ಮುಂಬೈ: ಆಲ್ರೌಂಡ್ ಆಟವಾಡಿದ ರವೀಂದ್ರ ಜಡೇಜ ಹಾಗೂ ಬಹುದಿನಗಳ ನಂತರ ಲಯ ಕಂಡುಕೊಂಡ ಕೆ.ಎಲ್. ರಾಹುಲ್ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಎದುರು ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯದ ಕಾಣಿಕೆ ನೀಡಿದರು.
189 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡವು ಐದು ವಿಕೆಟ್ಗಳ ಜಯಸಾಧಿಸಲು ರಾಹುಲ್ (ಅಜೇಯ 75; 91ಎ, 4X7, 6X1) ಹಾಗೂ ಜಡೇಜ (45; 69ಎ, 4X5) ಮುರಿಯದ ಆರನೇ ವಿಕೆಟ್ಗೆ ಸೇರಿಸಿದ 108 ರನ್ಗಳ ಜೊತೆಯಾಟ ಕಾರಣವಾಯಿತು. ಭಾರತ ತಂಡವು 39.5 ಓವರ್ಗಳಲ್ಲಿ 5 ವಿಕೆಟ್ಗಳಿಗೆ 191 ರನ್ ಗಳಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.
ವೇಗದ ಬೌಲರ್ಗಳಿಗೆ ನೆರವು ನೀಡುವಂತಿದ್ದ ಪಿಚ್ನಲ್ಲಿ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (49ಕ್ಕೆ3) ಆತಿಥೇಯರಿಗೆ ಪೆಟ್ಟುಕೊಟ್ಟರು.
ಅವರು ಇನಿಂಗ್ಸ್ನ ಐದನೇ ಓವರ್ನಲ್ಲಿ ವಿರಾಟ್ ಮತ್ತು ಸೂರ್ಯಕುಮಾರ್ ಅವರನ್ನು ಸತತ ಎರಡು ಎಸೆತಗಳಲ್ಲಿ ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. 20 ರನ್ ಗಳಿಸಿ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸುತ್ತಿದ್ದ ಶುಭಮನ್ ಗಿಲ್ ಅವರಿಗೂ 11ನೇ ಓವರ್ನಲ್ಲಿ ಪೆವಿಲಿಯನ್ ದಾರಿ ತೋರಿದ ಸ್ಟಾರ್ಕ್ ಮಿಂಚಿದರು. ಇನ್ನೊಂದೆಡೆ ಮಾರ್ಕಸ್ ಸ್ಟೊಯಿನಿಸ್ ಕೂಡ ಕಟರ್ ಹಾಗೂ ರಿವರ್ಸ್ ಸ್ವಿಂಗ್ ಪ್ರಯೋಗಿಸಿದರು. ಆರಂಭಿಕ ಆಟಗಾರ ಇಶಾನ್ ಕಿಶನ್ ಹಾಗೂ ರಾಹುಲ್ ಜೊತೆಗೆ ಜೊತೆಯಾಟ ಬೆಳೆಸುವತ್ತ ಚಿತ್ತ ನೆಟ್ಟಿದ್ದ ಹಾರ್ದಿಕ್ ವಿಕೆಟ್ಗಳನ್ನು ತಮ್ಮದಾಗಿಸಿಕೊಂಡರು.
ಇದರಿಂದಾಗಿ 83 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಜಡೇಜ ಹಾಗೂ ರಾಹುಲ್ ಪಾರು ಮಾಡಿದರು. ಈ ಪಂದ್ಯದಲ್ಲಿ ವಿಕೆಟ್ಕೀಪರ್ ಆಗಿ ಕಣಕ್ಕಿಳಿದ ರಾಹುಲ್ ಕೊನೆಗೂ ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಅವರ ಆಟ ತಂಡದ ಜಯಕ್ಕೂ ಕಾರಣವಾಯಿತು. ರಾಹುಲ್ ಅವರೊಂದಿಗೆ ಉತ್ತಮ ಹೊಂದಾಣಿಕೆಯಾಟವಾಡಿದ ಜಡೇಜ ಅವರದ್ದು ಈ ಪಂದ್ಯದಲ್ಲಿ ಆಲ್ರೌಂಡ್ ಆಟ. ಅದಕ್ಕಾಗಿಯೇ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.
