್ಷಿಯವರು ಮಹಾಸ್ವಾಮಿಗಳು ತಾವೂ ಬರುವ ಅಪೇಕ್ಷೆಯನ್ನು ತಿಳಿಸಿದ್ದಾರೆ. ಎಷ್ಟು ಹೊತ್ತಿಗೆ ಅವರನ್ನು ಕರೆದು ಕೊಂಡು ಬರಬೇಕೆಂದು ಹೇಳಿರಿ’ ಎಂದು ಕೇಳಿ ಕೊಂಡರು.
ಉಪ ಕುಲಪತಿಗಳಿಗೆ , ರಿಜಿರ್ಸ್ಟ್ರಾ ಮತ್ತಿತರ ಅಧಿಕಾರಿಗಳಿಗೆ ಪೀಕಲಾಟ ಶುರುವಾಯಿತು. ವಿಶ್ವ ವಿದ್ಯಾನಿಲಯದ ಕುಲಾಧಿಪತಿಗಳಾದ ವಿ.ವಿ. ಗಿರಿಯವರು ಬಂದರೆ ಗಾರ್ಡ್ ಆಫ್ ಆನರ್ ಅನ್ನು ಅವರೇ ಸ್ವೀಕರಿಸಬೇಕು. ಅದೇ ವೇಳೆಯಲ್ಲಿ ಮಹಾರಾಜರೂ ಅಲ್ಲೇ ಇದ್ದರೆ ಸಶಸ್ತ್ರ ಗೌರವ ಸಲ್ಲಿಕೆ ಆಭಾಸಕಾರಿ. ಅಥವಾ ಮಹಾರಾಜರೇ ಮೊದಲು ಬಂದರೆಂದರೆ, ಮದ್ರಾಸಿನ ರಾಜ್ಯಪಾಲರಾಗಿರುವ ಅವರಿಗೇ ಮೊದಲು ಗಾರ್ಡ್ ಆಫ್ ಆನರ್ ಸಲ್ಲಿಸಬೇಕಾಗುತ್ತದೆ. ಅವರ ನಂತರ ಬರುವ ಮೈಸೂರು ರಾಜ್ಯಪಾಲರಿಗೆ ಎರಡನೇ ಗಾರ್ಡ್ ಆಫ್ ಆನರ್ ಕೊಡಲಾಗುವುದಿಲ್ಲ. ಗಾರ್ಡ್ ಆಫ್ ಆನರನ್ನು ಒಂದೇ ಬಾರಿ ಕೊಡಬೇಕು. ಅದು ನಿಯಮ. ಆದರೆ ಘಟಿಕೋತ್ಸವದ ಮುಖ್ಯ ಅತಿಥಿಗಳೇ ವಿ ವಿ ಗಿರಿಯವರು!
ಈ ಸೂಕ್ಷ್ಮ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು? ಸುಧೀರ್ಘ ಚರ್ಚೆಯನಂತರ ಕೊನೆಗೊಂದು ಪರಿಹಾರ ಹೊಳೆಯಿತು.
ಸರ್ಕಾರಿ ಭವನದಲ್ಲಿ ಉಳಿದುಕೊಳ್ಳುವ ವಿ.ವಿ.ಗಿರಿಯವರನ್ನು ಮಹಾರಾಜರು ತಮ್ಮ ಅರಮನೆಗೆ ಟೀಗಾಗಿ ಆಹ್ವಾನಿಸುತ್ತಾರೆ. ನಂತರ ಅರಮನೆಯಿಂದ ಇಬ್ಬರೂ ರಾಜ್ಯಪಾಲರು ಒಟ್ಟಿಗೆ ಒಂದೇ ಕಾರಿನಲ್ಲಿ ಕ್ರಾಫರ್ಡ್ ಹಾಲಿಗೆ ಏಕ ಕಾಲದಲ್ಲಿ ಆಗಮಿಸುತ್ತಾರೆ.
