ಕೋವಿಡ್‌: ರಾಜ್ಯದಲ್ಲಿ ಲಾಕ್‌ಡೌನ್ ಆಗುವುದೇ ಅಥವಾ ಕರ್ಫ್ಯೂ ಮುಂದುವರಿಯುವುದೇ?

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆ ವಾಡಬೇಕೇ ಅಥವಾ ವೀಕೆಂಡ್ ಕರ್ಫ್ಯೂಗೆ ಮಾತ್ರ ಸೀಮಿತಗೊಳಿಸಬೇಕೇ ಎಂಬುದರ ಕುರಿತಾಗಿ ಸೋಮವಾರ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಲಿದೆ. ರಾಜ್ಯ ಸರ್ಕಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸನ್ನು ಒಪ್ಪಿಕೊಂಡರೆ ಕರ್ನಾಟಕ ಮತ್ತೆ ಕನಿಷ್ಠ ಪಕ್ಷ ಎರಡು ವಾರಗಳ ಕಾಲ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಆದರೆ, ಲಾಕ್‌ಡೌನ್ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಬಹುದು ಎಂಬ ಮಾತೂ ಕೇಳಿಬರುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ನಿತ್ಯ ಏರಿಕೆಯಾಗುತ್ತಿದ್ದು, ಸೋಂಕಿನ ಸುನಾಮಿಯನ್ನು ನಿಯಂತ್ರಿಸಲು ಬೆಂಗಳೂರು ನಗರದಲ್ಲಿ ೧೪ ದಿನಗಳ ಸಂಪೂರ್ಣ ಲಾಕ್‌ಡೌನ್‌ಗೆ ತಜ್ಞರು ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದ್ದು, ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ.

ವಾರಾಂತ್ಯ ಕರ್ಫ್ಯೂ ಮಾದರಿಯಲ್ಲೇ ಬೆಂಗಳೂರಿನಲ್ಲಿ ೧೪ ದಿನಗಳ ಲಾಕ್‌ಡೌನ್ ಅವಶ್ಯ. ಇದರಿಂದ ಕೊರೊನಾ ಸರಪಳಿಯನ್ನು ತುಂಡರಿಸಬಹುದು. ಹಾಗಾಗಿ, ೧೪ ದಿನಗಳ ಲಾಕ್‌ಡೌನ್‌ಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್‌ಬಾಬು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್‌ಡೌನ್‌ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಒಲವು ತೋರಿಲ್ಲ. ಈಗಲೇ ಲಾಕ್‌ಡೌನ್ ತೀರ್ಮಾನ ಬೇಡ, ಈಗಿರುವ ಮಾರ್ಗಸೂಚಿಗಳು ಮೇ ೪ರವರೆಗೂ ಜಾರಿಯಲ್ಲಿರುತ್ತವೆ, ಬಳಿಕ ಪರಿಸ್ಥಿತಿ ಆಧರಿಸಿ ಲಾಕ್‌ಡೌನ್ ಬಗ್ಗೆ ತೀರ್ಮಾನ ಮಾಡೋಣ ಎಂದು ಈ ಇಬ್ಬರೂ ಸಚಿವರು ಶನಿವಾರ ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ, ಸಲಹೆಗಳನ್ನು ಸಚಿವ ಸಂಪುಟದಲ್ಲಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಹಾಗಾಗಿ, ಸಚಿವ ಸಂಪುಟ ಸಭೆಯಲ್ಲಿ ಲಾಕ್‌ಡೌನ್ ಬಗ್ಗೆ ಸಮಗ್ರವಾಗಿ ಚರ್ಚಿಸಿ ಸರ್ಕಾರ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಿದೆ.

ದೇಶದಲ್ಲೇ ಅತಿಹೆಚ್ಚು ಕೋವಿಡ್ ಸೋಂಕಿನ ಪ್ರಕರಣಗಳನ್ನು ಹೊಂದಿರುವ ಪಕ್ಕದ ಮಹಾರಾಷ್ಟ್ರದಲ್ಲಿ ಅನಿವಾರ್ಯವಾಗಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿತು. ಇದರ ಪರಿಣಾಮವಾಗಿ ಕಳೆದ ಕೆಲವು ದಿನಗಳಿಂದ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. ದಿಲ್ಲಿ ಕೂಡ ಲಾಕ್‌ಡೌನ್ ಅನ್ನು ವಿಸ್ತರಿಸಿದೆ. ಇದೀಗ ರಾಜ್ಯ ಸರ್ಕಾರವೂ ಇದೇ ಮಾದರಿಯನ್ನು ಆಳವಡಿಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್ ಬದಲು ಕರ್ಫ್ಯೂ ಹಾಕಿದರೆ ಕೆಲವು ವಾಣಿಜ್ಯ ವಹಿವಾಟುಗಳಿಗೆ, ಕೈಗಾರಿಕೆಗಳಿಗೂ ಅವಕಾಶ ನೀಡಬಹುದು. ಹೀಗಾಗಿ, ಕರ್ಫ್ಯೂ ಮುಂದುವರಿಸಿದರೆ ಚೈನ್ ಲಿಂಕ್ ಕಟ್ ಮಾಡಬಹುದು. ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಬಹುದು. ಕೋವಿಡ್ ನಿಯಂತ್ರಣಕ್ಕೆ ಕರ್ಫ್ಯೂ ಒಂದೇ ಮಾರ್ಗ. ಹೀಗಾಗಿ ವೀಕೆಂಡ್ ಕರ್ಫ್ಯೂ ವಿಸ್ತರಣೆಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.