ಟೋಕಿಯೋ ಒಲಿಂಪಿಕ್ಸ್‌| ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್‌ಗೆ: ಬಿಕ್ಕಿ ಬಿಕ್ಕಿ ಅತ್ತ ಆಸ್ಟ್ರೇಲಿಯನ್ನರು!

ಟೋಕಿಯೋ: ಸತತ ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದ ಆಸ್ಟ್ರೇಲಿಯಾ ಮಹಿಳಾ ಹಾಕಿ ತಂಡವನ್ನು ಭಾರತ ತಂಡದವರು ಸುಲಭವಾಗಿ ಕಟ್ಟಿಹಾಕುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಎ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಭಾರತ ತಂಡದವರು ಬಿ ಗುಂಪಿನ ಮೊದಲ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು 1-0 ಗೋಲು ಬಾರಿಸಿ ಮನೆಗೆ ಕಳುಹಿಸಿದ್ದಾರೆ. 22ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಬಾರಿಸಿದ ಗೋಲಿನಿಂದ ಭಾರತ ತಂಡದ ಸೆಮಿ ಫೈನಲ್ ಪ್ರವೇಶಿಸಿದ್ದು, ಚಿನ್ನದ ಪದಕ ಪಡೆಯಲು ಇನ್ನೊಂದೆ ಮೆಟ್ಟಿಲು ಬಾಕಿ ಇದೆ. ಆಸ್ಟ್ರೇಲಿಯಾವನ್ನು ಕ್ಷೇತ್ರ ರಕ್ಷಣೆಯ ಮೂಲಕ ಅಲ್ಲಿಲ್ಲಿ ನೀಡಿದ ಠಕ್ಕರ್‌ನಿಂದ ಸೊಗಸಾಗಿ ಆಟವಾಡಿದ ಮಹಿಳಾ ತಂಡದವರು, ಇಡೀ ತಂಡದ ಗೆಲವಿಗೆ ಹೊಣೆಗಾರಿಕೆ ಹೊತ್ತುಕೊಂಡವರಂತೆಯೇ ಆಟವಾಡಿದ ದೀಪ್ ಗ್ರೇಸ್ ಎಕ್ಕ ಅವರ ಮನೋಜ್ಞ ಆಟ ನೋಡುಗರ ಹುಬ್ಬೇರಿಸಿತು.

9ನೇ ನಿಮಿಷದಲ್ಲಿ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಭಾರತ, ತಂಡದ ನಾಯಕಿ ರಾಣಿ ರಾಂಪಾಲ್ ಕ್ರಾಸ್ ಹಿಟ್ ಬಾರಿಸಿ ಆಸ್ಟ್ರೇಲಿಯನ್ನರಿಗೆ ತಿರುಗೇಟು ನೀಡಿದರು. ತಕ್ಷಣ ಭಾರತಕ್ಕೆ ಒಳೇಟು ನೀಡಲು ಮುಂದಾದ ಆಸ್ಟ್ರೇಲಿಯಾ ಬ್ರೂಕ್ ಪೆರಿಸ್ ಅವರನ್ನು ಹಿಂಬಾಲಿಸಿತು. ಆಗ ಗುರ್ಜಿತ್ ಕೌರ್ ಚಾಕಚಕ್ಯತೆಯಿಂದ ಪೆನಾಲ್ಟಿ ಕಾರ್ನಲ್ ಅವಕಾಶ ಬಳಸಿಕೊಂಡು ಗೋಲು ಬಾರಿಸಿ ತಂಡಕ್ಕೆ ವಿಜಯ ಮಾಲೆ ತಂದುಕೊಟ್ಟರು. ಆಸ್ಟ್ರೇಲಿಯಾಗೂ ಕೂಡ ಅತಿ ಹೆಚ್ಚು ಪೆನಾಲ್ಟಿ ಕಾರ್ನರ್, ಸರ್ಕಲ್ ಅವಕಾಶಗಳು ದೊರಕಿದರೂ ಜಯದ ಮೆಟ್ಟಿಲು ಹತ್ತಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಭಾರತ, ಅಂತಿಮವಾಗಿ ಸೆಮಿಫೈನಲ್ ಪ್ರವೇಶಿಸಿತು.

ಬಿಕ್ಕಿ ಬಿಕ್ಕಿ ಅತ್ತ ಆಸ್ಟ್ರೇಲಿಯನ್ನರು

ಭಾರತದ ವಿರುದ್ಧ ಪರಾಜಿತಗೊಂಡ ಆಸ್ಟ್ರೇಲಿಯಾ ತಂಡದ ಆಟಗಾರರು ಸೋಲಿನ ಕಹಿ ಸಹಿಸಿಕೊಳ್ಳದೆ ಹಾಕಿ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತರು.