ಪ್ರವಾಸಕ್ಕೆ ಹೋಗಿ ಹಿಮಪಾತಕ್ಕೆ ಬಲಿಯಾದ 16ಕ್ಕೂ ಹೆಚ್ಚು ಮಂದಿ; ಹಿಮದಡಿ ಸಿಲುಕಿದ ಕಾರಿನಲ್ಲಿ ಶವಗಳು, ಸೇನೆಯಿಂದ ರಕ್ಷಣಾ ಕಾರ್ಯಾಚರಣೆ

ಪಾಕಿಸ್ತಾನ: ಪಾಕಿಸ್ತಾನದ ಗುಡ್ಡಗಾಡು ಪ್ರವಾಸಿ ಸ್ಥಳ ಮುರ್ರೆಯಲ್ಲಿ ವಿಪರೀತ ಹಿಮಪಾತವಾಗಿ  ಪ್ರವಾಸಿಗರ ವಾಹನಗಳೆಲ್ಲ ಹಿಮದಡಿ ಸಿಲುಕಿದ ಪರಿಣಾಮ ಸುಮಾರು 16 ಜನರು ಅವರ ವಾಹನದೊಳಗೆ ಇದ್ದಂತೆಯೇ ಮೃತಪಟ್ಟಿದ್ದಾರೆ. ಸದ್ಯ ಅಲ್ಲಿ ಹಿಮದಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲು ಪಾಕಿಸ್ತಾನ ಸರ್ಕಾರ ಸೇನಾ ಸಿಬ್ಬಂದಿ ಮತ್ತು ಇತರ ನಾಗರಿಕ ರಕ್ಷಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಿದೆ. ಹಿಮಪಾತದಿಂದ ಮುರ್ರೆಗೆ ಹೋಗುವ ಎಲ್ಲ ರಸ್ತೆಗಳೂ ಬ್ಲಾಕ್​ ಆಗಿದ್ದು, ನಗರದಲ್ಲೀಗ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಸಿಲುಕಿದ್ದಾರೆ. ಅವರಿಗೆ ಯಾವುದೇ ಮಾರ್ಗದ ಮೂಲಕವೂ ಮುರ್ರೆಯಿಂದ ಹೊರಬೀಳಲು ಸಾಧ್ಯವಾಗುತ್ತಿಲ್ಲ. ಸದ್ಯ ಮುರ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ರಾವಲ್ಪಿಂಡಿ ಜಿಲ್ಲೆಯ ಪಿರ್​ ಪಂಜಾಲ್​ ವಲಯದ ಗಲ್ಯಾಟ್ ಪ್ರದೇಶದಲ್ಲಿ ಇರುವ ಈ ಮುರ್ರೆ ಎಂಬುದು ಹಿಮತುಂಬಿದ ಗುಡ್ಡಪ್ರದೇಶ. ಇದೊಂದು ಪ್ರವಾಸಿ ಸ್ಥಳ. ಕಳೆದ ಕೆಲವು ದಿನಗಳಿಂದ ಸುಮಾರು 10 ಸಾವಿರದಷ್ಟು ಪ್ರವಾಸಿಗರು ಅಲ್ಲಿಗೆ ಹೋಗಿದ್ದಾರೆ. ಆದರೆ ವಾಪಸ್ ಬರಲು ಸಾಧ್ಯವಾಗದ ಕಾರಣ ಅವರಷ್ಟೂ ಜನ ಅಲ್ಲಿಯೇ ಇರುವಂತಾಗಿದೆ. ಹೀಗಾಗಿ ಇನ್ನಷ್ಟು ಅವ್ಯವಸ್ಥೆ ಉಂಟಾಗಿದೆ. ಕಳೆದ 15-120 ವರ್ಷಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಇಲ್ಲಿ ನೋಡಿರಲಿಲ್ಲ ಎಂದು ಪಾಕಿಸ್ತಾನ ಆಂತರಿಕ ವ್ಯವಹಾರಗಳ ಸಚಿವ ಶೇಖ್​ ರಶೀದ್​ ತಿಳಿಸಿದ್ದಾರೆ. ಹಾಗೇ, ಹಿಮದಡಿ ಸಿಲುಕಿರುವವರನ್ನು ರಕ್ಷಿಸಲು ಪಾಕಿಸ್ತಾನ ಕೇಂದ್ರ ಸರ್ಕಾರ ಮತ್ತು ರಾವಲ್ಪಿಂಡಿ ಸರ್ಕಾರ ಜತೆಯಾಗಿ ಶ್ರಮಿಸುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.

ಸುಮಾರು 1000 ವಾಹನಗಳು ಹಿಮದಡಿ ಸಿಲುಕಿವೆ. 16-19ಜನರು ಮೃತಪಟ್ಟಿರಬಹುದು. ಇನ್ನು ಅಲ್ಲಿ ಸಿಲುಕಿರುವ ಜನರಿಗೆ ಸ್ಥಳೀಯರು ಕಂಬಳಿ, ಆಹಾರ ನೀಡುತ್ತಿದ್ದಾರೆ.  ಇಂದು ಸಂಜೆಯೊಳಗೆ ವಾಹನಗಳನ್ನು ತೆರವುಗೊಳಿಸಲಾಗುವುದು. ಆದರೆ ನಾಳೆ ಸಂಜೆ 9ಗಂಟೆಯವರೆಗೂ ಮುರ್ರೆಯ ಎಲ್ಲ ರೋಡ್​ಗಳು ಬಂದ್​ ಇರುತ್ತವೆ. ಸದ್ಯ ನಾವು ಮುರ್ರೆಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಿದ್ದೇವೆ. ಯಾಕೆಂದರೆ ಇಲ್ಲಿಗೆ ಆಗಮಿಸಲು ಇದು ಸೂಕ್ತ ಸಮಯವಲ್ಲ ಎಂದೂ ಶೇಖ್​ ರಶೀದ್ ಹೇಳಿದ್ದಾರೆ.

× Chat with us