ಭ್ರಷ್ಟನಿಗೆ ಹಾಕಿದ್ದ ಬಲೆ ಸಡಿಲಾಯಿತೇ?- ೨; ನಿನ್ನೆ ಮೊನ್ನೆ ನಮ್ಮ ಜನ

ಲಂಚ ಪಡೆಯದೆ ಗ್ರಾಮಲೆಕ್ಕಿಗ ಕಚೇರಿಯಿಂದ ಹೊರಟುಬಿಟ್ಟ!
ಆ ಗ್ರಾಮಲೆಕ್ಕಿಗನ ಕಚೇರಿ ಇದ್ದದ್ದು ಕುಣಿಗಲ್ ಕೆರೆ ಪಕ್ಕದಲ್ಲಿರುವ ಕೊತ್ತಗೆರೆ ಎಂಬ ಹಳ್ಳಿಯಲ್ಲಿ. ತುಮಕೂರು ಮುಖ್ಯ ರಸ್ತೆಯಲ್ಲೇ ಇದ್ದ ಕಚೇರಿ. ಹಳ್ಳಿಗೆ ಅನತಿ ದೂರದಲ್ಲಿ ಜೀಪ್ ನಿಲ್ಲಿಸಿ ಟ್ರ್ಯಾಪ್ ಪಾರ್ಟಿಯವರೆಲ್ಲರೂ ಬಿಡಿ ಬಿಡಿಯಾಗಿ ನಡೆದು ಕಚೇರಿ ಸಮೀಪಿಸಿದೆವು. ನಿಗದಿ ಮಾಡಿಕೊಂಡಿದ್ದ ಆಯಕಟ್ಟಿನ ಜಾಗಗಳಲ್ಲಿ ನಿಂತೆವು. ಪರಸ್ಪರ ನಾವು ಒಬ್ಬರಿಗೊಬ್ಬರು ಕಾಣುತ್ತಿದ್ದುದರಿಂದ, ಶೇಖರ ಸಿಗ್ನಲ್ ಕೊಟ್ಟ ತಕ್ಷಣ ಕಚೇರಿಗೆ ನುಗ್ಗಿ ಲಂಚಕೋರನನ್ನು ಅನಾಮತ್ತಾಗಿ ಹಿಡಿಯಬೇಕು – ಇದು ಪ್ಲ್ಯಾನ್.

ಇದರಂತೆ, ಶೇಖರ ಮತ್ತು ನೆರಳು ಸಾಕ್ಷಿ ಇಬ್ಬರೂ ಲೆಕ್ಕಿಗನ ಕಚೇರಿಗೆ ಹೋಗುತ್ತಾರೆ. ಅಲ್ಲಿ ಲೆಕ್ಕಿಗ ಲಂಚ ಸ್ವೀಕರಿಸಿದ ನಂತರ, ಇಬ್ಬರೂ ಹೊರಬಂದು ನಿಗದಿತ ಸಿಗ್ನಲ್ ನೀಡುತ್ತಾರೆ. ಆಗ ನಾವು  ಕಚೇರಿಯೊಳಕ್ಕೆ ನುಗ್ಗುವುದು ಎಂದಾಗಿತ್ತು. ಕಚೇರಿಯಿಂದ ಹೊರಬಂದೊಡನೆ ತನ್ನ ತಲೆಗೂದಲನ್ನು ಹಿಂದಕ್ಕೆ ಬಾಚಿಕೊಳ್ಳುವಂತೆ ಶೇಖರನಿಗೆ ಹೇಳಿದ್ದೆವು. ಹೊರಗಡೆ ಕಾಯುತ್ತಿರುವ ನಮಗೆ ಅದೇ ಸಿಗ್ನಲ್. ಇಬ್ಬರಲ್ಲೊಬ್ಬರು ತಲೆ ಬಾಚಿಕೊಂಡರೆ ಲಂಚ ಕೊಟ್ಟಾಗಿದೆ ಎಂದರ್ಥ.

ಕಚೇರಿಯ ಹೊರಗಡೆ ಮಧ್ಯಾಹ್ನದ ರಣರಣ ಬಿಸಿಲು. ಯಾರದಾದರೂ ಮನೆಪಕ್ಕದ ನೆರಳಲ್ಲಿ ನಿಲ್ಲೋಣವೆಂದರೆ ಜನ  ಗಮನಿಸುತ್ತಾರೆ. ಮೊದಲೇ ಚಿಕ್ಕ ಹಳ್ಳಿ. ತಕ್ಷಣ ಅನುಮಾನ ಬರುತ್ತದೆ.