ಪದ್ಧತಿಯಂತೆ ವಿವಿ ನಿಲಯದ ಕುಲಾಧಿಪತಿಯಾಗಿ ವಿ.ವಿ. ಗಿರಿಯವರು ಗಾರ್ಡ್ ಆಫ್ ಆನರ್ ಸ್ವೀಕರಿಸುತ್ತಾರೆ. ಮದ್ರಾಸಿನ ರಾಜ್ಯಪಾಲರಾಗಿರುವ ಮಹಾರಾಜರು ಅಲ್ಲೇ ಸಮ್ಮುಖದಲ್ಲೇ ಇದ್ದರೂ ಅದು ಅಭಾಸವೆನಿಸುವುದಿಲ್ಲ. ಒಳಗೆ ಬಂದ ಮೇಲೆ ಕ್ರಾಫರ್ಡ್ ಹಾಲ್‌ನಲ್ಲಿ ಸಿದ್ಧ ಪಡಿಸಿರುವ ವಿಶೇಷ ಆಸನದಲ್ಲಿ ಮಹಾರಾಜರು ಕುಳಿತು ಕೊಳ್ಳುತ್ತಾರೆ. ವೇದಿಕೆಯ ಕಾರ್ಯಕ್ರಮಗಳು ವಿ ವಿ ಗಿರಿಯವರ ಸಮಕ್ಷಮದಲ್ಲಿ ಯಥಾಪ್ರಕಾರ ನಡೆಯುತ್ತವೆ. ಯಾರಿಗೂ ಮುಜಗರವಾಗಲೀ ಅಭಾಸವಾಗಲೀ ಆಗುವುದಿಲ್ಲ.
ಈ ವ್ಯವಸ್ಥೆಯೇನೋ ಸರಿಯಾಗಿದೆ. ಆದರೆ ಅಭಾಸವಾಗಿಬಿಟ್ಟರೆ? ಹಿರಿಯ ಪೊಲೀಸ್ ಅಧಿಕಾರಿಗಳು, ರೆವಿನ್ಯೂ ಅಧಿಕಾರಿಗಳನ್ನು ಕರೆಸಿ ಮತ್ತೊಮ್ಮೆ ಈ ವ್ಯವಸ್ಥೆಯ ಬಗ್ಗೆ ಸಮಾಲೋಚಿಸಿದರು. ಒಕ್ಕೊರಲಿಂದ ಈ ವ್ಯವಸ್ಥೆಯೇ ಸರಿ ಎಂದರು.
ಇವೆಲ್ಲ ದ್ರಾವಿಡ ಪ್ರಾಣಾಯಾಮಕ್ಕೆ ವಿಶೇಷ ಕಾರಣವಿತ್ತು. ಆ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಆಯ್ಕೆಯಾಗಿದ್ದವರು, ರಾಜಕುಮಾರಿ ಗಾಯತ್ರಿ ದೇವಿ . ಮಹಾರಾಜರ ಮೊದಲ ಮಗಳು. ಆಕೆ ಅವರ ಮಗಳು ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿರಲಿಲ್ಲ. ರಾಜಕುಮಾರಿ ಗಾಯತ್ರಿದೇವಿಯವರು ಓದುವಿಕೆ ಮತ್ತು ಪಠ್ಯೇತರ ಚಟುವಟಿಕೆ ಹಾಗೂ ಗಾಂಭೀರ್ಯದ ಸನ್ನಡತಗೆ ಹೆಸರಾಗಿದ್ದರು. ಅವರ ಹೆಸರನ್ನು ಆತಂಕದಿಂದಲೇ ಎಚ್ಚರಿಕೆ ವಹಿಸಿ ಆಯ್ಕೆ ಮಾಡಲಾಗಿತ್ತು.
ಇದಲ್ಲದೆ ಮತ್ತೊಂದು ಕಾರಣವೂ ಇದ್ದಿರಬಹುದು. ವಿವಿ ನಿಲಯವನ್ನು ಸ್ಥಾಪಿಸಿದವರೇ ಮಹಾರಾಜರು. ತಾವು ಮಹಾರಾಜರಾಗಿದ್ದಾಗ ಜಯತಮ್ಮ ಮುದ್ದಿನ ಮಗಳು ಆಯ್ಕೆಯಾಗಿರುವ ವಿಷಯ ತಿಳಿದು ಸಮಾರಂಭದಲ್ಲಿ ಪಾಲ್ಗೊಳ್ಳಲು ಮಹಾರಾಜರು ಸ್ವತಃ ಮದ್ರಾಸಿನಿಂದ ಅರಮನೆಗೆ ಧಾವಿಸಿ ಬಂದಿದ್ದರು. ತಮ್ಮ ಬರುವಿಕೆಯ ಅಪೇಕ್ಷೆಯನ್ನು ಭಕ್ಷಿಯವರ ಮೂಲಕ ಹೇಳಿ ಕಳಿಸಿದ್ದರು.
