ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಭಾರತ, ಬೆಲ್ಜಿಯಂ ವಿರುದ್ಧ ಸೋಲು

ಟೋಕಿಯೋ: ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಭಾರತ 2-5 ಗೋಲುಗಳಿಂದ ಪರಾಭಾವಗೊಂಡಿದ್ದು, ಕ್ರೀಡಾಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. 41 ವರ್ಷಗಳ ಬಳಿಕ ಒಲಿಂಪಿಕ್ಸ್ ಫೈನಲ್ ಪ್ರವೇಶಿಸುವ ಭಾರತ ಪುರುಷರ ಹಾಕಿ ತಂಡದ ಕನಸು ಭಗ್ನಗೊಂಡಿದೆ. ಆದಾಗ್ಯೂ ಭಾರತ ತಂಡದ ಕಂಚು ಪದಕ ಗೆಲ್ಲುವ ಆಸೆ ಇನ್ನೂ ಜೀವಂತವಾಗಿರುವುದು ಸಮಾಧಾನ ಸಂಗತಿ.

ಬಲಿಷ್ಠ ಬೆಲ್ಜಿಯಂ ವಿರುದ್ಧ ಭಾರತೀಯ ಪಟುಗಳು ತೀವ್ರ ಸೆಣಸಾಟ ನಡೆಸಿದರೂ ನಿರೀಕ್ಷಿತ ಫಲಿತಾಂಶ ಲಭಿಸಲಿಲ್ಲ. 7ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಮತ್ತು ೮ನೇ ನಿಮಿಷದಲ್ಲಿ ಮಂದೀಪ್ ಸಿಂಗ್ ಗೋಲುಗಳನ್ನು ಬಾರಿಸಿದರು. ನಂತರ ಪ್ರಾಬಲ್ಯ ಸಾಧಿಸುವ ಭಾರತದ ಹೋರಾಟ ವಿಫಲವಾಯಿತು.

ಈ ಸೋಲಿನೊಂದಿಗೆ 41 ವರ್ಷಗಳ ಬಳಿಕ ಫೈನಲ್ ತಲುಪುವ ಭಾರತ ಪುರುಷರ ಹಾಕಿ ತಂಡದ ಕನಸು ನುಚ್ಚುನೂರಾಯಿತು. 1980ರಲ್ಲಿ ಮಾಸ್ಕೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಪೈನಲ್ ಪ್ರವೇಶಿಸಿತ್ತು. ಬೆಲ್ಜಿಯಂ ಪರ ಅಲೆಗ್ಸಾಂಡರ್ ಹೆಂಡ್ರಿಕ್ಸ್ ಹ್ಯಾಟ್ರಿಕ್ ಗೋಲುಗಳನ್ನು(19, 49, ಮತ್ತು 53 ನಿಮಿಷ) ಬಾರಿಸಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಅಲೆಗ್ಸಾಂಡರ್ ಪಾತ್ರರಾದರು.
ಲೊಯಿಕ್ ಲುಯೆಪಿಯರ್ಟ್(2ನೇ ನಿಮಷ) ಮತ್ತು ಜಾನ್-ಜಾನ್ ಡೋಹ್‌ಮೆನ್ (60ನೇ ನಿಮಿಷ) ತಲಾ ಒಂದೊಂದು ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಸೆಮಿಫೈನಲ್‌ನಲ್ಲಿ ವಿಫಲರಾದರೂ ಕಂಚು ಪದಕ ಗೆಲ್ಲುವ ಭಾರತ ಪುರುಷರ ಹಾಕಿ ತಂಡ ಆಸೆ ಇನ್ನೂ ಜೀವಂತವಾಗಿದೆ. ಗುರುವಾರ ಕಂಚು ಪದಕಕ್ಕಾಗಿ ಪೈಪೋಟಿ ನಡೆಯಲಿದೆ. ಆಸ್ಟ್ರೇಲಿಯಾ ಮತ್ತು ಜರ್ಮನಿ ನಡುವೆ ಎರಡನೇ ಸೆಮಿಫೈನಲ್ ನಡೆಯಲಿದ್ದು, ಸೋತ ತಂಡದ ವಿರುದ್ಧ ಭಾರತೀಯ ಹಾಕಿ ಪಟುಗಳು ಸೆಣಸಲಿದ್ದಾರೆ.

× Chat with us