ಅರ್ಧಗಂಟೆ ಕಳೆಯಿತು. ಕಚೇರಿಯೊಳಕ್ಕೆ ಹೋದವರ ಪತ್ತೆಯೇ ಇಲ್ಲ. ಹಳ್ಳಿಗನಂತೆ ಟವಲ್ ತಲೆಗೆ ಸುತ್ತಿಕೊಂಡು ಚಡ್ಡಿಯಲ್ಲಿದ್ದ ಜಗದೀಶ್  ಕಚೇರಿಗೆ ಹತ್ತಿರದಲ್ಲಿದ್ದರು. ಅವರಿಗೆ ಕಾಣುವಂತೆ ದೂರದಲ್ಲಿ ನಾನಿದ್ದೆ.
“ಏನಾಯ್ತು?” ಎಂಬಂತೆ ಸಂಜ್ಞೆ ಮಾಡಿದೆ. ಏನೂ ಆಗಿಲ್ಲ ಎಂಬ ಮರು ಸಂಜ್ಞೆ.

ಕಚೇರಿಯೊಳಗಿಂದ ಇದ್ದಕ್ಕಿದ್ದಂತೆ ಹೊರಬಂದ ಲೆಕ್ಕಿಗ, ಬೈಕನ್ನು ಬಡಬಡ ಸ್ಟಾರ್ಟ್ ಮಾಡಿ ಕುಣಿಗಲ್ ಕಡೆಗೆ ಭರ್ರನೆ ಹೊರಟೇ ಹೋದ.
ನಮ್ಮ ಮಿಷನ್ ವಿಫಲವಾಯ್ತೆಂದು ಎದೆ ಧಸಕ್ಕೆಂದಿತು. ಐಜಿಪಿಯವರು ಈ ಟ್ರ್ಯಾಪ್ ಫೇಲ್ ಆಗದಂತೆ ಎಚ್ಚರಿಕೆಯಿಂದ ಮಾಡಿ ಎಂದು ಹೇಳಿ ಕಳಿಸಿದ್ದರು. ಲೆಕ್ಕಿಗ ಲಂಚ ತಗೊಂಡು ಪರಾರಿಯಾಗಿದ್ದರೆ ಅವನನ್ನು ಹಿಡಿಯುವುದೆಂತು? ಅದೇ ನಂಬರಿನ ಲಂಚದ ನೋಟುಗಳನ್ನು ರಿಕವರಿ ಮಾಡುವುದೆಂತು? ಅದೇ ನಂಬರಿನ ನೋಟು ಇನ್ನೆಲ್ಲಾದರೂ ಸಿಗಲು ಸಾಧ್ಯವೇ? ನೋಟು ಸಿಗಲಿಲ್ಲವೆಂದರೆ ಕೇಸೇ ಇಲ್ಲ! ಅಪರಾಧಿಯೂ

ಬಚಾವ್! ಅವನನ್ನು ನಾವೇ ಬಿಟ್ಟು ಕಳಿಸಿದಂತೆ ಆಗುತ್ತದೆ. ಇನ್ನು ನಾನು ಸಾಹೇಬರಿಗೆ ಮುಖ ತೋರಲಾದೀತೆ?
ಶೇಖರ ಮತ್ತು ನೆರಳು ಸಾಕ್ಷಿದಾರ ಇಬ್ಬರೂ  ಕಚೇರಿಯಿಂದ ಹೊರಬರುವುದು ಕಾಣಿಸಿತು. ಲೆಕ್ಕಿಗ ಹೋಗಿ ಬಿಟ್ಟಿದ್ದಾನೆಂದು ತಕ್ಷಣ ಅವರನ್ನು ಸಮೀಪಿಸುವಂತೆಯೂ ಇಲ್ಲ. ನಡೆದಿರುವ ಸಂಗತಿ ಬೇರೆಯದೆ ರೀತಿ ಆಗಿಬಿಟ್ಟಿದ್ದರೆ ?
ಟ್ರ್ಯಾಪ್ ಪಾರ್ಟಿಗೆ ಜೀಪ್‌ನತ್ತ ಹೋಗುವಂತೆ ಸನ್ನೆ ಮಾಡಿ ಶೇಖರನಿಗಾಗಿ ಕಾದು ಕುಳಿತೆ. ಈವರೆಗೆ ಮಾಡಿದ್ದ ನಮ್ಮ ಪ್ಲ್ಯಾನೆಲ್ಲ

