ಮೀರ್ಪುರ್: ಸೋಲಿನತ್ತ ಮುನ್ನಡೆದಿದ್ದ ಭಾರತವನ್ನು ಗೆಲುವಿನ ದಡ ಸೇರಿಸಿದ ಶ್ರೇಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಶ್ರೇಯಸ್ ಅಯ್ಯರ್ಗೆ ಸಲ್ಲಬೇಕು.ನಿರೀಕ್ಷೆ ಮೂಡಿಸಿದ್ದ ಅನುಭವಿ ಆಟಗಾರರೆಲ್ಲ ಎರಡಂಕಿ ದಾಟದೆ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ತಲೆ ಕೆಳಹಾಕಿ ಮಂಡಿಯೂರಿದಾಗ ಭಾರತದ ಗೆಲುವಿನ ಆಶೆ ಕಮರಿ ಹೋಗುವ ಹಂತ ತಲುಪಿತ್ತು.ಪ್ರಥಮ ಇನ್ನಿಂಗ್ಸ್ ನಲ್ಲಿ 93 ರನ್ ಗಳಿಸಿದ್ದ ವಿಕೆಟ್ ಕೀಪರ್ ರಿಷಬ್ ಪಂತ್ ಬಾಂಗ್ಲಾದ ಮೆಹದಿ ಹಸನ್ ಬೌಲಿಂಗ್ ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದು 9 ರನ್ ಗೆ ವಿಕೆಟ್ ಚೆಲ್ಲಿದಾಗ ಭಾರತ ಸೋಲುವ ಭಯ ಅಭಿಮಾನಿಗಳಲ್ಲಿ ಮನೆ ಮಾಡಿತ್ತು.ಮೂರನೇ ದಿನ 45/4 ಸಂಕಷ್ಟದಲ್ಲಿದ್ದ ಭಾರತಕ್ಕೆ ಇಂದು ಬೆಳಗ್ಗಿನ ಆಟದಲ್ಲಿಯೇ ಮೆಹದಿ ಹಸನ್ ಹಾಗೂ ನಾಯಕ ಶಕೀಬ್ ಅಲ್ ಹಸನ್ ಬಲವಾದ ಹೊಡೆತ ನೀಡಿದ ಪರಿಣಾಮ ಭಾರತ 74/7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಸೊಗಸಾಗಿ ಬ್ಯಾಟ್ ಬೀಸಿದ ಆರ್.ಅಶ್ವಿನ್ ಒಂದು ಸಿಕ್ಸರ್,4 ಬೌಂಡರಿ ನೆರವಿನಿಂದ 62 ಬಾಲ್ಗಳಲ್ಲಿ 42 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರಲ್ಲದೆ ಪಂದ್ಯದ ವ್ಯಕ್ತಿ ಗೌರವಕ್ಕೂ ಭಾಜನರಾದರು.
ಶ್ರೇಯಸ್ ಅಯ್ಯರ್ ಮೊದಲ ಇನ್ನಿಂಗ್ಸ್ ನಲ್ಲಿ 87 ರನ್ ಗಳಿಸಿ ಭಾರತ ಗೌರವಯುತ ಮೊತ್ತ ತಲುಪಲು ಕಾರಣರಾಗಿದ್ದು ದ್ವಿತೀಯ ಇನ್ನಿಂಗ್ಸ್ನಲ್ಲಿಯೂ ತಾಳ್ಮೆಯ ಆಟವಾಡಿ ಅಶ್ವಿನ್ಗೆ ಸಾಥ್ ನೀಡಿದರಲ್ಲದೆ 4 ಬೌಂಡರಿ ನೆರವಿನಿಂದ 46 ಎಸೆತ ಎದುರಿಸಿ 29 ರನ್ಗಳಿಸಿ ಔಟಾಗದೆ ಉಳಿದು ವಿಜಯದ ನಗೆ ಬೀರಿದರು.2-0 ಗೆಲುವಿನೊಂದಿಗೆ ಬಾಂಗ್ಲಾ ಪ್ರವಾಸ ಮುಗಿಸಿದ ಭಾರತ ಟೆಸ್ಟ್ ಪಾಯಿಂಟ್ ಪಟ್ಟಿಯಲ್ಲಿ ಎರಡು ಸ್ಥಾನ ಜಿಗಿತ ಕಂಡು ದ್ವಿತೀಯ ಸ್ಥಾನದೊಂದಿಗೆ ವಿಶ್ವ ಟೆಸ್ಟ್ ಕ್ರಿಕೆಟ್ ಫೈನಲ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.ಪ್ರಥಮ ಸ್ಥಾನದಲ್ಲಿ ಆಸ್ಟ್ರೇಲಿಯಾ ಮುಂದುವರಿದಿದೆ.