ಬೌಲಿಂಗ್ನಲ್ಲಿ ಮಿಂಚಿದ್ದ ಜಡೇಜ ಅವರು ಮಿಚೆಲ್ ಮಾರ್ಷ್ (81; 65ಎ) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರ ವಿಕೆಟ್ ಗಳಿಸಿದ್ದರು. ಫೀಲ್ಡಿಂಗ್ನಲ್ಲಿಯೂ ವಿಜೃಂಭಿಸಿದ್ದ ಅವರು ಕುಲದೀಪ್ ಯಾದವ್ ಬೌಲಿಂಗ್ನಲ್ಲಿ ಲಾಬುಷೇನ್ ಕ್ಯಾಚ್ ಅನ್ನು ಜಡೇಜ ಡೈವ್ ಮಾಡಿ ಪಡೆದ ರೀತಿ ಮನಸೆಳೆಯಿತು.
ಸಿರಾಜ್–ಶಮಿ ಬೌಲಿಂಗ್: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ವಿಕೆಟ್ ಅನ್ನು ಎರಡನೇ ಓವರ್ನಲ್ಲಿಯೇ ಕಬಳಿಸುವಲ್ಲಿ ಸಿರಾಜ್ ಯಶಸ್ವಿಯಾದರು. ಅವರು ಸೀನ್ ಅಬಾಟ್ ಹಾಗೂ ಆ್ಯಡಂ ಜಂಪಾ ವಿಕೆಟ್ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಮಧ್ಯಮ ಕ್ರಮಾಂಕದಲ್ಲಿ ಜೋಷ್ ಇಂಗ್ಲಿಸ್, ಕ್ಯಾಮರಾನ್ ಗ್ರೀನ್ ಹಾಗೂ ಸ್ಟೊಯಿನಿಸ್ ವಿಕೆಟ್ಗಳನ್ನು ಗಳಿಸಿದ ಶಮಿ ಅವರ ಆಟದಿಂದಾಗಿ ಆಸ್ಟ್ರೇಲಿಯಾ ತಂಡವು 200 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.
ಸ್ಕೋರ್ ವಿವರ:
ಆಸ್ಟ್ರೇಲಿಯಾ: 35.4 ಓವರ್ಗಳಲ್ಲಿ 188 ರನ್ಗಳಿಗೆ ಆಲ್ಔಟ್ (ಮಿಚೆಲ್ ಮಾರ್ಷ್ 81, ಸ್ಟೀವ್ ಸ್ಮಿತ್ 22, ಜಾಶ್ ಇಂಗ್ಲಿಸ್ 26; ಮೊಹಮ್ಮದ್ ಶಮಿ 17ಕ್ಕೆ 3, ಮೊಹಮ್ಮದ್ ಸಿರಾಜ್ 29ಕ್ಕೆ 3, ರವೀಂದ್ರ ಜಡೇಜಾ 46ಕ್ಕೆ 2, ಹಾರ್ದಿಕ್ ಪಾಂಡ್ಯ 29ಕ್ಕೆ 1, ಕುಲ್ದೀಪ್ ಯಾದವ್ 48ಕ್ಕೆ 1).
ಭಾರತ: 39.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ (ಶುಭಮನ್ ಗಿಲ್ 20, ಕೆ.ಎಲ್ ರಾಹುಲ್ ಅಜೇಯ 75, ರವೀಂದ್ರ ಜಡೇಜಾ ಅಜೇಯ 45; ಮಿಚೆಲ್ ಸ್ಟಾರ್ಕ್ 49ಕ್ಕೆ 3, ಮಾರ್ಕಸ್ ಸ್ಟೋಯ್ನಿಸ್ 27ಕ್ಕೆ 2).
ಪಂದ್ಯಶ್ರೇಷ್ಠ: ರವೀಂದ್ರ ಜಡೇಜಾ