ತಡ ಮಾಡುವಂತಿರಲಿಲ್ಲ. ಘಟಿಕೋತ್ಸವದ ಹಿಂದಿನ ದಿನವೇ ಉಪ ಕುಲಪತಿಗಳು, ರಿಜಿಸ್ಟ್ರಾರರು ಮಹಾರಾಜರನ್ನು ಅರಮನೆಯಲ್ಲಿ ಕಂಡು ಆ ಸಮಾರಂಭಕ್ಕೆ ವಿಶೇಷ ಆಹ್ವಾನ ನೀಡಿದರು. ಕಾರ್ಯಕ್ರಮದ ವ್ಯವಸ್ಥೆ ಬಗ್ಗೆ ಕೂಡ ವಿವರಿಸಿದರು.
ಮಹಾರಾಜರು ಈ ಗಾರ್ಡ್ ಆಫ್ ಆನರ್ ಮುಂತಾದ ಅಲಂಕಾರಿಕ ಮರ್ಯಾದೆಗಳನ್ನು ದಾಟಿದ್ದ ದಾರ್ಶನಿಕ ವ್ಯಕ್ತಿ. ‘ನಿಮಗೆ ಹೇಗೆ ಸೂಕ್ತವೋ ಹಾಗೆಯೇ ಮಾಡಿ. ಅಭ್ಯಂತರವಿಲ್ಲ. ಕಾರ್ಯಕ್ರಮ ಮುಗಿಯುವವರೆಗೂ ನಾನು ಕುಳಿತಿರುತ್ತೇನೆ. ನಡುವೆ ಎದ್ದು ಹೋಗುವುದಿಲ್ಲವಾದ್ದರಿಂದ ಸಭೆಗೆ ತೊಂದರೆಯಾಗದು. ವಿ ವಿ ಗಿರಿಯವರಿಗೆ ಅರಮನೆಯಿಂದ ಆಹ್ವಾನ ಕಳಿಸುತ್ತೇವೆ. ನಾವಿಬ್ಬರೂ ಇಲ್ಲಿಂದ ಒಟ್ಟಿಗೆ ಬರುತ್ತೇವೆ. ಬೇರೇನೂ ಯೋಚಿಸ ಬೇಡಿ’ ಎಂದು ಅವರೇ ಸಮಾಧಾನಿಸಿ ಮಾತಾಡಿ ಕಳಿಸಿದರು.
ಚಾಮರಾಜ ಒಡೆಯರು ವಿವಿ ನಿಲಯದ ಅಭಿವೃದ್ಧಿಗಾಗಿ ಅನೇಕ ಶಾಶ್ವತ ಯೋಜನೆಗಳನ್ನು ತಂದಿದ್ದರು. ಅರ್ಹತೆಯುಳ್ಳ ಅವರ ಮಗಳಿಗೇ ಆ ವರ್ಷ ಪ್ರಶಸ್ತಿ ಎಂಬುದರಲ್ಲಿ ಚಿಕ್ಕ ಕೃತಜ್ಞತೆಯೂ ಅಡಕವಾಗಿತ್ತು.
ತಮ್ಮ ಮುದ್ದಿನ ಮಗಳು ಆಯ್ಕೆಯಾಗಿರುವ ವಿಷಯ ತಿಳಿದು ಸಮಾರಂಭದಲ್ಲಿ ಪಾಲ್ಗೊಳ್ಳಲು ಮಹಾರಾಜರು ಸ್ವತಃ ಮದ್ರಾಸಿನಿಂದ ಅರಮನೆಗೆ ಧಾವಿಸಿ ಬಂದಿದ್ದರು. ತಮ್ಮ ಬರುವಿಕೆಯ ಅಪೇಕ್ಷೆಯನ್ನು ಭಕ್ಷಿಯವರ ಮೂಲಕ ಹೇಳಿ ಕಳಿಸಿದ್ದರು.