ಪ್ರಥಮ ಟೆಸ್ಟ್ ಗೆಲ್ಲಲು ಪ್ರಮುಖ ಕಾರಣರಾದ ಚೇತೇಶ್ವರ ಪೂಜಾರ ಅವರು ಸರಣಿ ಪುರುಷೋತ್ತಮರಾಗಿ ಹೊರಹೊಮ್ಮಿದರು.ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತದ ಪರ ಆರಂಭಿಕ ದಾಂಡಿಗ ಶುಭಮನ್ ಗಿಲ್(7), ನಾಯಕ ಕೆ.ಎಲ್.ರಾಹುಲ್(2), ಪೂಜಾರ(6), ವಿರಾಟ್ ಕೊಯ್ಲಿ(1), ಅಕ್ಸರ್ ಪಟೇಲ್(34) ರಿಷಬ್ ಪಂತ್(9),ಜೈದೇವ್ ಉನದ್ಕತ್(13) ರನ್ ಗಳಿಸಿದರು.ಬಾಂಗ್ಲಾ ಪರ ಮೆಹದಿ ಹಸನ್ ಮಿರಾಜ್(5) ಹಾಗೂ ನಾಯಕ ಶಕೀಬ್ ಅಲ್ ಹಸನ್ (2) ವಿಕೆಟ್ ಗಳಿಸುವ ಮೂಲಕ ಭಾರತಕ್ಕೆ ಸೋಲಿನ ಭೀತಿ ಉಂಟುಮಾಡಿದ್ದರು.
ಟೆಸ್ಟ್ ನಲ್ಲಿ ಬಾಂಗ್ಲಾ ವಿರುದ್ಧ 2-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತ ಇದಕ್ಕೂ ಮೊದಲು ನಡೆದಿದ್ದ ಏಕದಿನ ಪಂದ್ಯದಲ್ಲಿ 1-2 ಅಂತರ ಹಿನ್ನಡೆಯಲ್ಲಿ ಸೋತು ಮುಖಭಂಗ ಅನುಭವಿಸಿತ್ತು. ಭಾರತ ವಿರುದ್ಧ ಏಕದಿನ ಹಾಗೂ ಟೆಸ್ಟ್ನಲ್ಲಿ ಬಾಂಗ್ಲಾದ ಆಲ್ ರೌಂಡರ್ ಮೆಹದಿ ಹಸನ್ ಮಿರಾಜ್ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದರು.ದ್ವಿತೀಯ ಟೆಸ್ಟ್ನಲ್ಲಿ ಅವರು ಒಟ್ಟು 6 ವಿಕೆಟ್ ಗಳಿಸಿದ್ದಾರೆ.ಭಾರತದ ಪರ ಆರ್.ಅಶ್ವಿನ್ ಕೂಡಾ 6 ವಿಕೆಟ್ ಸಾಧನೆಯೊಂದಿಗೆ ಬೌಲಿಂಗ್ ಹಾಗೂ ಬ್ಯಾಟಿಂಗ್(12 ಹಾಗೂ 42)ನಲ್ಲಿ ಅಬ್ಬರಿಸುವ ಮೂಲಕ ಪಂದ್ಯದ ವ್ಯಕ್ತಿಯಾಗಿ ತಮಗಿನ್ನೂ ಆಡಲು ಶಕ್ತಿ ಇದೆ.ವಯಸ್ಸಾಗಿಲ್ಲ ಎಂದು ಸಾಬೀತು ಪಡಿಸಿದರು.