ತಲೆಕೆಳಗಾಗಿತ್ತು. ಆಫೀಸರ್‌ಗಳಿಗೆ ಫೇಲ್ಯೂರ್ ಆಯಿತು ಎಂದು ಹೇಳಿದರೆ ಅವರೇನು ಬಯ್ಯೋದಿಲ್ಲ. ‘ಥಿou’ಡಿe ಚಿ bಟooಜಥಿ iಜioಣ’ ಎಂಬಂತೆ ಮುಖ ಮಾಡುತ್ತಾರೆ ಇಲ್ಲವೇ ‘ಆಯ್ತು ಬಿಡಿ’ ಎಂಬಂತೆ ಸುಮ್ಮನೆ ಹೂಂಕರಿಸುತ್ತಾರೆ. ಇದು ಬೈದದ್ದಕ್ಕಿಂತ ಹೆಚ್ಚು. ಅದು ‘ನಿಮ್ಮ ಕೈಯಲ್ಲಿ ಏನೂ ಕಿಸಿಯೋಲ್ಲ.  ಙou’ಡಿe gooಜ ಜಿoಡಿ ಟಿoಣhiಟಿg’ ಎಂಬ ಭರ್ಜರಿ ಸರ್ಟಿಫಿಕೇಟ್!
“ಕೂತ್ಕೋ. ನಿನ್ನ ರೆಕಾರ್ಡನ್ನೇ ಬರೆದು ಕೊಡ್ತೀನಿ ಅಂತ ಹೇಳಿದ್ದ. ಅಷ್ಟರಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಫೋನ್ ಬಂತು. ಅರ್ಜಂಟಾಗಿ ಹೊರಟು ಬಿಟ್ಟ ಸಾರ್. ಕುಣಿಗಲ್ ಬಸ್ಟಾಂಡ್ ಪಕ್ಕದ ಪರಿಮಳ ಹೋಟಲಿಗೆ ಎರಡು ಗಂಟೆಗೆ ಬರೋದಿಕ್ಕೆ ಹೇಳಿದ್ದಾನೆ”  ಶೇಖರ ಹೇಳಿದ.

“ನೀನು ದುಡ್ಡು ಕೊಡಲಿಲ್ಲವಾ?”
“ಕೊಡೋದಿಕ್ಕೆ ಸವುಡೇ ಸಿಕ್ಕಲಿಲ್ಲ. ಜನ ತುಂಬಾ ಇದ್ದರು. ಅವನೂ ಕೇಳಲಿಲ್ಲ. ತಂದಿದ್ದೇನೆ ಅಂದೆ. ಮಾಡಿಕೊಡ್ತೀನಿ ತಡಿ ಅಂದ. ಅಷ್ಟರಲ್ಲಿ ಫೋನ್ ಬಂತು”.
“ಸರಿ. ನಡೆದದ್ದು ಇಷ್ಟೇ ಆದರೆ ಯಾಕಿಷ್ಟು ತಡವಾಯ್ತು?”
“ಆಫೀಸಲ್ಲಿ ಬೇರೆಯವರು ತುಂಬಾ ಜನ ಇದ್ರಲ್ಲ ಸಾರ್”.
ಯಾಕೋ ಎಲ್ಲವೂ ಜಿishಥಿ ಜಿishಥಿ ಎಂಬಂತೆ ಕಂಡಿತು. ಎಲ್ಲೋ ನಮ್ಮ ಟ್ರ್ಯಾಪ್ ಸುದ್ದಿ ಲೀಕಾಗಿರಬೇಕು. ಇಲ್ಲದಿದ್ದರೆ ಅವನೇಕೆ ಅರ್ಜೆಂಟಾಗಿ ಓಡುತ್ತಿದ್ದ?

