ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾದ ನೆಟಿಜನ್ಗಳು ಪೂಜ್ಯಪೂರ್ವಕವಾಗಿ ‘ಮೋದಿ ಲಾವೋಕ್ಸಿಯನ್’ ಅಂದರೆ ‘ಮೋದಿ ದಿ ಅಮರ’ ಎಂದು ಕರೆಯುತ್ತಾರೆ.
ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ಸಂಬಂಧ ಹಳಸಿರುವ ನಡುವೆಯೇ ಚೀನಾ ನೆಟ್ಟಿಗರ ಈ ಪ್ರಶಂಸೆ ವಿಶ್ವದ ಹುಬ್ಬೇರುವಂತೆ ಮಾಡಿದೆ. ಅಮೆರಿಕದ ರಕ್ಷಣಾ ನಿಯತಕಾಲಿಕೆ ದ ಡಿಪ್ಲೋಮ್ಯಾಟ್ ನಲ್ಲಿ ಚೀನಾದಲ್ಲಿ ಭಾರತವನ್ನು ಹೇಗೆ ನೋಡಲಾಗುತ್ತದೆ? ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತ ಮು ಚುನ್ಶನ್ ಅವರು ಬರೆದ ಲೇಖನ ಪ್ರಕಟವಾಗಿದ್ದು, ಅದರಲ್ಲಿ ಈ ಮಾಹಿತಿಯಿದೆ.
ಚೀನಾದಲ್ಲಿ ಟ್ವೀಟರ್ ರೀತಿಯಲ್ಲೇ ಸಿನಾ ವೈಬೋ ಎಂಬ ಸಾಮಾಜಿಕ ಮಾಧ್ಯಮ ಇದ್ದು 58 ಕೋಟಿ ಬಳಕೆದಾರರನ್ನು ಹೊಂದಿದೆ. ಇದರಲ್ಲಿ ಮೋದಿ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮೋದಿ ನೇತೃತ್ವದಲ್ಲಿ ಭಾರತ ವಿಶ್ವದ ಪ್ರಮುಖ ದೇಶಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವ ಶಕ್ತಿ ಹೊಂದಿದೆ ಎಂದು ಭಾವಿಸಿದ್ದಾರೆ ಎಂದು ಬರೆಯಲಾಗಿದೆ.
ಚೀನೀ ಸೋಷಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿಗೆ ಅಸಾಮಾನ್ಯ ಅಡ್ಡ ಹೆಸರು ಇದೆ. ಮೋದಿ ಲಾವೋಕ್ಸಿಯಾನ್. ಲಾವೋಕ್ಸಿಯಾನ್ ಎಂಬುದು ವಿಲಕ್ಷಣ ಸಾಮರ್ಥ್ಯ ಹೊಂದಿ ಅಮರರಾಗುವ ಹಿರಿಯರನ್ನು ಉಲ್ಲೇಖಿಸುವ ಪದ. ಮೋದಿ ಅವರು ಇತರ ನಾಯಕರಿಗಿಂತ ಭಿನ್ನ. ಇನ್ನೂ ಅದ್ಭುತ ಎಂದು ಚೀನಾ ನೆಟ್ಟಿಗರು ಭಾವಿಸುತ್ತಾರೆ ಎಂಬುದನ್ನು ಮೋದಿ ಲಾವೋಕ್ಸಿಯಾನ್ ಎಂಬ ಪದವೇ ಸೂಚಿಸುತ್ತದೆ ಎಂದು ಬಣ್ಣಿಸಲಾಗಿದೆ.
ಮೋದಿ ಕೂಡ 2015ರಿಂದಲೇ ಚೀನಾದ ಸಿನಾ ವೈಬೋ (Sina Weibo) ಸೋಷಿಯಲ್ ಮೀಡಿಯಾ ಖಾತೆದಾರರಾಗಿದ್ದರು. 2.44 ಲಕ್ಷ ಹಿಂಬಾಲಕರ ಹೊಂದಿದ್ದರು. ಜುಲೈ 2020 ರಲ್ಲಿ ವೈಬೊವನ್ನು ತೊರೆದರು.