ತಡ ಮಾಡುವಂತಿರಲಿಲ್ಲ. ಘಟಿಕೋತ್ಸವದ ಹಿಂದಿನ ದಿನವೇ ಉಪ ಕುಲಪತಿಗಳು, ರಿಜಿಸ್ಟ್ರಾರರು ಮಹಾರಾಜರನ್ನು ಅರಮನೆಯಲ್ಲಿ ಕಂಡು ಆ ಸಮಾರಂಭಕ್ಕೆ ವಿಶೇಷ ಆಹ್ವಾನ ನೀಡಿದರು. ಕಾರ್ಯಕ್ರಮದ ವ್ಯವಸ್ಥೆ ಬಗ್ಗೆ ಕೂಡ ವಿವರಿಸಿದರು.
ಮಹಾರಾಜರು ಈ ಗಾರ್ಡ್ ಆಫ್ ಆನರ್ ಮುಂತಾದ ಅಲಂಕಾರಿಕ ಮರ್ಯಾದೆಗಳನ್ನು ದಾಟಿದ್ದ ದಾರ್ಶನಿಕ ವ್ಯಕ್ತಿ. ‘ನಿಮಗೆ ಹೇಗೆ ಸೂಕ್ತವೋ ಹಾಗೆಯೇ ಮಾಡಿ. ಅಭ್ಯಂತರವಿಲ್ಲ. ಕಾರ್ಯಕ್ರಮ ಮುಗಿಯುವವರೆಗೂ ನಾನು ಕುಳಿತಿರುತ್ತೇನೆ. ನಡುವೆ ಎದ್ದು ಹೋಗುವುದಿಲ್ಲವಾದ್ದರಿಂದ ಸಭೆಗೆ ತೊಂದರೆಯಾಗದು. ವಿ ವಿ ಗಿರಿಯವರಿಗೆ ಅರಮನೆಯಿಂದ ಆಹ್ವಾನ ಕಳಿಸುತ್ತೇವೆ. ನಾವಿಬ್ಬರೂ ಇಲ್ಲಿಂದ ಒಟ್ಟಿಗೆ ಬರುತ್ತೇವೆ. ಬೇರೇನೂ ಯೋಚಿಸ ಬೇಡಿ’ ಎಂದು ಅವರೇ ಸಮಾಧಾನಿಸಿ ಮಾತಾಡಿ ಕಳಿಸಿದರು.
ಈ ಪ್ರಸಂಗವನ್ನು ಹೇಗೆ ನಿಭಾಯಿಸುವುದೋ ಎಂದು ವಿಹ್ವಲರಾಗಿದ್ದ ಉಪ ಕುಲಪತಿಗಳು ನೆಮ್ಮದಿಯ ನಿಟ್ಟುಸಿರಿಟ್ಟರು. ಅಕಸ್ಮಾತ್ ಮಹಾರಾಜರು ಕೋಪಗೊಂಡು ಏನಾದರೂ ಮಾತಾಡಿಬಿಟ್ಟರೆ ಎಂಬ ಆತಂಕ ಅವರನ್ನು ಬಿಡದೆ ಕಾಡಿತ್ತು. ಅದೇ ಸಂಜೆ ರಾಜ್ಯಪಾಲ ವಿ ವಿ ಗಿರಿಯವರು ಸರ್ಕಾರಿ ಭವನಕ್ಕೆ ಆಗಮಿಸಿದರು. ಕುಲಪತಿಗಳು ಅವರನ್ನು ಕಂಡು ಆಹ್ವಾನಿಸಿ, ಕಾರ್ಯಕ್ರಮ ನಡೆಯುವ ರೀತಿಯನ್ನು ವಿವರಿಸಿದರು.