ಕಾದು ಹತಾಶರಾಗಿದ್ದ ಜಗದೀಶ್ ಅಂದರು. “ನೀವೇನೇ ಹೇಳಿ ಸಾರ್. ಈ ಛಿomಠಿಚಿssioಟಿಚಿಣe gಡಿouಟಿಜ ಮೇಲೆ ಕೆಲಸಕ್ಕೆ ಬಂದವರು ಭಾರಿ ಚಾಲೂ ಇರ್ತಾರೆ. ದುಡ್ಡು ಹೊಡೆಯೋದ್ರಲ್ಲೂ ಸೈ. ಚಾಲೂಕಾಗಿ ನುಣುಚಿಕೊಳ್ಳೋದ್ರಲ್ಲೂ ಸೈ. ಅವನಿಗೇನೋ ಟಿಪ್ಸ್ ಸಿಕ್ಕಿರಬೇಕು. ಎಸ್ಕೇಪ್ ಆಗಿದ್ದಾನೆ” ಎಂದರು.

“ಅದೆಂಗ್ರೀ ಹೇಳ್ತೀರಾ? ಎರಡು ಗಂಟೆಗೆ ಬರೋದಿಕ್ಕೆ ಹೇಳಿದ್ದಾನಲ್ಲಾ? ಇನ್ನೂ ಟೈಮಿದೆ. ಕಾಯೋಣ” ಎಂದು ಹೇಳಿ, ಎಲ್ಲರಿಗೂ ಜೀಪಿನತ್ತ ಬಿಡಿಬಿಡಿಯಾಗಿ ಹೋಗುವಂತೆ ಸನ್ನೆ ಮಾಡಿದೆ.
ಜಗದೀಶ್ ಮತ್ತೆ ಅಂದರು. “ಈ ಅನುಕಂಪದ ಆಧಾರದ ಮೇಲೆ ಯಾರ‍್ಯಾರು ಕೆಲಸ ತಗೊಂಡಿರ್ತಾರೋ ಅವರುಗಳು ಕಿತ್ಕಂಡು ತಿನ್ನೋ ಲಂಚಕೋರರಾಗಿ ಬಿಟ್ಟಿರ್ತಾರೆ ಸಾರ್. ಎಲ್ಲಿ ರಿಯಾಯಿತಿ ಇರುತ್ತೋ ಅಲ್ಲಿ ನಿಜಾಯಿತಿ ಇರೋದಿಲ್ಲ. ಲಂಚಾ ಮಾತ್ರ ಕಿತ್ಕೊಂಡು ತಿಂತಾರೆ. ಆದ್ರೆ ಕೆಲಸಾನೂ ಮಾಡಿ ಕೊಡೋದಿಲ್ಲ…”

ದುಡ್ಡು ತಗೊಳೊದಾಗಿದ್ರೆ ಆಫೀಸಲ್ಲೇ ತಗೋಬಹುದಾಗಿತ್ತು. ಹೋಟೆಲಿಗೆ ಬರೋದಿಕ್ಕೆ ಹೇಳುವ ಆವಶ್ಯಕತೆ ಇರಲಿಲ್ಲ. ಆ ರೆವಿನ್ಯೂ ಇನ್ಸ್‌ಪೆಕ್ಟರ್ ಪ್ರಳಯಾಂತಕ.  ಎಸ್ಕೇಪ್ ಆಗಿಬಿಡು ಅಂತ ಅವನೇ ಹೇಳಿಕೊಟ್ಟಿರಬೇಕು ಸಾರ್”. ಜಗದೀಶ್ ಉವಾಚ.
“ದುಡ್ಡು ಬಂದ ತಕ್ಷಣವೇ ಇಬ್ಬರೂ ಸೇರಿ ಹಂಚಿಕೊಳ್ಳೋದಿಕ್ಕೆ ಹೋಟೆಲ್ಗೆ ಬರಹೇಳಿರಬಹುದಲ್ವೇ?” ಎಂದೆ. ನನ್ನ ಮಾತಿನ ಬಗ್ಗೆ ನನಗೇ ನಂಬಿಕೆ ಇರಲಿಲ್ಲ.

