ಮನೆಗಳಿಗಿರಲಿ ಮನೆಮಗಳ ಹೆಸರು!

ಉತ್ತರಖಂಡದಲ್ಲಿ ಸ್ತ್ರೀಯರ ಹಕ್ಕಿನ ಅರಿವಿಗಾಗಿ ಜಿಲ್ಲಾಡಳಿತದ ಕಾರ್ಯಕ್ರಮ

ಉತ್ತರಖಂಡದ ಪೌರಿ ಘರ್ವಾಲ್ ಜಿಲ್ಲೆಯ ಮಥಾನ ಗ್ರಾಮದ ಮನೆಗಳ ಎದುರು ಆರತಿ ನಿವಾಸ, ಶೋಭಾ ನಿವಾಸ, ಸಿಮ್ರಾನ್ ನಿವಾಸ ಎಂದು ಮುಂತಾಗಿ ಬರೆದು ಹಾಕಿದ ನಾಮಫಲಕಗಳು ಕಾಣಿಸುತ್ತವೆ. ಇದರಲ್ಲೇನು ವಿಶೇಷ? ನಮ್ಮಲ್ಲೂ, ಹಾಗೂ ಇತರೆಡೆಗಳಲ್ಲೂ, ಹೀಗೆಯೇ ಲಕ್ಷ್ಮೀ ಸದನ, ಸರಸ್ವತಿ ನಿಲಯ, ಪಾರ್ವತಿ ಕುಟೀರ ಮುಂತಾಗಿ ಮನೆಗಳಿಗೆ ಹೆಸರಿಡುವುದು ತೀರಾ ಸಾಮಾನ್ಯ ಎಂದು ಯಾರಾದರೂ ಹೇಳಬಹುದು. ಹೌದು, ಹೀಗೆ ಹೆಸರಿಡುವುದು ಎಲ್ಲೆಡೆ ಸಾಮಾನ್ಯವೇ. ಆದರೆ, ಇಲ್ಲೊಂದು ವ್ಯತ್ಯಾಸವಿದೆ. ಲಕ್ಷ್ಮೀ ಸದನ, ಸರಸ್ವತಿ ನಿಲಯ, ಪಾರ್ವತಿ ಕುಟೀರ ಈ ಹೆಸರುಗಳೆಲ್ಲವೂ ನಮ್ಮ ಸ್ತ್ರೀದೇವತೆಗಳ ಹೆಸರು. ಆದರೆ, ಈ ಮಥಾನ ಗ್ರಾಮದ ಮನೆಗಳ ಎದುರಿನ ಸ್ತ್ರೀ ಹೆಸರುಗಳು ಆಯಾ ಮನೆಗಳಲ್ಲಿ ವಾಸಿಸುವ ಹೆಣ್ಣುಮಕ್ಕಳು ಅಥವಾ ಸ್ತ್ರೀಯರ ಹೆಸರುಗಳು! ಉದಾಹರಣೆಗೆ, ಆರತಿ ನಿವಾಸ ಅನ್ನುವುದು ಆ ಮನೆಯಲ್ಲಿ ವಾಸಿಸುವ ೨೧ ವರ್ಷ ಪ್ರಾಯದ ಹೆಣ್ಣುಮಗಳ ಹೆಸರು.
ಉತ್ತರ ಭಾರತದ ಆನೇಕ ರಾಜ್ಯಗಳ ಹಲವಾರು ಜಿಲ್ಲೆಗಳಿಗೆ ಹೋಲಿಸಿದರೆ ಪೌರಿ ಘರ್ವಾಲ್ ಜಿಲ್ಲೆಯ ಪುರುಷ ಮತ್ತು ಮಹಿಳೆಯರ ಸಂಖ್ಯಾ ಅನುಪಾತ ಬಹಳ ಆರೋಗ್ಯಕರವಾಗಿದೆ. ೨೦೧೧ರ ಜನಗಣತಿಯ ಪ್ರಕಾರ ಇಲ್ಲಿ ಪ್ರತೀ ೧೦೦೦ ಪುರುಷರಿಗೆ ೧೧೦೩ ಮಹಿಳೆಯರಿದ್ದಾರೆ. ಆದರೆ, ಇಲ್ಲಿನ ೬ ವರ್ಷದೊಳಗಿನ ಮಕ್ಕಳ ಸಂಖ್ಯಾ ಅನುಪಾತ ಆತಂಕಕಾರಿಯಾಗಿದೆ-ಪ್ರತೀ ೧೦೦೦ ಗಂಡುಮಕ್ಕಳಿಗೆ ಹೆಣ್ಣು ಮಕ್ಕಳ ಸಂಖ್ಯೆ ಕೇವಲ ೯೦೪! ಇದು ಇಡೀ ಉತ್ತರಖಂಡ ರಾಜ್ಯದ ಸರಾಸರಿ ಅನುಪಾತವಾದ ೯೬೩ ಕ್ಕಿಂತಲೂ ಬಹಳ ಕಡಿಮೆ. ಇದು, ಇತ್ತೀಚಿನ ವರ್ಷಗಳಲ್ಲಿ ಉತ್ತರ ಭಾರತದ ಇತರ ರಾಜ್ಯಗಳಂತೆ ಇಲ್ಲೂ ಭ್ರೂಣಹತ್ಯೆ ಅಥವಾ ಲಿಂಗ ಆಯ್ಕೆಯಂತಹ ಆತಂಕಕಾರಿ ಬೆಳವಣಿಗೆಗಳು ತಲೆ ಎತ್ತುತ್ತಿರುವುದರ ಸ್ಪಷ್ಟ ನಿದರ್ಶನ.

ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಲಿಂಗ ಸಮಾನತೆ, ಸ್ತ್ರೀಯರ ಸಾಮಾನ್ಯ ಹಕ್ಕು ಮತ್ತು ಸ್ತ್ರೀಯರ ಆಸ್ತಿಹಕ್ಕಿನ ಬಗ್ಗೆ ಜನರಲ್ಲಿ ಅರಿವು ಹುಟ್ಟಿಸಲು ‘ಘೌರ್ ಕಿ ಪಚಾಯೇಂ, ನೌನಿ ಕು ನಾವ್ (ಮನೆಯ ಗುರುತು, ಮನೆ ಮಗಳ ಹೆಸರಲ್ಲಿ)’ ಎಂಬ ಒಂದು ಕಾರ್ಯಕ್ರಮವನ್ನು ರೂಪಿಸಿತು. ಈ ಕಾರ್ಯಕ್ರಮದಡಿ ಜಿಲ್ಲಾಡಳಿತವು ಮನೆಗಳಿಗೆ ಭೇಟಿ ಕೊಟ್ಟು, ಆಯಾ ಮನೆಗಳ ಹೆಣ್ಣು ಮಕ್ಕಳ ಹೆಸರಲ್ಲಿ ಮನೆಯ ನಾಮಫಲಕಗಳನ್ನು ಹಾಕಲು ಕುಟುಂಬಗಳ ಮನ ಒಲಿಸುವ ಕೆಲಸ ಮಾಡುತ್ತಿದೆ. ಇಗಾಗಲೇ ಖಿರ‍್ಸು, ಪೌರಿ ಮತ್ತು ಯಮ್ಕೇಶ್ವರ್ ಎಂಬ ಮೂರು ಹಳ್ಳಿಗಳಲ್ಲಿ ಆಯಾ ಮನೆಗಳ ಹೆಣ್ಣು ಮಕ್ಕಳ ಹೆಸರು ಬರೆದ ನೂರಾರು ನಾಮಫಲಕಗಳನ್ನು ವಿತರಿಸಿದೆ.

