ಐಟಿ ಉದ್ಯೋಗಿ ಪುತ್ರನ ಕೈಗಳೂ ಸೇರಿ ಏಳು ಅಂಗಗಳ ದಾನ!

ಮುಂಬೈಯ 16 ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೋನಿಕಾ ಮೋರೆ 2014ರ ಒಂದು ದಿನ ಘಾಟ್ಕೋಪರ್ ರೈಲ್ವೆ ಸ್ಟೇಷನ್ನಿನಲ್ಲಿ ಜನಜಂಗುಳಿಯ ನಡುವೆ ರೈಲು ಹತ್ತುವಾಗ, ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಸಂಧಿನೊಳಗೆ ಜಾರಿ ಬಿದ್ದು, ಅವಳ ಎಡಗೈ ಸುಂಪೂರ್ಣವಾಗಿ ದೇಹದಿಂದ ಬೇರ್ಪಟ್ಟು, ಬಲಗೈ ಸಣ್ಣದೊಂದು ಎಳೆಯ ಮೂಲಕ ನೇತಾಡುತ್ತಿತ್ತು. ಅವಳನ್ನು ತುಂಡಾದ ಕೈಯ ಸಮೇತ ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅಷ್ಟರಲ್ಲಿ ಬಹಳ ಸಮಯ ಕಳೆದುಹೋದ ಕಾರಣ ಅವಳ ಕೈಗಳನ್ನು ಪುನಃ ದೇಹಕ್ಕೆ ಜೋಡಿಸಲಾಗಲಿಲ್ಲ. ನಂತರ, ಹಲವು ಬಗೆಯ ಕೃತಕ ಕೈಗಳನ್ನು ಅಳವಡಿಸಿಕೊಂಡರೂ ಅವುಗಳಿಂದ ಅನುಕೂಲಕ್ಕಿಂತ ಅನಾನುಕೂಲತೆಗಳೇ ಹೆಚ್ಚಾಗಿ, ಯಾರಾದರೂ ದಾನಿಗಳಿಂದ ಕೈಗಳು ದಾನ ಸಿಗಬಹುದು ಎಂಬ ನಿರೀಕ್ಷೆಯಿಂದ 2019ರಲ್ಲಿ ʻಆರ್ಗನ್ ಟ್ರಾನ್ಸ್‌ಪ್ಲಾಂಟ್ ವೆಯ್ಟ್‌ಲಿಸ್ಟ್ʼನಲ್ಲಿ ತನ್ನ ಹೆಸರನ್ನು ದಾಖಲಿಸುತ್ತಾಳೆ.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಅರಿವು ಮೂಡಿ, ಅಂಗಾಂಗ ದಾನ ಮಾಡುವ ಕ್ರಮ ನಿಧಾನವಾಗಿಯಾದರೂ ಹೆಚ್ಚುತ್ತಿದೆ. ಆದರೆ, ಹೀಗೆ ದಾನ ಮಾಡುವ ಅಂಗಾಂಗಳು ಹೃದಯ, ಲಿವರ್, ಕಿಡ್ನಿ ಮೊದಲಾದ ದೇಹದ ಒಳಗಿನ ಅಂಗಾಂಗಳೇ ವಿನಃ (ಕಣ್ಣು ಹೊರತುಪಡಿಸಿ) ಕೈ, ಕಾಲು ಮೊದಲಾಗಿ ಬಾಹ್ಯ ಅಂಗಾಂಗಗಳನ್ನು ದಾನ ಮಾಡುವ ಕ್ರಮ ನಮ್ಮಲ್ಲಿ ಇನ್ನೂ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಒಳಗಿನ ಅಂಗಾಂಗಗಳನ್ನು ತೆಗೆದಾಗ ದೇಹ ಹೊರಗಿನಿಂದ ನೋಡಲು ಇಡೀಯಾಗೇ ಕಾಣುತ್ತದೆ. ಆದರೆ, ಹೊರಗಿನ ಅಂಗಗಳನ್ನು ತೆಗೆದಾಗ ದೇಹವು ʻವಿಕಾರʼಗೊಳ್ಳುವುದರಿಂದ ಇಂತಹ ದಾನಗಳಿಗೆ ಮುಂದೆ ಬರುವವರು ತೀರಾ ಅಪರೂಪ. ಇಂತಹ ಸಂದರ್ಭದಲ್ಲಿ ಚಮತ್ಕಾರವೋ ಎಂಬಂತೆ, 2020ರ ಆಗಸ್ಟ್ ತಿಂಗಳ 28ರಂದು ಚೆನ್ನೈಯ ಒಂದು ಕುಟುಂಬ ʻಮಿದುಳು ನಿಷ್ಕ್ರಿಯʼಗೊಂಡ(ಬ್ರೈನ್ ಡೆಡ್) ತಮ್ಮ ಮಗನ ಇತರ ಅಂಗಗಳ ಜೊತೆ ಕೈಗಳನ್ನು ದಾನ ನೀಡಲು ತೀಮಾನಿಸಿದ ಸುದ್ದಿ ಮೋನಿಕಾ ಮೋರೆಯನ್ನು ನೋಡಿಕೊಳ್ಳುತ್ತಿದ್ದ ʻಗ್ಲೋಬಲ್ ಹಾಸ್ಪಿಟಲ್ʼ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ. ನೀಲೇಶ್ ಸಾಥ್‌ಭಾಯ್‌ಯವರಿಗೆ ತಿಳಿದು ಬರುತ್ತದೆ.