ಡ್ರೈವರ್ ಬಾಲಕೃಷ್ಣ ಜೀಪನ್ನು ಮರೆಯಾದ ಸ್ಥಳದಲ್ಲಿ ನಿಲ್ಲಿಸಿದ್ದ. ಪಾರ್ಟಿಯ ಪ್ರತಿಯೊಬ್ಬರಿಗೂ ಇಂತಲ್ಲೇ ಜೀಪ್ ನಿಲ್ಲಿಸಿರುತ್ತೇನೆಂದು ಮೊದಲೇ ತಿಳಿವಳಿಕೆ ನೀಡಿದ್ದ. ಎಲ್ಲರೂ ಹತ್ತಿಕೊಂಡರು.
ಮುಂದಿನ ಕಾರ್ಯಾಚರಣೆ ಹೇಗಿರಬೇಕೆಂದು ಗೋವಿಂದರಾಜು, ದಿಲೀಪ್ ಸಿಂಗ್, ಶಿವಣ್ಣ ಪ್ಲ್ಯಾನ್ ಮಾಡಿದರು. ಅವರಿಗೆ ಕುಣಿಗಲ್ ಬಸ್ಟ್ಯಾಂಡ್ ಮತ್ತು ಪರಿಮಳ ಹೋಟೆಲಿನ  ಸುತ್ತಮುತ್ತಲಿನ ಜಾಗ ಚೆನ್ನಾಗಿ ಗೊತ್ತಿತ್ತು.
ಲಂಚ ತೆಗೆದುಕೊಳ್ಳುವ ಲೆಕ್ಕಿಗ, ಅದನ್ನು ಬೇರೆ ಯಾರ ಕೈಗೋ ಕೊಡಿಸಿದರೆ? ಅವನು ಫರ್ರಂತ ಓಡಿಹೋದರೆ? ಅಥವಾ ಆ  ಲೆಕ್ಕಿಗ ದುಡ್ಡನ್ನೇ ಮುಟ್ಟದೆ ಅದೆಲ್ಲೋ ಮೂಲೆಗೆ ಇಡು ಎಂದರೆ? ಡಸ್ಟ್ ಬಿನ್‌ಗೆ ಹಾಕು ಎಂದು ಸೂಚಿಸಿದರೆ?… ಹೀಗೆ ಅವನು ತಪ್ಪಿಸಿಕೊಳ್ಳಬಹುದಾದ ನಾನಾ ಸಾಧ್ಯತೆಗಳನ್ನು ಲೆಕ್ಕ ಹಾಕಿ ಪ್ರತಿಯೊಂದಕ್ಕೂ ಪ್ರತಿವ್ಯೂಹ ರಚಿಸಿದೆವು. ಆದರೂ ನಮಗೆ ಟ್ರ್ಯಾಪ್ ಯಶಸ್ವಿಯಾಗುವ ಬಗ್ಗೆ ಭರವಸೆ ಇರಲಿಲ್ಲ. ಲೆಕ್ಕಿಗನ ಬಾಸ್ ರೆವಿನ್ಯೂ ಇನ್ಸ್‌ಪೆಕ್ಟರ್ ಕೂಡ ಭಾರಿ ಖದೀಮ.

ಹಿಂದೆ ಎರಡು ಮೂರು ಬಾರಿ ತಪ್ಪಿಸಿಕೊಂಡಿದ್ದನಂತೆ. ಅವನದೇ ಡೈರೆಕ್ಷನ್ ಇರುತ್ತದೆ. ಅವನಿಗೂ ಈ ಲಂಚದಲ್ಲಿ ಪಾಲಿದೆ. ಇಬ್ಬರು ಖದೀಮ ಲಂಚಕೋರರು ಸೇರಿದರೆ ನಮ್ಮನ್ನು ಏಮಾರಿಸುವುದು ಕಷ್ಟವಲ್ಲ. ಬಹುಶಃ ನಮ್ಮ ಸುಳಿವು ತಿಳಿದು ಯಾರನ್ನಾದರೂ ಆ ಹೋಟೆಲ್ ಬಳಿ ವಾಚ್ ಮಾಡಲು ಈಗಾಗಲೇ ಹಾಕಿರಬಹುದು. ಲೋಕಾಯುಕ್ತ ಸಿಬ್ಬಂದಿಯ ಮುಖಗಳನ್ನು ಆತ ಮೊದಲೇ ನೋಡಿಕೊಂಡಿರುವ ಸಾಧ್ಯತೆಯೂ ಹೆಚ್ಚು. ನಾವುಗಳೂ ನಮ್ಮ ಪತ್ತೆ ಸಿಗದಂತೆ  ಹುಷಾರಾಗಿರಬೇಕು.  ಯಾವ ಕಾರಣಕ್ಕೂ  ಇವನು ತಪ್ಪಿಸಿಕೊಳ್ಳದಂತೆ ಹಿಡಿಯಲೇಬೇಕು. ಹಿಡಿಯಬಲ್ಲೆವಾ?
*
ಈ ಬಾರಿ ಸಾಕ್ಷಿದಾರರನ್ನೇ ಪರಿಮಳ ಹೋಟೆಲ್ ಸುತ್ತಮುತ್ತ ನಿಲ್ಲಿಸಿದೆವು. ಜಗದೀಶ್ ಮಾತ್ರ ಹಳ್ಳಿಗನ ದಿರಿಸಿನಲ್ಲಿ ಸಮೀಪದಲ್ಲಿದ್ದರು. ಲೆಕ್ಕಿಗ ಹೋಟೆಲಿಗೆ ಹೋದೊಡನೆ ರಿಂಗ್ ಮಾಡಲು ಹೇಳಿದ್ದೆವು.

