ಪರಿಹಾರ ಸಾಮಗ್ರಿಯೊಂದಿಗೆ ಟರ್ಕಿ ತಲುಪಿದ ಭಾರತದ ಎನ್ಡಿಆರ್ಎಫ್ ತಂಡ
ಹೊಸದಿಲ್ಲಿ: ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 5 ಸಾವಿರ ದಾಟಿದ್ದು ಬದುಕುಳಿದವರಿಗಾಗಿ ಶೋಧ ನಡೆಯುತ್ತಿರುವಾಗಲೇ ಸಾವಿರಾರು ಕಟ್ಟಡಗಳು ಧರೆಗುರುಳಿವೆ.
ಈ ಮಧ್ಯೆ, ಭಾರತವು ಭೂಕಂಪ-ಪೀಡಿತ ಟರ್ಕಿಯ ನೆರವಿಗೆ ಮುಂದಾಗಿದ್ದು, ಪರಿಹಾರ ಸಾಮಗ್ರಿಯ ಮೊದಲ ವಿಮಾನ ಟರ್ಕಿಯನ್ನು ಪ್ರವೇಶಿಸಿದೆ. ಪ್ರಧಾನಮಂತ್ರಿ ಕಾರ್ಯಾಲಯದಿಂದ ಘೋಷಣೆಯಾದ ಕೆಲವೇ ಗಂಟೆಗಳ ನಂತರ, ಭಾರತವು ಭಾರತೀಯ ವಾಯುಪಡೆಯ ವಿಮಾನದಲ್ಲಿ ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಬ್ಯಾಚ್ ಅನ್ನು ಟರ್ಕಿಗೆ ರವಾನಿಸಿದೆ.
ಈ ಮೊದಲ ಬ್ಯಾಚ್ನಲ್ಲಿ ಪರಿಣಿತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಪುರುಷ ಮತ್ತು ಮಹಿಳಾ ಸಿಬ್ಬಂದಿ, ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳ ಒಂದು ಶ್ರೇಣಿ, ಸುಧಾರಿತ ಡ್ರಿಲ್ಲಿಂಗ್ ಉಪಕರಣಗಳು ಮತ್ತು ಸಹಾಯದ ಪ್ರಯತ್ನಗಳಿಗೆ ಅಗತ್ಯವಿರುವ ಇತರ ನಿರ್ಣಾಯಕ ಸಾಧನಗಳನ್ನು ಒಳಗೊಂಡಂತೆ ಶೋಧ ಮತ್ತು ಪಾರುಗಾಣಿಕಾ ತಂಡವನ್ನು ಈ ಸಾಗಣೆಯು ಒಳಗೊಂಡಿದೆ.
ಭಾರತಕ್ಕೆ ಧನ್ಯವಾದ ಹೇಳಿದ ಟರ್ಕಿ
24 ಗಂಟೆಗಳಲ್ಲಿ ಟರ್ಕಿಯಲ್ಲಿ ಮೂರು ವಿನಾಶಕಾರಿ ಭೂಕಂಪಗಳು ಸಂಭವಿಸಿದ ನಂತರ ದೇಶಕ್ಕೆ ನೆರವು ಒದಗಿಸಿದ ಉದಾರತೆಗಾಗಿ ಭಾರತವನ್ನು “ದೋಸ್ತ್” ಎಂದು ಕರೆಯುತ್ತಾ, ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಮತ್ತು “ಅಗತ್ಯವಿರುವ ಸ್ನೇಹಿತ ನಿಜವಾಗಿಯೂ ಸ್ನೇಹಿತ” (Friend in need is a friend indeed) ಎಂದು ಹೊಗಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿದ ಫಿರಟ್ ಸುನೆಲ್, “ದೋಸ್ತ್” ಎಂಬುದು ಟರ್ಕಿಶ್ ಮತ್ತು ಹಿಂದಿಯಲ್ಲಿ ಸಾಮಾನ್ಯ ಪದವಾಗಿದೆ. ನಮ್ಮಲ್ಲಿ ಟರ್ಕಿಶ್ ಗಾದೆಯಿದೆ: “ದೋಸ್ತ್ ಕರ ಗುಂಡೆ ಬೆಳ್ಳಿ ಓಲುರ್” (ಅಗತ್ಯವಿರುವ ಸ್ನೇಹಿತ ನಿಜವಾಗಿಯೂ ಸ್ನೇಹಿತ). ಭಾರತಕ್ಕೆ ತುಂಬಾ ಧನ್ಯವಾದಗಳು.” ಎಂದು ಪೋಸ್ಟ್ ಮಾಡಿದ್ದಾರೆ.
ಟರ್ಕಿಯ ಸ್ಥಳೀಯ ಕಾಲಮಾನ ಪ್ರಕಾರ ಸೋಮವಾರ ನಸುಕಿನ ಜಾವ 4 ಗಂಟೆಯ ಸುಮಾರಿಗೆ ಮೊದಲ ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ಇನ್ನೂ ಸವಿ ನಿದ್ರಿಸುತ್ತಿದ್ದರಿಂದ ಸಾವುನೋವಿನ ಸಂಖ್ಯೆ ಹೆಚ್ಚಾಗಿದೆ
ನೂರಾರು ನಿವಾಸಿಗಳಿಂದ ತುಂಬಿರುವ 5,606 ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ ಅನೇಕ ಧರೆಗುರುಳಿದ್ದರೆ ಇನ್ನು ಕೆಲವು ಶಿಥಿಲಗೊಂಡಿವೆ. ಸಿರಿಯಾದಲ್ಲಿ ಡಜನ್ ಗಟ್ಟಲೆ ಕುಸಿತಗಳನ್ನು ಮತ್ತು ಅಲೆಪ್ಪೊದಲ್ಲಿನ ಪುರಾತತ್ತ್ವ ಶಾಸ್ತ್ರದ ಸ್ಥಳಗಳಿಗೆ ಹಾನಿಯನ್ನು ಉಂಟುಮಾಡಿವೆ.
. ಟರ್ಕಿ ವಿಶ್ವದ ಅತ್ಯಂತ ಸಕ್ರಿಯ ಭೂಕಂಪ ವಲಯಗಳಲ್ಲಿ ಒಂದಾಗಿದೆ. ಅಧಿಕ ಪ್ರಬಲವಾದ ಭೂಕಂಪ ಈ ಹಿಂದೆ 1939 ರಲ್ಲಿ ಸಂಭವಿಸಿತ್ತು. 7.8 ತೀವ್ರತೆಯ ಈ ಭೂಕಂಪ ಪೂರ್ವ ಎರ್ಜಿನ್ಕಾನ್ ಪ್ರಾಂತ್ಯದಲ್ಲಿ 33,000 ಜನರನ್ನು ಬಲಿತೆಗೆದುಕೊಂಡಿತ್ತು. ಬಳಿಕ 1999 ರಲ್ಲಿ ಟರ್ಕಿಯ ಡಝ್ಸ್ ಪ್ರದೇಶ 7.4 ತೀವ್ರತೆಯಲ್ಲಿ ಕಂಪಿಸಿತು. ಈ ವೇಳೆ 17,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.