ಮುಂಬೈ: ಕನಿಕಾ ಅಹುಜಾ ಹಾಗೂ ರಿಚಾ ಘೋಷ್ ಅವರ ಉತ್ತಮ ಬ್ಯಾಟಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ನಲ್ಲಿ ಮೊದಲ ಜಯದ ಸವಿಯುಂಡಿತು.
ಸತತ ಐದು ಪಂದ್ಯಗಳಲ್ಲಿ ಸೋತಿದ್ದ ಸ್ಮೃತಿ ಮಂದಾನ ಬಳಗವು ಬುಧವಾರ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ 5 ವಿಕೆಟ್ಗಳಿಂದ ಯುಪಿ ವಾರಿಯರ್ಸ್ ವಿರುದ್ಧ ಗೆದ್ದಿತು.
ಟಾಸ್ ಗೆದ್ದ ಆರ್ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಯುಪಿ ತಂಡವು 19.3 ಓವರ್ಗಳಲ್ಲಿ 135 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆರ್ಸಿಬಿಯು 18 ಓವರ್ಗಳಲ್ಲಿ 5 ವಿಕೆಟ್ಗಳಿಗೆ 136 ರನ್ ಗಳಿಸಿತು. ಕನಿಕಾ ಅಹುಜಾ (46; 30ಎ, 4X8, 6X1) ಮತ್ತು ರಿಚಾ (ಔಟಾಗದೆ 31, 32ಎ, 4X3, 6X1) ಐದನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿ ತಂಡವನ್ನು ಸೋಲಿನ ಆತಂಕದಿಂದ ಪಾರು ಮಾಡಿದರು.
ಏಕೆಂದರೆ ಯುಪಿ ತಂಡದ ದೀಪ್ತಿ ಶರ್ಮಾ ಅವರ ಪರಿಣಾಮಕಾರಿ ಬೌಲಿಂಗ್ನಿಂದಾಗಿ ಬೆಂಗಳೂರು ತಂಡವು 60 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆರ್ಸಿಬಿ ಗೆಲುವಿಗೆ ಇನ್ನೂ 16 ರನ್ಗಳ ಅವಶ್ಯಕತೆ ಇದ್ದಾಗ ಕನಿಕಾ ಔಟಾದರು. ಆದರೆ ನಂತರ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ ರಿಚಾ ಒಂದು ಸಿಕ್ಸರ್ ಮತ್ತು ಬೌಂಡರಿ ಗಳಿಸಿ ತಂಡದ ಜಯ ಸುಲಭಗೊಳಿಸಿದರು. ಅವರಿಗೆ ಬೆಂಗ ಳೂರು ಹುಡುಗಿ ಶ್ರೇಯಾಂಕಾ ಪಾಟೀಲ (ಔಟಾಗದೆ 5) ಜೊತೆ ನೀಡಿದರು.
ಕೈಬಿಟ್ಟ ಕ್ಯಾಚ್: ಯುಪಿ ತಂಡದ ಬ್ಯಾಟಿಂಗ್ ಕೂಡ ಉತ್ತಮ ಆರಂಭ ಕಾಣಲಿಲ್ಲ. ಸೋಫಿ ಡಿವೈನ್ ಮತ್ತು ಆಶಾ ಶೋಭನಾ ಅವರ ಬೌಲಿಂಗ್ ಮುಂದೆ ಯುಪಿ ತಂಡವು 31 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.
ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗ್ರೇಸ್ ಹ್ಯಾರಿಸ್ (46; 32ಎ, 4X5, 6X2) ಹಾಗೂ ದೀಪ್ತಿ (22; 19ಎ, 4X4) 6ನೇ ವಿಕೆಟ್ಗೆ 69 ರನ್ ಸೇರಿಸಿದರು.
ಆಶಾ ಹಾಕಿದ 9ನೇ ಓವರ್ ನಲ್ಲಿ ದೀಪ್ತಿ ಬ್ಯಾಟ್ ಅಂಚಿಗೆ ಸವರಿದ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ಸ್ಲಿಪ್ ಫೀಲ್ಡರ್ ಹೀಥರ್ ನೈಟ್ ವಿಫಲರಾದರು. ಇದರ ಲಾಭ ಪಡೆಯುವಲ್ಲಿ ದೀಪ್ತಿ ಯಶಸ್ವಿಯಾದರು. 115.7ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದರು. 16ನೇ ಓವರ್ನಲ್ಲಿ ಆರ್ಸಿಬಿಯ ಎಲಿಸ್ ಪೆರಿ ಇವರಿಬ್ಬರ ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರು
ಯುಪಿ ವಾರಿಯರ್ಸ್: 19.3 ಓವರ್ಗಳಲ್ಲಿ 135 (ಕಿರಣ್ ನವಗಿರೆ 22, ಗ್ರೇಸ್ ಹ್ಯಾರಿಸ್ 46, ದೀಪ್ತಿ ಶರ್ಮಾ 22, ಸೋಫಿ ಡಿವೈನ್ 23ಕ್ಕೆ2, ಆಶಾ ಶೋಭನಾ 27ಕ್ಕೆ2, ಎಲಿಸ್ ಪೆರಿ 16ಕ್ಕೆ3)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 18 ಓವರ್ಗಳಲ್ಲಿ 5 ವಿಕೆಟ್ಗಳಿಗೆ 136 (ಸೋಫಿ ಡಿವೈನ್ 14, ಹೀದರ್ ನೈಟ್ 24, ಕನಿಕಾ ಅಹುಜಾ 46, ರಿಚಾ ಘೋಷ್ ಔಟಾಗದೆ 31, ಶ್ರೇಯಾಂಕಾ ಪಾಟೀಲ ಔಟಾಗದೆ 5; ಗ್ರೇಸ್ ಹ್ಯಾರಿಸ್ 28ಕ್ಕೆ 1, ದೀಪ್ತಿ ಶರ್ಮಾ 26ಕ್ಕೆ 2, ಸೋಫಿ ಎಕ್ಲೆಸ್ಟೋನ್ 20ಕ್ಕೆ 1,).
ಫಲಿತಾಂಶ: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 5 ವಿಕೆಟ್ ಜಯ