ಮಾಸ್ಕೋ: ಉಕ್ರೇನನ್ನು NATO ಸದಸ್ಯ ದೇಶವನ್ನಾಗಿ ಸೇರಿಸಿಕೊಂಡರೆ ಮೂರನೇ ಮಹಾಯುದ್ಧಕ್ಕೆ ಮುನ್ನುಡಿಯಾಗುತ್ತದೆ ಎಂದು ರಷ್ಯಾದ ರಕ್ಷಣಾ ಸಮಿತಿಯ ಉಪ ಕಾರ್ಯದರ್ಶಿ ಅಲೆಕ್ಸಾಂಡರ್ ವೆನಿಡಿಕ್ಟೊವ್ ಎಚ್ಚರಿಕೆ ನೀಡಿದ್ದಾರೆ. TASS ನ್ಯೂಸ್ ಜತೆ ಗುರುವಾರ ಮಾತನಾಡಿದ ಅವರು, “ನ್ಯಾಟೊ ಜೊತೆ ಸೇರಿದರೆ ಮೂರನೇ ಮಹಾಯುದ್ಧಕ್ಕೆ ಕಾರಣವಾಗುತ್ತದೆ ಎಂಬುದು ಕೀವ್ಗೆ (ಉಕ್ರೇನ್ ರಾಜಧಾನಿ) ಗೊತ್ತಿದೆ,” ಎಂದು ಹೇಳಿದ್ದಾರೆ ಎಂದು Reuters ವರದಿ ಮಾಡಿದೆ.
“ನಮಗನಿಸುವ ಪ್ರಕಾರ ಉಕ್ರೇನ್ಗೂ ಇದೇ ಬೇಕಿದೆ. ಇದೇ ಕಾರಣಕ್ಕೆ ಅವರು ನಮ್ಮನ್ನು ಕೆಣಕುತ್ತಿದ್ದಾರೆ,” ಎಂದು ಅಲೆಕ್ಸಾಂಡರ್ ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್ಗೆ ಯುದ್ಧದಲ್ಲಿ ಸಹಾಯ ಮಾಡುವ ಮೂಲಕ ನೇರವಾಗಿ ಈ ಯುದ್ಧದ ಪಾಲುದಾರರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ನ ನಾಲ್ಕು ಪ್ರದೇಶಗಳನ್ನು ರಷ್ಯಾದ ಭೂಭಾಗ ಎಂದು ಘೋಷಿಸಿದ ನಂತರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ನ್ಯಾಟೊ ಸದಸ್ಯತ್ವ ಪ್ರಕ್ರಿಯೆಯನ್ನು ತ್ವರಿತ ಗೊಳಿಸಲು ತುರ್ತು ಅರ್ಜಿ ಸಲ್ಲಿಸಿದ್ದು. ಇದೇ ತಿಂಗಳ ಅಂತ್ಯದೊಳಗೆ ನ್ಯಾಟೊ ಮಿತೃದೇಶವಾಗಿ ಉಕ್ರೇನನ್ನು ಪರಿಗಣಿಸಬೇಕು ಮತ್ತು ಸೇನಾ ಸಹಾಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ವಿಶ್ವ ಸಂಸ್ಥೆಯ ಸಭೆಯಲ್ಲಿ ಉಕ್ರೇನ್ ಭೂ ಪ್ರದೇಶವನ್ನು ರಷ್ಯಾ ಆಕ್ರಮಿಸಿಕೊಂಡು ಅದನ್ನು ತಮ್ಮದೇ ಪ್ರದೇಶ ಎಂದು ಘೋಷಿಸಿರುವುದು ಕಾನೂನು ಬಾಹಿರ ಎಂದು ಹೇಳಿದ ಬೆನ್ನಲ್ಲೇ ರಷ್ಯಾ ಉಕ್ರೇನ್ ಮೇಲಿನ ದಾಳಿಯನ್ನು ಹೆಚ್ಚಿಸಿದೆ. ಉಕ್ರೇನ್ನ ನಗರ ಮೈಕೊಲೇವ್ ಮೇಲೆ ಕ್ಷಿಪಣಿ ದಾಳಿ ಮಾಡಿದ್ದು ಸಂಪೂರ್ಣ ನಗರ ಧ್ವಂಸವಾಗಿದೆ ಎಂದು ವರದಿಗಳು ಹೇಳುತ್ತಿವೆ. ಪುಟಿನ್ ಯುದ್ಧವನ್ನು ತೀವ್ರಗೊಳಿಸಿದ ಬೆನ್ನಲ್ಲೇ ಉಕ್ರೇನ್ಗೆ ಮಿತೃ ದೇಶಗಳು ಸೇನಾ ಸಹಾಯವನ್ನು ಹೆಚ್ಚಿಸಿದೆ.
“ಐದು ಅಂತಸ್ತಿನ ಬಹುಮಹಡಿ ಕಟ್ಟಡದ ಮೇಲೆ ಮಿಸೇಲ್ ದಾಳಿ ಮಾಡಲಾಗಿದೆ. ಮೇಲಿನ ಎರಡು ಮಹಡಿ ಸಂಪೂರ್ಣವಾಗಿ ನಾಶವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದೇವೆ,” ಎಂದು ಮೈಕೊಲೇವ್ನ ಮೇಯರ್ ಸೆನ್ಕೆವಿಚ್ ಸೋಷಿಯಲ್ ಮೀಡಿದಾಯದಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ನಗರಾದ್ಯಂತ ಕ್ಷಿಪಣಿ ದಾಳಿಯಾಗಿರುವುದಾಗಿಯೂ ಅವರು ತಿಳಿಸಿದ್ದಾರೆ.
ಉಕ್ರೇನ್ನ ರಾಜಧಾನಿ ಕೀವ್ ಮೇಲೂ ರಷ್ಯಾ ದಾಳಿ ಮಾಡುತ್ತಿದೆ. ಗುರುವಾರ ಮುಂಜಾನೆಯಿಂದ ದಾಳಿ ಆರಂಭವಾಗಿದ್ದು ಡ್ರೋನ್ ಬಳಸಿ ಬಾಂಬ್ಗಳನ್ನು ಹಾಕಲಾಗುತ್ತಿದೆ. ಆದರೆ ಇದುವರೆಗೂ ಮೃತರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.