ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ: ಹಳೆ ಮೈಸೂರಿಗರಿಗೆ ವರದಾನ

ರಾಮನಗರ: ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ‌ಸಚಿವರಾದ ನಾರಾಯಣಗೌಡ ತಿಳಿಸಿದ್ದಾರೆ.

ಚನ್ನಪಟ್ಟಣದಲ್ಲಿ ರಾಮನಗರ-ಚನ್ನಪಟ್ಟಣ ಅವಳಿ ನಗರದ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್‌ನಿಂದ ಆರ್ಥಿಕ ನೆರವು ದೊರೆತಿದೆ.

ಮೂರು ತಿಂಗಳೊಳಗೆ ಶಂಕುಸ್ಥಾಪನೆ

ರಾಮನಗರ ರೇಷ್ಮೆ ಮಾರುಕಟ್ಟೆಗೆ ರಾಜ್ಯದ ಹಲವು ಜಿಲ್ಲೆಗಳಿಂದ ರೇಷ್ಮೆಗೂಡನ್ನು ತೆಗೆದುಕೊಂಡು ರೈತರು ಬರುತ್ತಾರೆ. ಆದರೆ, ಹಲವು ವರ್ಷಗಳಿಂದ ರೇಷ್ಮೆ ಮಾರುಕಟ್ಟೆ ಚಿಕ್ಕ ಜಾಗದಲ್ಲಿರುವ ಕಾರಣ ಚನ್ನಪಟ್ಟಣಕ್ಕೆ ಶಿಫ್ಟ್ ಮಾಡಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗುತ್ತದೆ. ಇದರಿಂದ ರೇಷ್ಮೆ ಬೆಳೆಗಾರರಿಗೆ ಅನುಕೂಲ ಆಗಲಿದೆ. ಇದಕ್ಕಾಗಿ ನಬಾರ್ಡ್ ‌ನಿಂದ 75 ಕೋಟಿ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಮೂರು ತಿಂಗಳೊಳಗೆ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಚಿವ ನಾರಾಯಣಗೌಡ ಅವರು ತಿಳಿಸಿದ್ದಾರೆ.

ಹೈಟೆಕ್ ಮಾರುಕಟ್ಟೆ ನಿರ್ಮಾಣದಿಂದ ಹಲವರಿಗೆ ಉದ್ಯೋಗ

ಸದ್ಯ ರಾಮನಗರ ಮಾರುಕಟ್ಟೆಗೆ ಪ್ರತಿನಿತ್ಯ 40-50 ಟನ್ ರೇಷ್ಮೆ ಗೂಡು ಬರುತ್ತಿದ್ದು, ಹೈಟೆಕ್ ಮಾರುಕಟ್ಟೆ ನಿರ್ಮಾಣದ ಬಳಿಕ 100 ಟನ್‌ ಗೂ ಅಧಿಕ ರೇಷ್ಮೆಗೂಡು ಬರುವ ನಿರೀಕ್ಷೆ ಇದೆ. ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆಯನ್ನು ಮತ್ತಷ್ಟು ಹೈಟೆಕ್ ಮಾಡುವುದರಿಂದ ಹಲವರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.