ಕ್ಷೇತ್ರ ತ್ಯಾಗಕ್ಕೆ ಸಿದ್ಧ ಎಂದ ನಾಗೇಂದ್ರ; ದಾರಿ ಬದಲಿಸ್ತಾರಾ ಜಿಟಿಡಿ?

ಮೈಸೂರು: ಹಳೆ ಮೈಸೂರು ಭಾಗದಲ್ಲಿ ಪ್ರಭಾವ ಹೊಂದಿರುವ ಮಾಜಿ ಸಚಿವ, ಹಾಲಿ ಶಾಸಕ ಜಿ.ಟಿ. ದೇವೇಗೌಡರು ಜಾ.ದಳದಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್‌ ಕಡೆ ಮುಖ ಮಾಡಿದ್ದರು. ಇದೀಗ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಮತ್ತು ಸಚಿವ ಎಸ್‌.ಟಿ. ಸೋಮಶೇಖರ್‌ ಮತ್ತು ದೇವೇಗೌಡರ ನಡುವಿನ ಭೇಟಿ, ಚಾಮರಾಜ ಕ್ಷೇತ್ರದ ಶಾಸಕ ಎಲ್‌.ನಾಗೇಂದ್ರ ಅವರು ನೀಡಿದ ಹೇಳಿಕೆ ನೋಡಿದರೆ ಜಿಟಿಡಿ ಕಾಂಗ್ರೆಸ್‌ ಬದಲಿಗೆ ಕಮಲವನ್ನು ಹಿಡಿಯುತ್ತಾರಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

gtd
ಮೈಸೂರಿನಲ್ಲಿ ಈ ಸಂಬಂಧ ಮಾತನಾಡಿರುವ ಶಾಸಕ ಎಲ್‌. ನಾಗೇಂದ್ರ ಅವರು, ಜಿ.ಟಿ. ದೇವಗೌಡರು ಬಿಜೆಪಿಗೆ ಬಂದರೆ ಸ್ವಾಗತ. ಅವರ ಪುತ್ರ ಹರೀಶ್ ಗೌಡನಿಗೆ ಚಾಮರಾಜ ಟಿಕೇಟ್ ನೀಡಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡಿದ್ರೆ ನಾನು ಕ್ಷೇತ್ರ ತ್ಯಾಗ ಮಾಡ್ತೀನಿ. ಅವರು ಪಕ್ಷಕ್ಕೆ ಬಂದು ಈ ಭಾಗದಲ್ಲಿ ಬಿಜೆಪಿ ಎಂಟತ್ತು ಸ್ಥಾನ ಗೆಲ್ಲಿಸುತ್ತಾರೆ ಅನ್ನೋದಾದ್ರೆ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧ. ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ಇಂತಹ ಪಕ್ಷಕ್ಕಾಗಿ ಕ್ಷೇತ್ರ ತ್ಯಾಗಕ್ಕೂ ನಾನು ಸಿದ್ಧನಾಗುತ್ತೇನೆ ಎಂದಿದ್ದಾರೆ.
ಇದಕ್ಕೂ ಮೊದಲು ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಜಿಟಿ ದೇವೇಗೌಡರನ್ನು ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದು, ಈಗ ಆಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಯಾರು ಯಾವ ರೀತಿಯಲ್ಲಿ ರಾಜಕೀಯ ದಾಳ ಉರುಳಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.