ಚೆನ್ನೈಯ 34 ವರ್ಷ ಪ್ರಾಯದ ಆಸೆಲಾನ್ ಅರ್ಜುನನ್ ಒಬ್ಬ ಐಟಿ ಉದ್ಯೋಗಿ. ಅಂದು ಅವರು ಗಂಭೀರ ರೂಪದ ʻಸ್ಟ್ರೋಕ್ʼಗೊಳಗಾಗಿ ಅವರ ಮಿದುಳು ನಿಷ್ಕ್ರಿಯವಾಗುತ್ತದೆ. ಆಸಿಲಾನ್ ಅರ್ಜುನನ್‌ರ ತಂದೆ 65 ವರ್ಷ ಪ್ರಾಯದ ಅರ್ಜುನನ್ ಮತ್ತು 58 ವರ್ಷ ಪ್ರಾಯದ ತಾಯಿ ಕಲೈಸೆಲ್ವಾ ಅಂತಹ ದುಃಖಕರ ಸಂದರ್ಭದಲ್ಲೂ ಧೃತಿಗೆಡದೆ ಆತನ ಕೈಗಳೂ ಸೇರಿ ಏಳು ಅಂಗಗಳನ್ನು ದಾನ ನೀಡಲು ಮುಂದೆ ಬರುತ್ತಾರೆ. ಅದು ಕೋವಿಡ್ ಬಿಕ್ಕಟ್ಟಿನಲ್ಲಿ ಹೇರಿದ್ದ ಲಾಕ್‌ಡೌನ್ ಸಮಯ. ದೇಶದಲ್ಲಿ ಪ್ರಯಾಣ ಮತ್ತು ಸರಕು ಸಾಗಣೆ ಕಷ್ಟಕರವಾದ ದಿನಗಳು. ಆದರೂ ಗ್ಲೋಬಲ್ ಹಾಸ್ಪಿಟಲ್ ಮತ್ತು ಡಾ. ನೀಲೇಶ್ ಸಾಥ್‌ಭಾಯ್ ತಂಡ 2020ರ ಆಗಸ್ಟ್ 28ರಂದು ಒಂದು ಚಾರ್ಟೆಡ್ ವಿಮಾನದ ಮೂಲಕ ಚೆನ್ನೈಯಿಂದ ಆ ಕೈಗಳನ್ನು ಮುಂಬೈಗೆ ತರಿಸಿಕೊಂಡು, 16 ಗಂಟೆಗಳ ಅತ್ಯಂತ ಸಂಕೀರ್ಣ ಸರ್ಜರಿಯ ಮೂಲಕ ಅವುಗಳನ್ನು ಮೋನಿಕಾ ಮೋರೆಯ ದೇಹಕ್ಕೆ ಜೋಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಮೋನಿಕಾಳ ಕುಟುಂಬ ಒಂದು ಮಧ್ಯಮವರ್ಗದ ಕುಟುಂಬವಾದ ಕಾರಣ ಸರ್ಜರಿಗೆ ತಗಲಿದ 36 ಲಕ್ಷ ರೂಪಾಯಿಗಳನ್ನು ದಾನಿಗಳು ನೀಡಿದ ದೇಣಿಗೆಗಳಿಂದ ಸಂಗ್ರಹಿಸಲಾಯಿತು.