ಕಾರ್ಮಿಕ ನಾಯಕ ಎಂದು ಬಿಂಬಿಸಿಕೊಂಡಿದ್ದ ವಿ ವಿ ಗಿರಿಯವರು ಒಮ್ಮೆಲೇ ಅಸಮಧಾನಗೊಂಡರು. ‘ತಾನು ಅರಮನೆಗೆ ಹೋಗುವುದೇ? ಅರಸೊತ್ತಿಗೆ ಅಳಿದು ಪ್ರಜಾಪ್ರಭುತ್ವ ಬಂದಿದೆ. ರಾಜರ ಕಾಲಮುಗಿದರೂ ನಿಮಗಿನ್ನೂ ಹಳೇ ನೆನಪು ಹೋಗಿಲ್ಲವೇ? ರಾಜ್ಯಪಾಲನಾಗಿ ಟೀ ಕುಡಿಯಲು ನಾನು ಅಲ್ಲಿಗೆ ಹೋಗೋದಿಲ್ಲ. ಒರಿಜಿನಲ್ ಕಾರ್ಯಕ್ರಮ ಏನಿದೆಯೋ ಹಾಗೇ ನಡೆಯಲಿ. ಮದ್ರಾಸ್ ಗೌವರ್ನರ್ ಬರೋದು ಬಿಡೋದು ಅವರ ಖಾಸಗಿ ವಿಷಯ. ಬಂದರೆ ಬರಲಿ. ನನಗೂ ಅದಕ್ಕೂ ಸಂಬಂಧವಿಲ್ಲ’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿಯೇ ಬಿಟ್ಟರು.
ಸರಳ ವಿಷಯ ಇದ್ದಕ್ಕಿದ್ದಂತೆ ಕ್ಲಿಷ್ಟಗೊಂಡಿದ್ದರಿಂದ ಉಪ ಕುಲಪತಿಗಳು ದಿಗ್ಭ್ರಾಂತರಾದರು. ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಜೊತೆಯಲ್ಲಿದ್ದ ರಿಜಿಸ್ಟ್ರಾರ್ ಅವರು, ‘ಮಹಾರಾಜರ ಪರವಾಗಿ ಅರಮನೆಯ ಹುಜೂರ್ ಭಕ್ಷಿಯವರು ತಮ್ಮನ್ನು ಆಹ್ವಾನಿಸಲು ಬಂದಿದ್ದಾರೆ ಸರ್. ತಾವು ಅನುಮತಿಸಿದರೆ ಕರೆಯುತ್ತೇನೆ’ ಎಂದರು. ‘ ಕರೆಯುವುದಿದ್ದರೆ ಟಠಿ ಬಂದು ಕರೆಯಲಿ. ಭಕ್ಷಿಗಳೆಲ್ಲಾ ಕರೆದರೆ ನಾನು ಬರೋದಿಲ್ಲ!’ ಅಂದೇ ಬಿಟ್ಟರು ವಿವಿ ಗಿರಿ.
ಆದರೂ ರಿಜಿಸ್ಟ್ರಾರ್ ಪಟ್ಟು ಬಿಡಲಿಲ್ಲ. ‘ಅವರು ಮಹಾರಾಜರ ಕರೆಯೋಲೆ ಕೊಟ್ಟು ಹೋಗ್ತಾರೆ ಸರ್. ಹೋಗೋದು ಬಿಡೋದು ತಮ್ಮ ಚಿತ್ತ’ ಎಂದವರೇ ಭಕ್ಷಿಯವರನ್ನು ಕರೆದು ಕರೆಯೋಲೆ ಕೊಡಿಸಿದರು.
‘ನಾನು ನೇರವಾಗಿ ಸಮಾರಂಭದ ಸ್ಥಳಕ್ಕೆ ಹೋಗ್ತಿದ್ದೇನೆ. ಅಲ್ಲೇ ನಿಮ್ಮ ಮಹಾರಾಜರನ್ನು ಭೆಟ್ಟಿ ಮಾಡ್ತೀನಿ’ ಎಂದು ಭಕ್ಷಿಯವರ ಮುಖಕ್ಕೇ ನೇರವಾಗಿ ಹೇಳಿಬಿಟ್ಟರು ವಿ ವಿ ಗಿರಿ.