ಮಧ್ಯಾಹ್ನ ಮೂರು ಗಂಟೆಯಾದರೂ ಲೆಕ್ಕಿಗ ಬರಲೇ ಇಲ್ಲ. ನಮ್ಮ ಆಸೆ ಕಮರಿತು. ಅದಾದ ಕೆಲವೇ ಹೊತ್ತಿನಲ್ಲಿ ಗ್ರಾಮಲೆಕ್ಕಿಗ ತನ್ನ ಬೈಕಿನಲ್ಲಿ ಮತ್ತೊಬ್ಬನೊಂದಿಗೆ  ಬಂದನೆಂಬ  ಮಾಹಿತಿ ಮೊಬೈಲ್‌ನಿಂದ  ತಿಳಿಯಿತು. ವ್ಹಾ! ಈವತ್ತು ಇಬ್ಬರು ಲಂಚಕೋರರೂ ಒಟ್ಟಿಗೆ ಸಿಕ್ಕಿ ಬೀಳುತ್ತಾರೆ! ದೂರವಿದ್ದವರೆಲ್ಲಾ ಸರಸರ ಹೋಟೆಲ್ ಸಮೀಪಿಸಿದೆವು.

ಹತ್ತಾರು ನಿಮಿಷ ಕಳೆಯಿತು. ಶೇಖರ ಹೋಟೆಲಿನಿಂದ ಹೊರಬಂದು ತಲೆ ಬಾಚಿಕೊಳ್ಳುವ ಮೂಲಕ ನಿಗದಿತ ಸಿಗ್ನಲ್ ಕೊಟ್ಟ. ಲಂಚ ಇಸ್ಕೊಂಡಿದ್ದಾನೆ! ನಾವೆಲ್ಲರೂ ಹೋಟೆಲ್‌ನೊಳಕ್ಕೆ ದೌಡಾಯಿಸಿದೆವು.
ಧಡಧಡ ನುಗ್ಗಿದ್ದೇ ಬಂತು. ಪಕೋಡ ತಿನ್ನುತ್ತಾ ಕುಳಿತಿದ್ದ ಲೆಕ್ಕಿಗ ಚಕ್ಕೆಂದು ತನ್ನ ಜೇಬಿಗೆ ಕೈಹಾಕಿ ಲಂಚದ ದುಡ್ಡನ್ನು ಎಸೆದವನೇ ಧಿಗ್ಗನೆದ್ದು ಓಡಲು ಶುರು ಮಾಡಿದ.

ಯುವಕನಾಗಿದ್ದ ಆತ ಬಲವಾದ ಆಳು. ಬಾಗಿಲಲ್ಲೇ ಇದ್ದ ದಿಲೀಪ್ ಸಿಂಗ್, ಡ್ರೈವರ್ ಬಾಲು, ಶಿವಣ್ಣ ಅನಾಮತ್ತಾಗಿ ಅವನ ಮೇಲೆರಗಿ ಹಿಡಿದುಕೊಂಡರು. ಕೊಸರಾಡುತ್ತಿದ್ದವನನ್ನು ಒಳಗೆಳೆದುಕೊಂಡು ಬಂದರು.
(ಮುಂದುವರಿಯುವುದು…)

ಜೆ.ಬಿ.ರಂಗಸ್ವಾಮಿ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ, ಮೈಸೂರು

× Chat with us