ಆರತಿ ನಿವಾಸದ ಆರತಿಯು ಆಶಾ ಕಾರ್ಯಕರ್ತೆ ಶೋಭಾರ ಮೂರು ಮಕ್ಕಳಲ್ಲಿ ಎರಡನೆಯವಳು. ಇವಳು ಸೋಷಿಯಲಾಜಿಯಲ್ಲಿ ಮಾಸ್ಟರ‍್ಸ್ ಮಾಡುತ್ತಿದ್ದಾಳೆ. ಇವಳ ಅಕ್ಕ ಮನೀಶಾ ೧೨ನೇ ತರಗತಿ ತನಕ ಓದಿ ಕೆಲಸ ಹುಡುಕುತ್ತಿದ್ದರೆ, ಕೊನೆಯವಳು ಶಿವಾನಿ ಗ್ರ್ಯಾಜುಯೇಷನ್ ಮಾಡುತ್ತಿದ್ದಾಳೆ. “ಜಿಲ್ಲಾಡಳಿತ ಈ ನಾಮಫಲಕ ಕೊಟ್ಟಾಗ ಆರತಿ ಎಷ್ಟು ಕುಣಿದಾಡಿದಳೆಂದರೆ, ಅವಳೇ ಗೋಡೆಗೆ ಮೊಳೆ ಹೊಡೆದು ತನ್ನ ಕೈಯಾರೆ ನಾಮಫಲಕವನ್ನು ನೇತು ಹಾಕಿದಳು” ಎಂದು ಶೋಭಾ ಖುಷಿಯಿಂದ ಹೇಳುತ್ತಾರೆ. ಹೀಗೆಯೇ, ಇದೇ ಪೌರಿ ಘರ್ವಾಲ್ ಜಿಲ್ಲೆಯ ಪೌರಿ ಬ್ಲಾಕಿನ ಮಲ್ಲಿ ಎಂಬ ಹಳ್ಳಿಯ ರಿಕ್ಷಾ ಚಾಲಕ ಮುಕೇಶ್ ಕುಮಾರ್ ಮತ್ತು ಉಷಾ ದೇವಿ ದಂಪತಿಗಳ ಒಂದಸ್ತಿನ ಮನೆಯ ಎದುರು ಗೋಡೆಯಲ್ಲಿ ನೇತಾಡುವ ‘ಸಿಮ್ರಾನ್ ನಿವಾಸ್’ ಎಂಬುವುದು ಅವರ ನಾಲ್ವರು ಮಕ್ಕಳಲ್ಲಿ ಒಬ್ಬಳಾದ ಸಿಮ್ರಾನ್‌ಳ ಹೆಸರು.

ಆರತಿ ನಿವಾಸದ ಆರತಿಯು ಆಶಾ ಕಾರ್ಯಕರ್ತೆ ಶೋಭಾರ ಮೂರು ಮಕ್ಕಳಲ್ಲಿ ಎರಡನೆಯವಳು. ಇವಳು ಸೋಷಿಯಲಾಜಿಯಲ್ಲಿ ಮಾಸ್ಟರ‍್ಸ್ ಮಾಡುತ್ತಿದ್ದಾಳೆ. ಇವಳ ಅಕ್ಕ ಮನೀಶಾ ೧೨ನೇ ತರಗತಿ ತನಕ ಓದಿ ಕೆಲಸ ಹುಡುಕುತ್ತಿದ್ದರೆ, ಕೊನೆಯವಳು ಶಿವಾನಿ ಗ್ರ್ಯಾಜುಯೇಷನ್ ಮಾಡುತ್ತಿದ್ದಾಳೆ. “ಜಿಲ್ಲಾಡಳಿತ ಈ ನಾಮಫಲಕ ಕೊಟ್ಟಾಗ ಆರತಿ ಎಷ್ಟು ಕುಣಿದಾಡಿದಳೆಂದರೆ, ಅವಳೇ ಗೋಡೆಗೆ ಮೊಳೆ ಹೊಡೆದು ತನ್ನ ಕೈಯಾರೆ ನಾಮಫಲಕವನ್ನು ನೇತು ಹಾಕಿದಳು” ಎಂದು ಶೋಭಾ ಖುಷಿಯಿಂದ ಹೇಳುತ್ತಾರೆ.

× Chat with us