ಆರೇಳು ದಿನದಿಂದ ಮಾಡಿದ್ದ ವ್ಯವಸ್ಥೆಯೆಲ್ಲಾ ಮಣ್ಣು ಪಾಲಾಗಿತ್ತು. ಗಿರಿಯವರು ಅಷ್ಟು ಕಹಿಯಾಗಿ ಮಾತಾಡುವ ಅಗತ್ಯವಿರಲಿಲ್ಲ. ಮಹಾರಾಜರಿಗೆ ಏನು ಹೇಳುವುದೋ ತಿಳಿಯದೆ ಪೆಚ್ಚಾದರು. ಆದರೂ ಭಕ್ಷಿಯವರಿಗೆ ವಿಷಯ ಹೀಗೀಗಿದೆ ಅಂತ ಮಹಾರಾಜರಿಗೆ ಸೂಕ್ಷ್ಮವಾಗಿ ತಿಳಿಸಿ ಬಿಡಿ. ನಾವಂತೂ ಮಹಾರಾಜರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಿರುತ್ತೇವೆ. ಇವರು ಪ್ರಯಾಣದಿಂದ ಸುಸ್ತಾಗಿ ಬಂದಿದ್ದಾರೆ . ಅದರಿಂದ ಹಾಗೆ ಮಾತಾಡಿರಲೂ ಬಹುದು. ಮಹಾರಾಜರು ಏನು ಹೇಳ್ತಾರೋ ಅದರಂತೆ ನಾವು ಮಾಡೋಣ ಎಂದು ಹೇಳಿ ಕಳಿಸಿದರು ರಿಜಿಸ್ಟ್ರಾರ್ ರಾಮಚಂದ್ರನ್. ಪುನಃ ಮಹಾರಾಜರನ್ನು ಕಾಣಲು ಹಿಂಜರಿಕೆ ಕಾಡಿತು. ಹೋಗಲಿಲ್ಲ.
ಮಾರನೇ ದಿನ ವಿ ವಿ ಗಿರಿಯವರು ಕ್ರಾಫರ್ಡ್ ಹಾಲ್ ಗೆ ಬಂದವರೇ ನೇರ ಗಾರ್ಡ್ ಆಫ್ ಆನರ್ ಸಶಸ್ತ್ರ ವಂದನೆ ಸ್ವೀಕರಿಸಿದರು. ಅತ್ತಿತ್ತ ನೋಡಿದರೆ ತಾನೇ ಮಹಾರಾಜರ ದರ್ಶನ? ಸೀದಾ ವೇದಿಕೆಯತ್ತ ಹೆಜ್ಜೆ ಹಾಕಿದರು. ಮಹಾರಾಜರು ಬಂದಿದ್ದಾರೆಯೇ ಎಂದು ತಪ್ಪಿ ಕೂಡ ವಿಚಾರಿಸಲಿಲ್ಲ. ರಿಜಿಸ್ಟ್ರಾರರಿಗೆ ಆತಂಕ. ಕಾರ್ಯಕ್ರಮ ಶುರುವಾದ ಮೇಲೆ ಮಹಾರಾಜರು ಬಂದುಬಿಟ್ಟರೆ?
ಇಡೀ ಸಮಾರಂಭವೇ ಗಲಿಬಿಲಿಗೊಳ್ಳುತ್ತದೆಯಲ್ಲಾ ಎಂಬ ತಲ್ಲಣ. ಮಗಳಿಗಾಗಿ ಮದ್ರಾಸಿನಿಂದ ಬಂದಿರುವಾಗ ಬಾರದೆ ಇರುತ್ತಾರೆಯೇ? ಕೊನೆಗಳಿಗೆಗಾದರೂ ಬಂದಾರು ಎಂದು ಕಾದೇ ಕಾದರು. ಡಾಕ್ಟರೇಟ್ ಪಡೆದವರು, ರ್ಯಾಂಕ್ ಗಳಿಸಿದವರು ಹೀಗೆ ಪ್ರಶಸ್ತಿಗಳ ವಿತರಣೆಯಾಗುತ್ತಾ ಹೋಯಿತು. ವಿ ವಿ ಗಿರಿಯವರೂ ಉತ್ಸಾಹದಿಂದ ವಿತರಿಸುತ್ತಾ ಹೋದರು.