ಮೋನಿಕಾ ಮೋರೆಗೆ ಈಗ 25 ವರ್ಷ ಪ್ರಾಯ. ಇದೇ ಆಗಸ್ಟ್ 27ರ ಶುಕ್ರವಾರದಂದು ಸರ್ಜರಿಯಾಗಿ ಒಂದು ವರ್ಷವಾಗಿತ್ತು. ಅಂದು ಆಸೆಲಾನ್‌ನ ತಂದೆ ಅರ್ಜುನನ್ ಮತ್ತು ತಾಯಿ ಕಲೈಸೆಲ್ಲಾ ವಿಮಾನ ಮೂಲಕ ಮುಂಬೈಗೆ ಬಂದು ಮೋನಿಕಾಳನ್ನು ಭೇಟಿಯಾದರು. ಆಸೆಲಾನ್ ಅರ್ಜುನನ್ ಕೈಗಳು ಅವಳ ದೇಹಕ್ಕೆ ಎಷ್ಟು ಚೆನ್ನಾಗಿ ಜೋಡಣೆಯಾಗಿಯೆಂದರೆ ಆ ಕೈಗಳ ಚರ್ಮದ ಬಣ್ಣವೂ ಅವಳ ದೇಹದ ಬಣ್ಣಕ್ಕೆ ತಿರುಗಿದೆ. ತಮ್ಮ ಮಗನ ಒಂದು ಅಂಗವಾದರೂ ಈ ರೀತಿಯಲ್ಲಿ ಜೀವಂತವಿದೆಯೆಲ್ಲ ಎಂಬ ಸಂತೋಷದಿಂದ ಅವರು ಆ ಕೈಗಳ ಮೇಲೆ ಬೆರಳುಗಳನ್ನು ಆಡಿಸಿ, ತಮ್ಮ ಮಗನನ್ನೇ ಅಪ್ಪಿಕೊಳ್ಳುತ್ತಿದ್ದೇವೆ ಎಂಬಂತೆ ಮೋನಿಕಾಳನ್ನು ಅಪ್ಪಿಕೊಂಡರು. ತಮಿಳು ಭಾಷೆಯ ಆ ತಂದೆತಾಯಿಗಳ ಪ್ರೀತಿ ಕಂಡು ಮರಾಠಿ ಭಾಷಿಕ ಮೋನಿಕಾ ಮಾತು ಬಾರದೆ ಮೂಕಳಾಗಿ ಕಣ್ಣೀರು ಮಿಡಿದಳು!

ʻನನ್ನ ಮಗನಿಗೆ ಕ್ರಿಕೆಟ್ ಅಚ್ಚುಮೆಚ್ಚಿನ ಆಟ. ಟಿವಿ ಸೀರಿಯಲ್‌ಗಳಲ್ಲೂ ನಟಿಸುತ್ತಿದ್ದ. ತನ್ನದೇ ಒಂದು ಐಟಿ ಫಾರಂನ್ನು ನಡೆಸುತ್ತಿದ್ದ. ಅಷ್ಟರಲ್ಲಿ ಹೀಗಾಯಿತು…ʼ ಎಂದು ಕಲೈಸೆಲ್ಲಾ ದುಃಖ ತಡೆಯದಾದಾಗ ಮೋನಿಕಾ, ಆಸೆಲಾನ್‌ನ ಕೈಗಳಿಂದ ಅವರಿಗೆ ಕುಡಿಯಲು ನೀರು ಕೊಟ್ಟು, ಉಪಚರಿಸಿ ಸಂತೈಸಿದಳು.

-ಪಂಜು ಗಂಗೊಳ್ಳಿ

× Chat with us