ನವದೆಹಲಿ : ಭಾರತದ 16 ನೇ ರಾಷ್ಟ್ರಪತಿ ಚುನಾವಣೆಗೆ ಇಂದು ಎನ್ಡಿಅ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಸತ್ ಭವನದಲ್ಲಿ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಾಯಿತು.
ಒಟ್ಟು ನಾಲ್ಕು ಸೆಟ್ಗಳ ನಾಮಪತ್ರವನ್ನ ಬಿಜೆಪಿ ಸಿದ್ದಪಡಿಸಿತ್ತು. ನಾಮಪತ್ರದಲ್ಲಿ ಪ್ರಧಾನಿ ನರೇಂದ್ರ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸಾಕ್ಷಿಗಳಾಗಿ ಸಹಿ ಹಾಕಿದ್ದಾರೆ.
ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ಶಿವರಾಜ್ಸಿಂಗ್ ಚವ್ಹಾಣ್, ಮನೋಹರ್ಲಾಲ್ ಕಟ್ಟರ್, ಬಸವರಾಜ ಬೊಮ್ಮಾಯಿ, ಭೂಪೇಂದ್ರ ಪಟೇಲ್, ಹಿಮಂತ್ ಬಿಶ್ವಾಸ್ ಶರ್ಮಾ, ಪುಷ್ಕರ್ ಸಿಂಗ್ಧಾಮಿನಿ, ಪ್ರಮೋದ್ ಸಾವಂತ್, ಎನ್.ಬಿರೇನ್ ಸಿಂಗ್ ಸೇರಿ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಎನ್ಡಿಎ ಕೂಟಗಳ ಜೊತೆಯಲ್ಲಿ ವೈಎಸ್ಆರ್ ಕಾಂಗ್ರೆಸ್ನ ವಿ.ವಿಜಯಸಾಯಿ ರೆಡ್ಡಿ, ಬಿಜೆಪಿ ಮುಖಂಡ ಸಸ್ಮಿತ್ ಪಾತ್ರಕೂಡ ಮುರ್ಮ ಅವರಿಗೆ ಬೆಂಬಲ ನೀಡಿದರು. ಎಐಎಡಿಎಂಕೆ ಮುಖಂಡ ಒ.ಪನ್ನಿರ್ಸೆಲ್ವಂ ಮತ್ತು ತಂಬಿದೊರೈ, ಜೆಡಿಯು ಮುಖಂಡರಾದ ರಾಜೀವ್ ರಂಜನ್ ಅವರು ದೆಹಲಿಗೆ ಬಂದು ತಮ್ಮ ಪಕ್ಷದ ಪರವಾಗಿ ಮುರ್ಮ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಮುರ್ಮ ನಾಮಪತ್ರದಲ್ಲಿ 50 ಮಂದಿ ಸೂಚಕರು ಸಹಿ ಮಾಡಿದ್ದು, 50 ಮಂದಿ ಅನೋಮದನೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಮುರ್ಮ ಅವರು ಕಾಂಗ್ರೆಸ್ನ ನಾಯಕಿ ಸೋನಿಯಾಗಾಂ, ಎನ್ಸಿಪಿ ನಾಯಕ ಶರದ್ ಪವಾರ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೇರಿದಂತೆ ಅನೇಕರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
ಜುಲೈ 18ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಬುಡಕಟ್ಟು ಸಮುದಾಯದ ದ್ರೌಪತಿ ಆಯ್ಕೆಯಾದರೆ ಅತಿ ಕಿರಿಯ ವಯಸ್ಸಿನ ರಾಷ್ಟ್ರಾಧ್ಯಕ್ಷರೆಂಬ ಕೀರ್ತಿಗೆ ಪಾತ್ರವಾಗಲಿದ್ದಾರೆ. ಪ್ರತಿಪಕ್ಷಗಳು ಎನ್ಡಿಎ ಅಭ್ಯರ್ಥಿಗೆ ಎದುರಾಗಿ ಕೇಂದ್ರದ ಮಾಜಿ ಸಚಿವ ಯಶವಂತ ಶಿನ್ಹಾರನ್ನು ಕಣಕ್ಕಿಳಿಸಿವೆ.