ಅಗ ಅನೌನ್ಸಾಯಿತು. best student of the university ಪ್ರಶಸ್ತಿ!.
ಯಾರಿರಬಹುದೆಂಬ ಕಾತರದಿಂದ ಇಡೀ ಸಭಾಂಗಣ ಕಿವಿ ತೆರೆಯಿತು. ಯುವರಾಣಿ ಗಾಯತ್ರಿ ದೇವಿ! (೧೯೪೬ – ೧೯೭೪).
ಆ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಅವರಾರು? ಆಕೆಯ ನಡೆ ನುಡಿ ಹೇಗೆ ಎಂತು ? ಎಂಬುದನ್ನು ವಿಶ್ವ ವಿದ್ಯಾಲಯದ ಸರ್ವರೂ ವರ್ಷಗಳಿಂದ ಗಮನಿಸಿದ್ದರು.
ಇಡೀ ಕ್ರಾಫರ್ಡ್ ಹಾಲ್ ಸಭಾಂಗಣ ಹುಚ್ಚೆದ್ದು ಸಂಭ್ರಮಿಸಿತು. ಗಡಚಿಕ್ಕುವ ಜೋರು ಚಪ್ಪಾಳೆ ಮಾಳಿಗೆ ಮುಟ್ಟಿತು. ಗಂಭೀರವಾಗಿ ನಡೆದುಬಂದ ಗಾಯತ್ರಿದೇವಿಯವರು ಪ್ರಶಸ್ತಿ ಸ್ವೀಕರಿಸಿ ಹೋದ ನಂತರವೂ ಕರತಾಡನ ಮೊಳಗುತ್ತಿತ್ತು. ಒಂದೇ ಒಂದು ಅಪಸ್ವರವೂ ಇಲ್ಲದ ಅಪೂರ್ವ ಸಂದರ್ಭ ಅದಾಯಿತು.
ನಿವೃತ್ತರಾದ ಮೇಲೆ ಬರೆದ ‘ತಾಬೇದಾರಿ’ ಪುಸ್ತಕದಲ್ಲಿ ಶ್ರೀ ರಾಮಚಂದ್ರನ್ ಉಲ್ಲೇಖಿಸುತ್ತಾರೆ :
‘ಯಾವುದೇ ತಂದೆ ತಾಯಿಗಾಗಲೀ ಅಂತಹ ಸಂದರ್ಭ ಅಪರೂಪದಲ್ಲಿ ಅಪರೂಪ. ಆ ಅಯ್ಕೆಯನ್ನು ಜನ ಮೆಚ್ಚಿದರೆಂಬುದು ಅತ್ಯಂತ ಗೌರವದ ವಿಷಯ. ಬಹುಶಃ ಮಹಾರಾಜರು ಅಂದು ಬಂದಿದ್ದರೆ ಮುದ್ದಿನ ಮಗಳ ಸಂಭ್ರಮಮವನ್ನು ಹೇಗೆ ಕಣ್ತುಂಬಿಕೊಳ್ಳುತ್ತಿದ್ದರೋ?
ಅವರೇನೋ ಮಹಾರಾಜರು. ಸ್ವತಂತ್ರವಾಗಿ ನಗಲೂ ಅನೇಕ ಕಟ್ಟು ಪಾಡುಗಳು. ತಮ್ಮ ಅಪೇಕ್ಷೆಗಳನ್ನು ಜನಸಾಮಾನ್ಯರಂತೆ ಪೂರೈಸಿಕೊಳ್ಳಲಾರರು. ಮಗಳಿಗೆ ನೀಡುವ ಪುರಸ್ಕಾರವನ್ನು ಕಣ್ತುಂಬಿಕೊಳ್ಳಲು ಮದ್ರಾಸಿನಿಂದ ಮೈಸೂರಿಗೆ ಬಂದಿದ್ದರು. ಅದೊಂದು ಚಿಕ್ಕ ಆಸೆ. ಆದರೆ ಉನ್ನತ ಸ್ಥಾನಕ್ಕೇರಿಸಿದವರ ಕ್ಷುದ್ರ ಧಿಮಾಕಿನಿಂದಾಗಿ ಸ್ವಾಭಾವಿಕ ಸಂತೋಷಕ್ಕೂ ಎರವಾಯಿತು. ನನ್ನ ವೃತ್ತಿ ಬದುಕಿನಲ್ಲಿ ಅತ್ಯಂತ ಕಲಕಿದ ಸಂಗತಿ ಇದು. ಒಂದು ಸರಳ ಸಜ್ಜನಿಕೆಯ ಹೃದಯವನ್ನು ಇರಿದು ನೋಯಿಸಬಾರದಿತ್ತು, ಅವರೇನು ಸಾಮಾನ್ಯರಲ್ಲ. ಮೈಸೂರನ್ನು ಆಳಿದ್ದ ಕೊನೆಯ ಮಹಾರಾಜರು. ಶ್ರೇಷ್ಠ ಮಟ್ಟದ ಸಂಗೀತ ವಿದ್ವಾಂಸರು. ವಾಗ್ಗೇಯಕಾರರು. ದಾರ್ಶನಿಕರು. ತತ್ವಜ್ಞಾನದ ದತ್ತಾತ್ರೇಯ ಕೃತಿ ರಚಿಸಿದವರು. ಮತ್ತು ಆ ಸಮಯದಲ್ಲಿ ಮದ್ರಾಸಿನ ಗೌನರರ್ ಸಹ ಆಗಿದ್ದವರು. ಯಾರದೋ ಚಿಲ್ಲರೆ ಹಠಕ್ಕಾಗಿ ಮೌನದಿಂದ ಅರಮನೆಯಲ್ಲೆ ಉಳಿದು ಬಿಟ್ಟರಲ್ಲಾ ಎಂದು ವ್ಯಥೆಯಾಗುತ್ತದೆ. ತಂದೆಯ ಹೃದಯ ಅದೆಷ್ಟು ನೊಂದಿತೋ?’
ಸಂದರ್ಶನವೊಂದರಲ್ಲಿ ಹೇಳಿಕೊಂಡರು ಶ್ರೀ ರಾಮಚಂದ್ರನ್.
ಇಪ್ಪತ್ತೇ ಇಪ್ಪತ್ತು ನಿಮಿಷ ಸೌಹಾರ್ದಯುತವಾಗಿ ಟೀ ಕುಡಿದು ಜೊತೆಯಲ್ಲೇ ಬಂದಿದ್ದರೆ ಅದರ ಘನತೆಯೇ ಬೇರೆಯಾಗಿರುತ್ತಿತ್ತು. ಅಂದಿನ ಅನಗತ್ಯ ಕಠೋರತೆಗೆ ಮಹಾರಾಜರು ಒಂದಿನಿತೂ ಅರ್ಹರಾಗಿರಲಿಲ್ಲ. ಅರಮನೆಯ ರೀತಿ ರಿವಾಜಿನಂತೆ ಆಹ್ವಾನ ಪತ್ರವನ್ನು ಕಳಿಸಿ, ಬರುವಂತೆ ವಿನಂತಿಸಿದ್ದರು. ಅದಕ್ಕಿಂತ ಹೆಚ್ಚು ಸರಳತೆ ನಿರೀಕ್ಷಿಸಲಾಗದು. ಯುವರಾಣಿ ಗಾಯತ್ರಿದೇವಿ ಸಹಜ ಗಾಂಭೀರ್ಯ ಮತ್ತು ಸಂಕೋಚದಿಂದ ಪ್ರಶಸ್ತಿ ಸ್ವೀಕರಿಸಲು ಬಂದ ಚಿತ್ರ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ೧೯೭೪ ರಲ್ಲಿ ಕೇವಲ ೨೮ ವರ್ಷದ ಆಕೆ ಅನಿರೀಕ್ಷಿತವಾಗಿ ಮರಣ ಹೊಂದಿದಾಗ ದುಃಖ ಒತ್ತರಿಸಿ ಬಂತು, ಬಿಕ್ಕಳಿಸಿ ಅತ್ತೆ ಎಂದರು ರಾಮಚಂದ್ರನ್.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…